More

  ಬೆಂಗಳೂರಿನಲ್ಲಿ ಕಳೆಗಟ್ಟಲಿದೆ ಕರಾವಳಿ ಕಂಬಳ: ಅರಮನೆ ಮೈದಾನದಲ್ಲಿ ಕಂಬಳಕ್ಕೆ ಅಂತಿಮ ಸಿದ್ಧತೆ

  ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ (ನ.25 ಮತ್ತು 26) ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದೆ.

  ಕಂಬಳ ಕೇವಲ ಕ್ರೀಡೆಯಲ್ಲ, ಜಾನಪದ, ಸಾಂಸ್ಕೃತಿಕ ಮತ್ತು ಧಾರ್ವಿುಕ ಹಿನ್ನೆಲೆ ಹೊಂದಿರುವ ಕರಾವಳಿಯ ಮನೋರಂಜನಾ ಉತ್ಸವ. ಸುಮಾರು 700 ವರ್ಷ ಇತಿಹಾಸವುಳ್ಳ ಕಂಬಳ ಮಂಗಳೂರಿನಿಂದ ಈಗ ಬೆಂಗಳೂರಿಗೆ ಬಂದಿರುವುದು ರಾಜ ಧಾನಿಯ ಜನರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ ರೈ ಮಾಹಿತಿ ನೀಡಿದ್ದಾರೆ.

  ಖಾಸಗಿ ಹೊಟೇಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡಿನಿಂದ ಮರವಂತೆವರೆಗಿನ ಎಲ್ಲ ಸಮುದಾಯದ ಕರಾವಳಿ ಭಾಗದ 18 ಲಕ್ಷ ಜನ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರೆಲ್ಲರ ಸಂಕಲ್ಪ ಮತ್ತು ಕನಸು ‘ಬೆಂಗಳೂರು ಕಂಬಳ- ನಮ್ಮ ಕಂಬಳ’ ಕಾರ್ಯಕ್ರಮದ ಮೂಲಕ ಸಾಕಾರಗೊಂಡಿದೆ ಎಂದರು. ಬೆಂಗಳೂರು ಕಂಬಳಕ್ಕೆ ಕರಾವಳಿಯ 69 ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಿವೆ. ಕಂಬಳದಲ್ಲಿ ಪಾಲ್ಗೊಳ್ಳಲು 250ಕ್ಕೂ ಹೆಚ್ಚು ಕೋಣಗಳ ಮಾಲೀಕರು ಹೆಸರು ನೋಂದಾಯಿಸಿದ್ದರು. ಅಂತಿಮವಾಗಿ 200 ಜೋಡಿ ಆಯ್ಕೆ ಮಾಡಲಾಗಿದ್ದು, ಎಲ್ಲ ಸಮುದಾಯದ ಮಾಲೀಕರು ಇದರಲ್ಲಿ ಒಳಗೊಂಡಿದ್ದಾರೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದರು.

  ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿ ಅನಾವರಣ
  ಕಂಬಳದ ಜತೆಗೆ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯಕ್ಷಗಾನ, ಹುಲಿವೇಷ, ವಿವಿಧ ಜಾನಪದ ನೃತ್ಯಗಳು ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ನಿರ್ದೇಶಕ ಗುರುಕಿರಣ್ ಮುಂದಾಳತ್ವದಲ್ಲಿ ನಡೆಯಲಿವೆ. ವಿಶೇಷವಾಗಿ 180 ಫುಡ್ ಸ್ಟಾಲ್​ಗಳಿಗೆ ಅವಕಾಶ ನೀಡಲಾಗಿದ್ದು, ರಾಜಧಾನಿ ಜನರಿಗೆ ಕರಾವಳಿಯ ತಿಂಡಿ-ತಿನಿಸುಗಳು ಲಭ್ಯವಾಗಲಿವೆ. 24ರಂದು ತುಳುಕೂಟದ ಸುವರ್ಣ ಮಹೋತ್ಸವ ಅಂಗವಾಗಿ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

