More

  ಕೊನೆಗೂ ಪಾಕ್ ಚುನಾವಣಾ ಫಲಿತಾಂಶ ಪ್ರಕಟ; ಯಾರಿಗೂ ಬರದ ಬಹುಮತ

  ಲಾಹೋರ್: ಪಾಕಿಸ್ತಾನದಲ್ಲಿ ಗುರುವಾರ ನಡೆದ ಚುನಾವಣೆಯ ಮತ ಎಣಿಕೆ ಎರಡು ದಿನಗಳಿಗೂ ಅಧಿಕ ಕಾಲಾವಧಿಗೆ ನಡೆದಿದ್ದು, ಕೊನೆಗೂ ಭಾನುವಾರ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಪಾಕಿಸ್ತಾನ ಚುನಾವಣಾ ಆಯೋಗವು ಚುನಾವಣೆ ನಡೆದ 265 ಕ್ಷೇತ್ರಗಳ ಪೈಕಿ 264 ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಿದೆ.

  ಅಕ್ರಮ ಆರೋಪದ ಮೇರೆಗೆ ಪಂಜಾಬ್ ಪ್ರಾಂತ್ಯದ ಖುಷಬ್​ನ ಎನ್​ಎ-88 ಕ್ಷೇತ್ರದ ಫಲಿತಾಂಶ ತಡೆ ಹಿಡಿಯಲಾಗಿದೆ. 266 ಕ್ಷೇತ್ರಗಳ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಭ್ಯರ್ಥಿಯೊಬ್ಬರ ನಿಧನದ ಹಿನ್ನೆಲೆಯಲ್ಲಿ ಒಂದು ಕ್ಷೇತ್ರದ ಚುನಾವಣೆ ನಡೆದಿರಲಿಲ್ಲ.

  ಜೈಲಿನಲ್ಲಿರುವ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ 101 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಪಿಟಿಐ ಪಕ್ಷಕ್ಕೆ ಅಧಿಕೃತವಾಗಿ ಚುನಾವಣೆಗೆ ಸ್ಪರ್ಧಿಸಲು ಆಯೋಗ ಅವಕಾಶ ನೀಡದ್ದರಿಂದ ಈ ಪಕ್ಷದ ಅಭ್ಯರ್ಥಿಗಳು ಪಕ್ಷದ ಲಾಂಛನ ಬಳಸದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರು.

  ಮೂರು ಸಲ ಪ್ರಧಾನಿ ಆಗಿರುವ ನವಾಜ್ ಷರೀಪ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷ 75 ಸ್ಥಾನಗಳನ್ನು ಗಳಿಸಿದೆ. ಈ ಮೂಲಕ ಇದು ತಾಂತ್ರಿಕವಾಗಿ ಅತ್ಯಧಿಕ ಸ್ಥಾನ ಗಳಿಸಿದ ಪಕ್ಷ ಎನಿಸಿಕೊಂಡಿದೆ. ಬಿಲಾವಲ್ ಝುರ್ದಾರಿ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಗಳಿಸಿದೆ. ಕರಾಚಿ ಮೂಲದ ಮುಟ್ಟಾಹಿದ ಖ್ವಾಮಿ ಮೂವ್​ವೆುಂಟ್ ಪಾಕಿಸ್ತಾನ್ (ಎಂಕ್ಯೂಎಂ-ಪಿ) 17 ಸ್ಥಾನಗಳನ್ನು ಗಳಿಸಿದೆ. ಉಳಿದ 12 ಸ್ಥಾನಗಳನ್ನು ಇತರ ಸಣ್ಣ ಪಕ್ಷಗಳು ಗಳಿಸಿವೆ.

  ಮೂರೂ ಪಕ್ಷಗಳಿಂದ ಅಧಿಕಾರಕ್ಕಾಗಿ ಕಸರತ್ತು: ಸರ್ಕಾರ ರಚನೆಗೆ 133 ಸ್ಥಾನಗಳು ಬೇಕಾಗಿವೆ. ಅಲ್ಲದೆ ಮಹಿಳೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾದ ಕ್ಷೇತ್ರಗಳೂ ಸೇರಿದರೆೆ ಒಟ್ಟಾರೆ 336 ಕ್ಷೇತ್ರಗಳಲ್ಲಿ ಬಹುಮತಕ್ಕಾಗಿ 169 ಸ್ಥಾನಗಳು ಬೇಕಾಗುತ್ತವೆ. ಆದರೆ ಯಾರಿಗೂ ಬಹುಮತ ಬಂದಿಲ್ಲ. ಪಾಕಿಸ್ತಾನದ ಜನತೆ ತಮ್ಮ ಇಚ್ಛೆಯನ್ನು ಬರೀ ಉಚ್ಚರಿಸಿಲ್ಲ, ಬದಲಿಗೆ ಕೂಗಿ ಹೇಳಿದ್ದಾರೆ. ಎಲ್ಲ ಪಕ್ಷಗಳೂ ಜನಾದೇಶವನ್ನು ಗೌರವಿಸಿ ಎಂದು ಪಾಕಿಸ್ತಾನದ ಅಧ್ಯಕ್ಷ, ಪಿಟಿಐ ಪಕ್ಷದ ಡಾ.ಅರಿಫ್ ಅಲ್ವಿ ಹೇಳಿದ್ದಾರೆ. ಯಾರಿಗೂ ಸ್ಪಷ್ಟ ಬಹುಮತ ಬರದ್ದರಿಂದ ಪಾಕಿಸ್ತಾನದ ಪ್ರಮುಖ ಪಕ್ಷಗಳಾದ ಪಿಟಿಐ, ಪಿಎಂಎಲ್-ಎನ್, ಪಿಪಿಪಿ ಪಕ್ಷಗಳು ಸರ್ಕಾರ ರಚಿಸುವ ನಿಟ್ಟಿನಲ್ಲಿ ಕಸರತ್ತು ಆರಂಭಿಸಿವೆ. ಮೈತ್ರಿ ಸರ್ಕಾರ ರಚನೆ ಮೂರೂ ಪಕ್ಷಗಳಿಗೆ ಇರುವ ಆಯ್ಕೆ ಆಗಿದೆ.

  ಹೈಕೋರ್ಟ್​ಗಳಲ್ಲಿ ಅರ್ಜಿಗಳ ರಾಶಿ: ಪಾಕಿಸ್ತಾನದ ಚುನಾವಣಾ ಫಲಿತಾಂಶದ ಅಕ್ರಮಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಗಳು ಸಲ್ಲಿಕೆ ಆಗಿವೆ. ಇಮ್ರಾನ್​ಖಾನ್​ನ ಪಿಟಿಐ ಬೆಂಬಲಿತ ಅಭ್ಯರ್ಥಿಗಳು ತಾವು ಸೋತ ಕಡೆಯ ಫಲಿತಾಂಶಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದು, ದೊಡ್ಡಮಟ್ಟದಲ್ಲಿ ಪ್ರಕರಣಗಳು ದಾಖಲಾಗಿವೆ. ಲಾಹೋರ್, ಇಸ್ಲಾಮಾಬಾದ್, ಸಿಂಧ್ ಹೈಕೋರ್ಟ್​ಗಳಲ್ಲಿ ಈ ಅರ್ಜಿಗಳು ಸಲ್ಲಿಕೆ ಆಗಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts