More

  ಫೆ.26ರಿಂದ ಅಂತಾರಾಷ್ಟ್ರೀಯ ಸಿನಿಮೋತ್ಸವ

  ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ 12ನೇ ಚಲನಚಿತ್ರೋತ್ಸವ ಫೆ.26ರಿಂದ ಮಾ.4ರವರೆಗೆ ನಡೆಯಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.

  ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಸಿನಿಮಾದ ಸೃಜನಶೀಲ ಮುಖಗಳನ್ನು ವಿಶ್ವದ ವಿವಿಧ ರಾಷ್ಟ್ರಗಳಿಗೆ ತೋರಿಸುವುದು. ಜತೆಗೆ ವಿಶ್ವ ಸಿನಿಮಾವನ್ನು ಪರಿಚಯಿಸುವುದು ಮುಖ್ಯ ಉದ್ದೇಶವಾಗಿದ್ದು, ಈ ಚಿತ್ರೋತ್ಸವವನ್ನು ‘ಬೆಂಗಳೂರಿನಲ್ಲಿ ಜಗತ್ತು’ ಎಂದು ಬಣ್ಣಿಸಲಾಗುತ್ತದೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಏಳು ದಿನಗಳ ಕಾಲ ಸಿನಿಮೋತ್ಸವ ನಡೆಯಲಿದ್ದು, ರಾಜಾಜಿನಗರದ ಓರಾಯನ್ ಮಾಲ್​ನಲ್ಲಿರುವ ಪಿವಿಆರ್​ನ 11 ಪರದೆಗಳಲ್ಲಿ ಸಿನಿಮಾಗಳು ಪ್ರದರ್ಶನವಾಗಲಿವೆ.

  ಉದ್ಘಾಟನಾ ಸಮಾರಂಭ ಫೆ.26ರ ಸಂಜೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ವಿಶ್ವದ 50 ದೇಶಗಳ 200 ಸಮಕಾಲೀನ ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗಲಿವೆ. ವಿಶ್ವ ಸಿನಿಮಾ, ಚಿತ್ರ ಭಾರತಿ ಭಾರತೀಯ ಚಿತ್ರಗಳ ಸ್ಪರ್ಧೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ಪಡೆದ ಚಿತ್ರಗಳು, ಏಷಿಯನ್ ಸಿನಿಮಾ, ನೆಟ್​ಪ್ಯಾಕ್, ಆತ್ಮಚರಿತ್ರೆ ಆಧಾರಿತ, ಉಪಭಾಷೆ, ನಟ, ಕಲಾವಿದ, ತಂತ್ರಜ್ಞರ ಸಿಂಹಾವಲೋಕನ, ವಿಶೇಷ ವಸ್ತು, ಕಣ್ಮರೆಯಾದ ನಟರು, ನಿರ್ದೇಶಕರ ಸ್ಮರಣೆ, ಸಾಕ್ಷ್ಯಚಿತ್ರಗಳು ಸೇರಿ ಒಟ್ಟು 14 ವಿಭಾಗಗಳು ಚಿತ್ರಲೋಕದ ವೈವಿಧ್ಯ ತೆರೆದಿಡಲಿದೆ ಎಂದು ವಿವರಿಸಿದರು. ಸಿನಿಮಾದ ಬೆಳವಣಿಗೆ ಕುರಿತು ಸಂವಾದ, ಉಪನ್ಯಾಸ, ಚಲನಚಿತ್ರ ತಯಾರಿಕೆ, ಕಲೆ ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಕಾರ್ಯಾಗಾರ, ಮಾಸ್ಟರ್

  ಕ್ಲಾಸ್ ವಿಭಾಗದಲ್ಲಿ ತಜ್ಞರಿಂದ ಉಪನ್ಯಾಸಗಳಿರಲಿದ್ದು, ಆಸಕ್ತರು ಹಾಗೂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಈ ಉತ್ಸವದ ಪ್ರತಿನಿಧಿ ಶುಲ್ಕ 800 ರೂ., ಸಿನಿಮಾ ವಿದ್ಯಾರ್ಥಿಗಳು ಹಾಗೂ ಸಿನಿಮಾರಂಗದವರಿಗೆ 400 ರೂ. ನಿಗದಿಪಡಿಸಲಾಗಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts