ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆ (ಅರ್ಬನ್ ಪ್ರಾಪರ್ಟಿ ಓನರ್‌ಷಿಪ್ ರೆಕಾರ್ಡ್- ಯುಪಿಒಆರ್) ಕಡ್ಡಾಯ ಆದೇಶವನ್ನು ತಾತ್ಕಾಲಿಕ ಸಡಿಲಿಕೆ ಮಾಡಿ ಸರ್ಕಾರ ಅಧಿಕೃತವಾಗಿ ಗುರುವಾರ ಮರು ಆದೇಶ ಹೊರಡಿಸಿದೆ. ಈ ಪ್ರಕಾರ ಮೇ 15ರ ತನಕ ಪ್ರಾಪರ್ಟಿ ಕಾರ್ಡ್ ಇಲ್ಲದೆ ಈ ಹಿಂದಿನ ವ್ಯವಸ್ಥೆಯಲ್ಲಿ ಆಸ್ತಿ ನೋಂದಣಿ ಮಾಡಬಹುದು.

ೆ.1ರಿಂದ ಕಡ್ಡಾಯ ಜಾರಿಗೆ ಬಂದ ಬಳಿಕ ಸಾರ್ವಜನಿಕರಿಗಾದ ತೊಂದರೆಯನ್ನು ಪರಿಗಣಿಸಿ ಕಡ್ಡಾಯ ಆದೇಶವನ್ನು ತಾತ್ಕಾಲಿಕ ಸಡಿಲಿಕೆ ಮಾಡುವ ಬಗ್ಗೆ ರಾಜ್ಯ ಕಂದಾಯ ಇಲಾಖೆ ನಿರ್ಧಾರ ಪ್ರಕಟಿತ್ತು. ಆದರೆ ಉಪನೋಂದಣಿ ಕಚೇರಿಗೆ ಈ ಬಗ್ಗೆ ಯಾವುದೇ ಆದೇಶ ಬಾರದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡುವ ಬಗ್ಗೆ ಕಳೆದೊಂದು ವರ್ಷದಿಂದ ಚರ್ಚೆಗಳು ನಡೆಯುತ್ತಿತ್ತು. ೆ.1ರಿಂದ ಕಡ್ಡಾಯಗೊಳಿಸಿ, ಮುಂದಕ್ಕೆ ಪ್ರಾಪರ್ಟಿ ಕಾರ್ಡ್ ಇಲ್ಲದೆ ಆಸ್ತಿ ನೋಂದಣಿ ಇಲ್ಲ ಎಂಬ ಆದೇಶ ಹೊರಡಿಸಲಾಗಿತ್ತು.

ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಶೇ.40ರಷ್ಟು ಕೂಡ ಪ್ರಾಪರ್ಟಿ ಕಾರ್ಡ್ ವಿತರಣೆ ಆಗದ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಮಾಡಿಸುವ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಸಚಿವರು, ಶಾಸಕರ ಆಗ್ರಹದ ಮೇರೆಗೆ ಕಂದಾಯ ಇಲಾಖೆಯ ಸರ್ವೇ, ಭೂ ದಾಖಲೆಗಳು ಹಾಗೂ ಸೆಟ್ಲ್‌ಮೆಂಟ್ ಆಯುಕ್ತ ಮನೀಶ್ ಮುದ್ಗೀಲ್ ಮಂಗಳೂರಿಗೆ ಆಗಮಿಸಿ ಜಿಲ್ಲಾಧಿಕಾರಿ ಜತೆಗೆ ವಿಶೇಷ ಸಭೆ ನಡೆಸಿದ್ದರು.