  ಖ್ಯಾತನಾಮರ ಆಗಮನ ನಿರೀಕ್ಷೆ
  ಕಂಬಳ ನಡೆಯುವ ಎರಡು ದಿವಸದಲ್ಲಿ ಅನೇಕ ಖ್ಯಾತನಾಮರು ಬರುವ ನಿರೀಕ್ಷೆಯಿದೆ. ವಾಣಿಜ್ಯ ಒಪ್ಪಂದ ಇಲ್ಲದಿರುವುದರಿಂದ ಸೆಲೆಬ್ರೆಟಿಗಳ ಆಗಮನದ ಬಗ್ಗೆ ನಿಖರ ವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಅನುಷ್ಕಾ ಶೆಟ್ಟಿ ಬರುವುದು ಖಾತ್ರಿಯಾಗಿದ್ದು, ಕನ್ನಡ ಚಿತ್ರರಂಗದ ಅನೇಕರು ಆಗಮಿಸಲಿದ್ದಾರೆ. ಜತೆಗೆ ಸಿಎಂ, ಡಿಸಿಎಂ, ಮಾಜಿ ಸಿಎಂ, ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಬರಲಿದ್ದಾರೆಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.

  ಕೋಣಗಳ ಸ್ವಾಗತಕ್ಕೆ ಸಿದ್ಧತೆ
  ಗುರುವಾರ (ನ.23) ಬೆಳಗ್ಗೆ ಉಪ್ಪಿನಂಗಡಿಯಿಂದ ಹೊರಡುವ ಕೋಣಗಳು ಸಂಜೆ 4 ಗಂಟೆಗೆ ಹಾಸನಕ್ಕೆ ಬರಲಿವೆ. ಹಾಸನದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರು ಕೋಣಗಳು ಮತ್ತು ಜೊತೆಗೆ ಬಂದವರಿಗೆ ಆಹಾರ ಮತ್ತು ವಿಶ್ರಾಂತಿಯ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿಗೆ ಬರುವ ಕೋಣಗಳನ್ನು ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

  ಪ್ರತಿಷ್ಠೆಗಾಗಿ ಸ್ಪರ್ಧೆ
  ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳ ಆರೈಕೆಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಅಂತೆಯೇ ಬೆಂಗಳೂರು ಕಂಬಳಕ್ಕೆ ಬರುವ ಕೋಣಗಳ ಮಾಲೀಕರು ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಬರುತ್ತಿದ್ದಾರೆ. ಕೇವಲ ಲಾರಿ ಬಾಡಿಗೆ ಮಾತ್ರ ಸಮಿತಿ ಭರಿಸುತ್ತಿದ್ದು, ಇಲ್ಲಿ ಬಹುಮಾನದ ಮೌಲ್ಯಕ್ಕಿಂತ ಪ್ರತಿಷ್ಠೆ ಮುಖ್ಯ! ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು, ದ್ವಿತೀಯ ಬಹುಮಾನ 8 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ., ತೃತೀಯ ಬಹುಮಾನ 4 ಗ್ರಾಂ ಚಿನ್ನ ಮತ್ತು 25 ಸಾವಿರ ರೂ. ನಿಗದಿಗೊಳಿಸಲಾಗಿದೆ.

  ಕಂಬಳಕ್ಕೆ ಬನ್ನಿ ಸಿಎಂಗೆ ಆಹ್ವಾನ
  ಪುತ್ತೂರು (ದ.ಕ.):
  ಬೆಂಗಳೂರು ಅರಮನೆ ಮೈದಾನದಲ್ಲಿ 25, 26ರಂದು ನಡೆಯಲಿರುವ ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್​ಕುಮಾರ್ ರೈ ಆಮಂತ್ರಣ ಪತ್ರ ನೀಡಿ ಆಹ್ವಾನ ನೀಡಿದರು. ಶನಿವಾರ ಸಂಜೆ ನಡೆಯುವ ಮುಖ್ಯ ಸಭಾ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಲಿದ್ದಾರೆ.

