ಅಬ್ಬಾ.. ಕೊನೆಗೂ ನೀತಿ ಸಂಹಿತೆ ಸಡಿಲ!

>

-ವೇಣುವಿನೋದ್ ಕೆ.ಎಸ್. ಮಂಗಳೂರು
ಸರ್ಕಾರಿ ಕೆಲಸಗಳು ಸರಿಯಾಗಿ ನಡೆಯದೆ ಕಂಗೆಟ್ಟಿದ್ದವರು ಇಂದಿನಿಂದ ನಿಟ್ಟುಸಿರು ಬಿಡಬಹುದು…
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಘೋಷಣೆಯಾದ ಬಳಿಕ ಜಾರಿಯಾಗಿದ್ದ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಆಚರಿಸಲ್ಪಟ್ಟಿದ್ದು, ಗುರುವಾರ ನಡೆದಿರುವ ಮತದಾನದೊಂದಿಗೆ ಒಂದಷ್ಟು ಸಡಿಲಗೊಳ್ಳಲಿದೆ.

ಇದುವರೆಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ತೋಟಗಾರಿಕಾ ಇಲಾಖೆ ಸೇರಿದಂತೆ ಪ್ರಮುಖ ಜಿಲ್ಲಾ/ತಾಲೂಕು/ಹೋಬಳಿ ಕೇಂದ್ರಗಳ ಸರ್ಕಾರಿ ಕಚೇರಿಗಳು, ಮಂಗಳೂರು ಮನಪಾ ಕಚೇರಿಗೆ ತೆರಳಿದಾಗ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಇದ್ದಾರೆ, ಸದ್ಯಕ್ಕೆ ಸಿಗುವುದಿಲ್ಲ ಎಂಬ ಉತ್ತರವೇ ಬರುತ್ತಿತ್ತು. ಹಲವು ರೀತಿಯ ಚುನಾವಣಾ ಕರ್ತವ್ಯಗಳಿಗೆ ಅವರನ್ನು ನಿಯೋಜಿಸಲಾಗಿತ್ತು.

ಹಲವು ತಂಡಗಳು ಇಲ್ಲ: ಏ.18ರಿಂದಲೇ ದ.ಕ. ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಥಿರ ಸರ್ವೇಕ್ಷಣಾ ತಂಡ ಚೆಕ್‌ಪೋಸ್ಟ್(ಸ್ಟಾಟಿಕ್ ಸರ್ವೆಲೆನ್ಸ್)ಗಳನ್ನು ಬರ್ಖಾಸ್ತುಗೊಳಿಸಲಾಗುತ್ತದೆ.
ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳೆಲ್ಲ ಮರಳಿ ತಮ್ಮ ಮಾತೃ ಇಲಾಖೆ ಕರ್ತವ್ಯಕ್ಕೆ ಮರಳಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 72 ಫ್ಲೈಯಿಂಗ್ ಸ್ಕ್ವಾಡ್‌ಗಳಿದ್ದು, ಅದರಲ್ಲಿ 172 ಅಧಿಕಾರಿ-ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಿದೆ. ಸ್ಥಿರ ಸರ್ವೇಕ್ಷಣಾ ತಂಡದಲ್ಲೂ 138ರಷ್ಟು ಮಂದಿ ಕಾರ್ಯನಿರ್ವಹಿಸಿದ್ದಾರೆ. ಇವರೆಲ್ಲರೂ ಮತ್ತೆ ತಮ್ಮ ಸ್ವಕೆಲಸಕ್ಕೇ ಮರಳಲಿದ್ದು ಸಾರ್ವಜನಿಕರ ಸೇವೆಗೆ ಲಭ್ಯರಾಗುವ ನಿರೀಕ್ಷೆ ಇದೆ.