ಪ್ರಾಪರ್ಟಿ ಕಾರ್ಡ್ ಕುರಿತಂತೆ ಯುಪಿಒಆರ್ ಹಾಗೂ ರಿಜಿಸ್ಟ್ರೇಶನ್ ಮಧ್ಯೆ ಸಾಫ್ಟ್‌ವೇರ್‌ನಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಡ್ಡಾಯ ಆದೇಶವನ್ನು ಹಿಂದಕ್ಕೆ ಪಡೆದು ಪ್ರಾಪರ್ಟಿ ಕಾರ್ಡ್ ಇಲ್ಲದೆಯೂ ಆಸ್ತಿ ನೋಂದಣಿಗೆ ಅವಕಾಶ ನೀಡಬಹುದು ಎಂದು ತಿಳಿಸಿದ್ದರು. ಆಯುಕ್ತರು ಬೆಂಗಳೂರಿಗೆ ಹೋದ ಬಳಿಕ ಸರ್ಕಾರಿ ಆದೇಶ ಹೊರಡಿಸಲಿದ್ದು, ಆ ಬಳಿಕ ನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದರು.

ಆದರೆ ಮಂಗಳೂರಿನಲ್ಲಿ ಸಭೆ ನಡೆಸಿ ಕಡ್ಡಾಯ ಆದೇಶ ಹಿಂದಕ್ಕೆ ಪಡೆದು ವಾರವಾದರೂ ಅಧಿಕೃತ ಸರ್ಕಾರಿ ಆದೇಶ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಪ್ರಾಪರ್ಟಿ ಕಾರ್ಡ್ ಇಲ್ಲದೆ ನೋಂದಣಿಗೆ ಅವಕಾಶ ಆಗುತ್ತಿರಲಿಲ್ಲ. ಸರ್ಕಾರದಿಂದ ಅಧಿಕೃತ ಆದೇಶ ಬಂದರೆ ಮಾತ್ರ ನೋಂದಣಿಗೆ ಅವಕಾಶ ಸಾಧ್ಯ ಎಂದು ನೋಂದಣಿ ಕಚೇರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಹೇಳುತ್ತಿದ್ದರು.

ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ: ಯುಪಿಒಆರ್ ವೆಬ್‌ಸೈಟ್ 10 ದಿನಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ತಾಂತ್ರಿಕ ಸಮಸ್ಯೆ ಪರಿಹಾರವಾಗದೆ ಯಾವುದೇ ಅರ್ಜಿ ಅಪ್‌ಲೋಡ್ ಮಾಡಲು ಮತ್ತು ಅಪ್‌ಲೋಡ್ ಆದ ಅರ್ಜಿಗಳ ಮುಂದಿನ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ನೂರಾರು ಅರ್ಜಿಗಳು ಅಪ್‌ಲೋಡ್ ಆಗದೆ ನಗರ ಆಸ್ತಿ ನೋಂದಣಿ ಕಚೇರಿಯಲ್ಲಿ ಬಾಕಿ ಉಳಿದಿವೆ. ವೆಬ್‌ಸೈಟ್ ತಾಂತ್ರಿಕ ಸಮಸ್ಯೆಯಿಂದಾಗಿ ಕಚೇರಿಗೆ ಬರುವ ಜನಸಾಮಾನ್ಯರಿಗೆ ಸಿಬ್ಬಂದಿ ಉತ್ತರ ಕೊಡದ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಪ್ರಾಪರ್ಟಿ ಕಾರ್ಡ್‌ಗೆ ಅರ್ಜಿ ಹಾಗೂ ದಾಖಲೆ ಪಡೆಯುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ. ಮರು ಆದೇಶದ ಪ್ರಕಾರ ಮೇ 15ರ ತನಕ ಆಸ್ತಿ ನೋಂದಣಿಗೆ ಮಾತ್ರ ಪ್ರಾಪರ್ಟಿ ಕಾರ್ಡ್‌ನ ಅವಶ್ಯಕತೆ ಇರುವುದಿಲ್ಲ. ಜನದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಪಾಲಿಕೆ ಕಟ್ಟಡದಲ್ಲಿ ಹೆಚ್ಚುವರಿ ನೋಂದಣಿ ಕಚೇರಿ ತೆರೆದು ಸಿಬ್ಬಂದಿ ನಿಯೋಜಿಸಿ ವ್ಯವಸ್ಥೆ ಕಲ್ಪಿಸಲಾಗುವುದು.
– ಶಶಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