  ಐತಿಹಾಸಿಕ ಕಂಬಳ, ಉತ್ಸವಕ್ಕೆ ಬರುವ ಅತಿಥಿಗಳು, ಭಾಗವಹಿಸುವ ಲಕ್ಷಾಂತರ ಕಂಬಳಾಭಿಮಾನಿಗಳ ಬಗ್ಗೆ ಸಿಎಂಗೆ ಅಶೋಕ್ ರೈ ವಿವರಣೆ ನೀಡಿದರು. ರಾಜ್ಯದ ಇತಿಹಾಸದಲ್ಲೇ ರಾಜ್ಯದ ರಾಜಧಾನಿಯಲ್ಲಿ ತುಳುನಾಡಿನ ಕಂಬಳ ಕ್ರೀಡೆ ಆಯೋಜನೆ ಮಾಡಿರುವ ಬಗ್ಗೆ ಅಶೋಕ್ ರೈ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು. ಕಂಬಳಕ್ಕೆ ಬರಲು ನಾನು ರೆಡಿಯಾಗಿದ್ದೇನೆ, ನನಗೆ ಕಂಬಳ ವೀಕ್ಷಿಸಬೇಕು, ರಾಜ್ಯದ ಜನರಿಗೂ, ರಾಜಧಾನಿಯಲ್ಲಿರುವ ದೇಶದ ನಾನಾ ರಾಜ್ಯದ ಜನತೆಗೂ, ವಿದೇಶಿ ಪ್ರವಾಸಿಗರಿಗೂ ಕಂಬಳದ ಸವಿ ಅನುಭವಿಸುವ ಯೋಗ ದೊರಕಿದೆ ಎಂದು ಸಿಎಂ ತಿಳಿಸಿದರು. ಕಂಬಳಕ್ಕೆ ಸರ್ಕಾರದ ಪೂರ್ಣಪ್ರಮಾಣದ ಬೆಂಬಲವನ್ನು ಇದೇ ಸಂದರ್ಭ ಸಿಎಂ ಘೊಷಿಸಿದರು. ಕಂಬಳಕ್ಕೆ ಪೆಟಾದವರ ಆಕ್ಷೇಪ ಇದ್ದ ಸಂದರ್ಭದಲ್ಲಿ ಅಂದು ಸಿಎಂ ಆಗಿದ್ದ ನೀವು, ನಮ್ಮ ಹೋರಾಟಕ್ಕೆ ಸಹಾಯ ಮಾಡಿದ್ದನ್ನು ಅಶೋಕ್ ರೈ ಅವರು ಸಿದ್ದರಾಮಯ್ಯ ಬಳಿ ನೆನಪಿಸಿಕೊಂಡರು.

  ಶಬ್ದಮಾಲಿನ್ಯಕ್ಕೆ ಕಡಿವಾಣ ಇರಲಿ
  ಬೆಂಗಳೂರು: ‘ಬೆಂಗಳೂರು ಕಂಬಳ’ ಉತ್ಸವ ವೇಳೆ ಜೋರು ಶಬ್ದದ ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡದಂತೆ ಸದಾಶಿವನಗರ ಪೊಲೀಸರಿಗೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಎರಡು ದಿನಗಳ ಕಂಬಳ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ. ಈ ಹಂತದಲ್ಲಿ ಶಬ್ಧಮಾಲಿನ್ಯ ತಡೆಗಟ್ಟುವಂತೆ ಪೊಲೀಸರಿಗೆ ಸದಾಶಿವನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮೊರೆ ಹೋಗಿದೆ. ಕಂಬಳದ ವೇಳೆ ಅಧಿಕ ಪ್ರಮಾಣದಲ್ಲಿ ಧ್ವನಿವರ್ಧಕ ಬಳಕೆಯಿಂದ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ತೊಂದರೆ ಆಗಲಿದೆ. ಶಬ್ದಮಾಲಿನ್ಯ ಮಾಡದಂತೆ ಆಯೋಜಕರಿಗೆ ಸೂಚಿಸಬೇಕು ಎಂದು ಸಂಘವು ಅಂಚೆ ಮೂಲಕ ಮನವಿ ಸಲ್ಲಿಸಿದೆ. ಈ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಎಸ್​ಪಿ ಕಚೇರಿಯ ಕೊಠಡಿಯಲ್ಲಿ ಏಕಾಂತದಲ್ಲಿ ಮೈಮರೆತಿದ್ದ ಪೊಲೀಸ್​ ಜೋಡಿಗೆ ಮಧ್ಯರಾತ್ರಿ ಕಾದಿತ್ತು ಶಾಕ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts