More

    ನಾಳೆ ಕೊನೆಗೊಳ್ಳಲಿದೆ ಭಾರತ್​ ಜೋಡೋ ಯಾತ್ರೆ​: ಸಮಾರೋಪ ಸಮಾರಂಭದಲ್ಲಿ 12 ಪ್ರತಿಪಕ್ಷಗಳು ಭಾಗಿ

    ನವದೆಹಲಿ: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ದೇಶದ 12 ಪ್ರತಿಪಕ್ಷಗಳು ಭಾಗಿಯಾಗಲಿವೆ. ಒಟ್ಟು 21 ಪ್ರತಿಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕೆಲವರು ಭದ್ರತಾ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 12 ಪಕ್ಷಗಳ ನಾಯಕರು ರಾಹುಲ್​ ಗಾಂಧಿ ಸೇರಿದಂತೆ ಕಾಂಗ್ರೆಸ್​ ನಾಯಕರ ಜೊತೆ ಬೃಹತ್​ ವೇದಿಕೆ ಹಂಚಿಕೊಳ್ಳಲಿದ್ದಾರೆ.

    ತೃಣಮೂಲ ಕಾಂಗ್ರೆಸ್​, ಸಮಾಜವಾದಿ ಪಾರ್ಟಿ ಮತ್ತು ಟಿಡಿಪಿ ಸೇರಿದಂತೆ ಕೆಲವು ಪಕ್ಷಗಳು ಸಮಾರೋಪ ಸಮಾರಂಭಕ್ಕೆ ಗೈರು ಹಾಜರಾಗಲಿವೆ.

    ಎಂ.ಕೆ. ಸ್ಟಾಲಿನ್ ನೇತೃತ್ವದ ಡ್ರಾವಿಡ ಮುನ್ನೇತ್ರ ಕಳಗಂ​ (ಡಿಎಂಕೆ), ಶರದ್​ ಪವರ್​ ಅವರ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ), ತೇಜಸ್ವಿ ಯಾದವ್​ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ), ನಿತೀಶ್​ ಕುಮಾರ್​ ಅವರ ಜನತಾ ದಳ (ಸಂಯುಕ್ತ), ಉದ್ಧವ್​ ಠಾಕ್ರೆ ಅವರ ಶಿವಸೇನಾ, ಸಿಪಿಐ (ಎಂ), ಸಿಪಿಐ, ವಿದುಥಲೈ ಚಿರುಥೈಗಲ್​ ಕಟ್ಚಿ (ವಿಸಿಕೆ), ಕೇರಳ ಕಾಂಗ್ರೆಸ್​, ಫಾರೂಖ್​ ಅಬ್ಧುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀ ನ್ಯಾಷನಲ್​ ಕಾನ್ಫರೆನ್ಸ್​, ಮೆಹಬೂಬಾ ಮಫ್ತಿ ಅವರ ಜಮ್ಮು ಮತ್ತು ಕಾಶ್ಮೀ ಪೀಪಲ್ಸ್​ ಡೆಮಾಕ್ರೆಟಿಕ್​ ಪಾರ್ಟಿ (ಪಿಡಿಪಿ) ಮತ್ತು ಶಿಬು ಸೊರೆನ್​ ಅವರ ಜಾರ್ಖಂಡ್​ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಗಳ ಮುಖಂಡರು ಶ್ರೀನಗರದಲ್ಲಿ ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಭದ್ರತಾ ಉಲ್ಲಂಘನೆಯ ಆರೋಪದ ಕಾರಣ ಶುಕ್ರವಾರ ರದ್ದುಗೊಂಡ ನಂತರ ಆವಂತಿಪೋರಾದ ಚೆರ್ಸೂ ಗ್ರಾಮದಿಂದ ಶನಿವಾರ ಮತ್ತೆ ಆರಂಭವಾದ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹೋದರ ರಾಹುಲ್ ಗಾಂಧಿ ಜೊತೆ ಮತ್ತೆ ಹೆಜ್ಜೆ ಹಾಕಿದರು. ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಅವಂತಿಪೋರಾದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡರು.

    ಯಾತ್ರೆಯ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಭದ್ರತಾ ಲೋಪದ ಕುರಿತ ಆರೋಪಗಳನ್ನು ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ಶನಿವಾರ ತಳ್ಳಿಹಾಕಿದರು ಮತ್ತು ಪ್ರಚಾರದ ಸಮಯದಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಹೇಳಿದರು.

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದು, ಜನವರಿ 27 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ “ಭದ್ರತಾ ಲೋಪ” ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವೈಯಕ್ತಿಕ ಮಧ್ಯಸ್ಥಿಕೆ ವಹಿಸಲು ಅಮಿತ್​ ಷಾ ಅವರನ್ನು ಕೋರಿದ್ದಾರೆ. ಜನವರಿ 30 ರಂದು ಶ್ರೀನಗರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಹಲವು ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಇತರ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಸೂಕ್ತ ಭದ್ರತೆ ನೀಡುವಂತೆ ಅಮಿತ್​ ಷಾ ಅವರನ್ನು ಖರ್ಗೆ ಕೋರಿದ್ದಾರೆ.

    ರಕ್ಷಣಾ ವಿಚಾರದಲ್ಲಿ ನೀವು ಖುದ್ದಾಗಿ ಮಧ್ಯಪ್ರವೇಶಿಸಿ ಜನವರಿ 30 ರಂದು ಶ್ರೀನಗರದಲ್ಲಿ ನಡೆಯುವ ಯಾತ್ರೆ ಮತ್ತು ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರೆ ನಾನು ಕೃತಜ್ಞನಾಗಿರುತ್ತೇನೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ವರ್ಷ ಸೆ. 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಯಾತ್ರೆ ಆರಂಭವಾಯಿತು. ದೇಶದ ದಕ್ಷಿಣ ತುದಿಯಿಂದ ಪ್ರಾರಂಭವಾದ ಯಾತ್ರೆ ಸುಮಾರು 145 ದಿನಗಳಲ್ಲಿ 3,970 ಕಿಮೀ ಸಾಗಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ದಾಟಿ ಶ್ರೀನಗರದಲ್ಲಿ ಜನವರಿ 30 ರಂದು ಕೊನೆಗೊಳ್ಳುತ್ತದೆ. ಅಂದು ಬೃಹತ್​ ಸಮಾರೋಪ ಸಮಾರಂಭ ನಡೆಯುತ್ತದೆ. (ಏಜೆನ್ಸೀಸ್​)

    ವಿಷ್ಣು ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಅಭಿಮಾನಿಗಳ ಆರಾಧ್ಯ ದೈವನ ಭವ್ಯ ಸ್ಮಾರಕದಲ್ಲಿ ಏನೇನಿದೆ?

    ಹುತಾತ್ಮ ಯೋಧ ಹನುಮಂತರಾವ್ ಸಂಪೂರ್ಣ ಕುಟುಂಬವೇ ದೇಶ ಸೇವೆಗೆ ಸಮರ್ಪಣೆ

    ಬಾಗಲಕೋಟೆಯಲ್ಲಿ ಗೆಲುವಿನ‌ ಸರದಾರ ಎನಿಸಿಕೊಂಡ ಎತ್ತು ದಾಖಲೆ ಮೊತ್ತಕ್ಕೆ ಮಾರಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts