ನವದೆಹಲಿ: ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ಕಪಿಲ್ ಮಿಶ್ರಾ ಅವರು ಕೋಮು ಭಾವನೆ ಕೆರಳಿಸುವಂತೆ ಟ್ವೀಟ್ ಮಾಡಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳುವಂತೆ ಹೇಳಿದೆ.
ದೆಹಲಿ ಚುನಾವಣೆ ಫೆ.8ರಂದು ನಡೆಯಲಿದೆ. ಹಾಗೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯೂ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಕಪಿಲ್ ಮಿಶ್ರಾ ಗುರುವಾರ ವಿವಾದಾತ್ಮಕ ಟ್ವೀಟ್ವೊಂದನ್ನು ಮಾಡಿ ವಿವಾದ ಸೃಷ್ಟಿಸಿದ್ದರು.
ದೆಹಲಿಯ ಸಾಹೀನ್ಬಾಗ್ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳಲ್ಲಿ ಸಾಹೀನ್ ಬಾಗ್ ಪ್ರಮುಖ ತಾಣವಾಗಿದೆ. ಈ ಸಾಹೀನ್ ಬಾಗ್ ಮೂಲಕ ಪಾಕಿಸ್ತಾನ ಪ್ರವೇಶ ಮಾಡುತ್ತಿದೆ. ದೆಹಲಿಯಲ್ಲಿ ಒಂದು ಮಿನಿ ಪಾಕಿಸ್ತಾನವೇ ಸೃಷ್ಟಿಯಾಗುತ್ತಿದೆ. ಸಾಹೀನ್ಬಾಗ್, ಚಾಂದ್ ಬಾಗ್ ಮತ್ತಿತರ ಪ್ರದೇಶಗಳಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ. ಪಾಕಿಸ್ತಾನಿ ಹೋರಾಟಗಾರರು ರಸ್ತೆಗಳನ್ನೆಲ್ಲ ಅತಿಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದರು.
ಹಾಗೇ ಇನ್ನೊಂದು ಪೋಸ್ಟ್ನಲ್ಲಿ ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ಸಂಘರ್ಷಕ್ಕೆ ಹೋಲಿಸಿದ್ದರು.
ಕಪಿಲ್ ಮಿಶ್ರಾ ಅವರಿಗೆ ನೋಟಿಸ್ ನೀಡಿದ್ದ ಚುನಾವಣಾ ಆಯೋಗ ಮೂರು ದಿನಗಳಲ್ಲಿ ಉತ್ತರಿಸುವಂತೆ ಕಾಲಾವಧಿ ನೀಡಿತ್ತು. ಆದರೆ ನಾನು ತಪ್ಪು ಮಾತನಾಡಿದ್ದೇನೆ ಎಂದು ನನಗೆ ಅನ್ನಿಸುತ್ತಿಲ್ಲ. ಸತ್ಯ ಹೇಳುವುದು ಈ ದೇಶದಲ್ಲಿ ಅಪರಾಧವಲ್ಲ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದರು.
ಬಳಿಕ ಚುನಾವಣಾ ಆಯೋಗ, ಕಪಿಲ್ ಮಿಶ್ರಾ ಅವರ ಟ್ವೀಟ್ ತೆಗೆದುಹಾಕುವಂತೆ ಟ್ವಿಟರ್ಗೇ ಸೂಚನೆ ನೀಡಿತ್ತು. ದೆಹಲಿಯ ಪ್ರತಿಭಟನಾ ಸ್ಥಳವನ್ನು ಮಿನಿ ಪಾಕಿಸ್ತಾನ ಎಂದು ಹೇಳಿದ್ದು ಖಂಡನೀಯ. ಇದೊಂದು ಕೋಮು ಸೌಹಾರ್ದತೆ ಕದಡುವ ಟ್ವೀಟ್ ಎಂದು ಹೇಳಿತ್ತು. (ಏಜೆನ್ಸೀಸ್)