ಗುಂಡ್ಲುಪೇಟೆ : ಕಳೆದ ಮೂರು ದಿನಗಳಿಂದ ತಾಲೂಕಿನ ಮಾರ್ಗವಾಗಿ ಕೇರಳದ ತ್ಯಾಜ್ಯವನ್ನು ಸಾಗಣೆ ಮಾಡುತ್ತಿದ್ದ ಲಾರಿಗಳ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.3 ಹಾಗೂ 4 ರಂದು ನಕಲಿ ದಾಖಲೆಗಳೊಂದಿಗೆ ಕೇರಳದಿಂದ ತ್ಯಾಜ್ಯಗಳನ್ನು ತುಂಬಿಕೊಂಡು ಹೋಗುತ್ತಿದ್ದ ಆರು ಲಾರಿಗಳನ್ನು ಸಾರ್ವಜನಿಕರು ಹಾಗೂ ಸಂಘಟನೆ ಮುಖಂಡರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಲಾರಿಗಳ ತ್ಯಾಜ್ಯದ ಬಗ್ಗೆ ವರದಿ ನೀಡುವಂತೆ ಪೊಲೀಸರು ಪರಿಸರ ಇಲಾಖೆಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿಗೆ ಆಗಮಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪಿ.ಕೆ.ಉಮಾಶಂಕರ್ ಎಲ್ಲ ಲಾರಿಗಳಲ್ಲಿ ಸಾಗಾಣೆ ಮಾಡುತ್ತಿದ್ದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದರು. ಸಾರ್ವಜನಿಕರು ಆರೋಪಿಸಿದಂತೆ ಎಲ್ಲ ತ್ಯಾಜ್ಯಗಳೂ ಪ್ಲಾಸ್ಟಿಕ್, ಪರಿಸರ ಹಾಗೂ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗಿರುವ ಬಗ್ಗೆ ಖಚಿತವಾದ ಪರಿಣಾಮ ಆರು ಲಾರಿಗಳ ಚಾಲಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದಾರೆ. ಎರಡು ಮೂರು ದಿನಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗುವುದು. ಆರೋಪಿಗಳು ನ್ಯಾಯಾಲಯದಲ್ಲಿ ದಂಡ ಪಾವತಿಸಿದ ನಂತರ ಲಾರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.