ಚಿತ್ರ: ಸಂತೋಷ ಸಂಗೀತ
ನಿರ್ದೇಶನ: ಎಸ್.ಸಿದ್ದು
ತಾರಾಗಣ: ಅರ್ನವ್ ವಿನ್ಯಾಸ್, ರಾಣಿ ವರದ್, ದೊಡ್ಡಣ್ಣ, ಅವಿನಾಶ್ ಮತ್ತಿತರರು
ಶಿವ ಸ್ಥಾವರಮಠ
ಆತ ಸಂತೋಷ್ (ಆರ್ನವ್ ವಿನ್ಯಾಸ್), ಹೋಟೆಲ್ ಉದ್ಯಮದಲ್ಲಿ ಒಳ್ಳೆಯ ಹೆಸರು ಮಾಡಿದಾತ. ನಗರದಲ್ಲಿ ಯಾವುದೇ ಕಾರ್ಯಕ್ರಮದ ಕೇಟರಿಂಗ್ ಸರ್ವೀಸ್ ಬಹುತೇಕ ಈತನ ಪಾಲು. ಸಂತೋಷ್‌ಗೆ ಸ್ಪರ್ಧಿಗಳೇ ಇಲ್ಲ ಎನ್ನುವಾಗ, ಆತನಿಗೆ ಪೈಪೋಟಿ ನೀಡಲು ಒಬ್ಬಳು ಆಗಮಿಸುತ್ತಾಳೆ. ಆಕೆಯೇ ಸಂಗೀತ (ರಾಣಿ ವರದ್). ಬಳಿಕ ಇಬ್ಬರ ನಡುವೆ ಸ್ಪರ್ಧೆ ಏರ್ಪಡುತ್ತದೆ. ಮುಂದೆ ಹೋದಂತೆ, ಕಥೆ ಬೇರೆಯದೇ ರೀತಿಯಲ್ಲಿ ತಿರುವು ಪಡೆದುಕೊಂಡು ಕಾಲೇಜು ದಿನಗಳಿಗೆ ಹೋಗುತ್ತದೆ. ಆ ದಿನಗಳಲ್ಲಿ ಸಂತೋಷ್-ಸಂಗೀತ ಇಬ್ಬರು ಕ್ಲಾಸ್‌ಮೇಟ್ಸ್. ಬಳಿಕ ಇಬ್ಬರ ನಡುವೆ ಪ್ರೀತಿ, ಮದುವೆ, ಕೊನೆಗೆ ವಿಚ್ಛೇದನ. ಇಬ್ಬರು ಸ್ಪರ್ಧಿಗಳ ನಡುವೆ ಹೇಗೆ ಪ್ರೀತಿ ಹುಟ್ಟಿತು? ಮದುವೆ ಹೇಗಾಯಿತು? ವಿಚ್ಛೇದನಕ್ಕೆ ಕಾರಣವೇನು? ಎಂಬುದನ್ನು ತಿಳಿಯಬೇಕಾದರೆ ನೀವು ‘ಸಂತೋಷ ಸಂಗೀತ’ ಸಿನಿಮಾ ವೀಕ್ಷಿಸಬೇಕು.
ನಿರ್ದೇಶಕ ಎಸ್. ಸಿದ್ದು ಸಂಬಂಧಗಳ ನಡುವಿನ ವಿಷಯವನ್ನೇ ‘ಸಂತೋಷ ಸಂಗೀತ’ದಲ್ಲಿ ನಿರೂಪಿಸಿದ್ದಾರೆ. ಕಥೆಗೆ ಇನ್ನೊಂದಿಷ್ಟು ಹೊಸತನ ನೀಡಬಹುದಿತ್ತು. ನೇರವಾಗಿ ಕಥೆ ಹೇಳುವ ಬದಲು ಒಂದಿಷ್ಟು ಡ್ರಾಮಾ ಸೃಷ್ಟಿಸಲು ಹೋಗಿ, ಗೊಂದಲ ಮಾಡಿಕೊಂಡಿದ್ದಾರೆ ಅಂತನ್ನಿಸಿದರೂ ಆಶ್ಚರ್ಯವಿಲ್ಲ. ಚಿತ್ರದಲ್ಲಿ ನಾಯಕಿ ಹೆಸರು ಮೊದಲಿಗೆ ಸಾನ್ವಿ ಎಂದಿದ್ದರೆ, ದ್ವಿತೀಯಾರ್ಧದಲ್ಲಿ ಸಂಗೀತಾ ಎಂದಿದೆ. ಆರಂಭದಲ್ಲಿ ವೇಗದಿಂದ ಸಾಗುವ ಕಥೆ, ದ್ವಿತೀಯಾರ್ಧದಲ್ಲಿ ನಿಧಾನಗತಿಯಾಗಿ ಸಾಗುತ್ತದೆ. ಅರ್ನವ್ ವಿನ್ಯಾಸ್ ನಟನೆಯಲ್ಲಿ ಇನ್ನಷ್ಟು ಮಾಗಬೇಕಿದೆ. ನಟಿ ರಾಣಿ ವರದ್ ಭಾವನೆಗಳ ದೃಶ್ಯದಲ್ಲಿ ಗಮನಸೆಳೆಯುತ್ತಾರೆ. ದೊಡ್ಡಣ್ಣ, ಅವಿನಾಶ್ ಪಾತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಲಯ ಕೋಕಿಲ, ಮಡೆನೂರು ಮನು, ಸೂರ್ಯ ಕುಂದಾಪುರ ಪಾತ್ರಗಳು ನಗಿಸುತ್ತವೆ.