ಮೇ 29ರ ವರೆಗೂ ನೀತಿಸಂಹಿತೆ
ಮತದಾನ ಮುಗಿದರೂ ನೀತಿ ಸಂಹಿತೆ ಪೂರ್ಣವಾಗಿ ರದ್ದಾಗುವುದಿಲ್ಲ, ಮೇ 23ರಂದು ಫಲಿತಾಂಶ ಬರಲಿದ್ದು, 29ಕ್ಕೆ ನೀತಿ ಸಂಹಿತೆ ಕೊನೆಗೊಳ್ಳಲಿದೆ. ಏ.23ರಂದು ರಾಜ್ಯದಲ್ಲಿ ಎರಡನೇ ಸುತ್ತಿನ ಚುನಾವಣೆ ಉಳಿದ 14 ಕ್ಷೇತ್ರಗಳಿಗೆ ನಡೆಯಲಿದೆ. ಹಾಗಾಗಿ ಆ ಕ್ಷೇತ್ರಗಳಲ್ಲಿ ಹೆಚ್ಚು ಬಿಗಿಯಾಗಿ ಇರಲಿದೆ. ದ.ಕ. ಜಿಲ್ಲೆಯಲ್ಲಿ ಸಡಿಲಿಕೆಯಾಗಲಿದೆ. ಸ್ಟಾಟಿಕ್ ಸರ್ವೆಲೆನ್ಸ್ ಚೆಕ್‌ಪೋಸ್ಟ್‌ಗಳು ರದ್ದಾದರೂ ಇತರ ಇಲಾಖಾ ಚೆಕ್‌ಪೋಸ್ಟ್‌ಗಳು ಎಂದಿನಂತೆಯೇ ಮುಂದುವರಿಯಲಿವೆ.

ಕೆಲವು ಕೆಲಸಕ್ಕೆ ಅಡ್ಡಿಯಿಲ್ಲ
ಇದುವರೆಗೆ ಚುನಾವಣೆ ಕಾರಣದಿಂದ ತಡೆಹಿಡಿಯಲಾಗಿದ್ದ ಹಲವು ರೀತಿಯ ಕಾಮಗಾರಿಗಳು, ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರಿನ ಕುರಿತ ಕೆಲಸಗಳು, ಮಳೆಗಾಲದ ಪೂರ್ವ ಆಗಲೇಬೇಕಿರುವ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಕರೆದು ಪ್ರಗತಿ ಪರಿಶೀಲನಾ ಸಭೆಗಳನ್ನು ಮಾಡುವುದಕ್ಕೆ ನಿರ್ಬಂಧ ಇರಲಿದೆ. ‘ಚುನಾವಣೆ ಪೂರ್ಣಗೊಂಡಿರುವ ಭಾಗಗಳಲ್ಲಿ ಯಾವ ರೀತಿಯ ಕೆಲಸ ಮಾಡಬಹುದು, ಎಷ್ಟರ ಮಟ್ಟಿಗೆ ಸಡಿಲಿಕೆ ಇರುತ್ತದೆ ಎನ್ನುವ ಕುರಿತು ಚುನಾವಣಾ ಆಯೋಗದಿಂದ ಮಾರ್ಗಸೂಚಿ ಬರುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಎಷ್ಟಿದ್ದಾರೆ ಅಧಿಕಾರಿಗಳು? 

  • ಸೆಕ್ಟರ್ ಅಧಿಕಾರಿಗಳು- 169
  • ಸ್ಥಿರ ಸರ್ವೇಕ್ಷಣಾ ತಂಡ- 138
  • ಫ್ಲೈಯಿಂಗ್ ಸ್ಕ್ವಾಡ್- 120
  • ಮಾದರಿ ನೀತಿ ಸಂಹಿತೆ- 8
  • ಅಕೌಂಟಿಂಗ್ ತಂಡ- 16
  • ವಿಡಿಯೋ ವೀಕ್ಷಣಾ ತಂಡ- 24

Leave a Reply

Your email address will not be published. Required fields are marked *