ಪ್ರಶಸ್ತಿ ಸುತ್ತಿಗೇರಿದ ಭಾರತ: ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ಪ್ರವೇಶ

ಭುವನೇಶ್ವರ: ಗೋಲುಗಳ ಸುರಿಮಳೆಗೈದ ಆತಿಥೇಯ ಭಾರತ ತಂಡ ಎಫ್​ಐಎಚ್ ಪುರುಷರ ಹಾಕಿ ಸಿರೀಸ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ಹೋರಾಟದಲ್ಲಿ 7-2 ಗೋಲುಗಳಿಂದ ಏಷ್ಯನ್ ಗೇಮ್್ಸ ಚಾಂಪಿಯನ್ ಜಪಾನ್ ತಂಡವನ್ನು ಮಣಿಸಿತು. ಇದರೊಂದಿಗೆ ಇದೇ ವರ್ಷ ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ, 2020ರ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ತೇರ್ಗಡೆಗೊಂಡಿತು. ಜತೆಗೆ ಕಳೆದ ವರ್ಷ ಏಷ್ಯಾಡ್​ನಲ್ಲಿ ಜಪಾನ್ ವಿರುದ್ಧ ಅನುಭವಿಸಿದ್ದ ಸೋಲಿಗೂ ಭಾರತ ಭರ್ಜರಿಯಾಗಿ ಸೇಡು ತೀರಿಸಿಕೊಂಡಿತು. ಶನಿವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಕಳಿಂಗಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಉಪಾಂತ್ಯ ಹೋರಾಟದಲ್ಲಿ ತವರು ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಕಣಕ್ಕಿಳಿದ ಭಾರತ ಆರಂಭಿಕ ಹಂತದಿಂದಲೂ ಬಿಗಿ ಹಿಡಿತ ಸಾಧಿಸಿತು. ಭಾರತ ಪರ ರಮಣದೀಪ್ ಸಿಂಗ್ (23, 37ನೇ ನಿಮಿಷ), ಹರ್ವನ್​ಪ್ರೀತ್ ಸಿಂಗ್ (7), ವರುಣ್ ಕುಮಾರ್ (14), ಹಾರ್ದಿಕ್ ಸಿಂಗ್ (25), ಗುರುಸಾಹಿಬ್ಜಿತ್ ಸಿಂಗ್ (43) ಹಾಗೂ ವಿವೇಕ್ ಪ್ರಸಾದ್ (47) ಗೋಲು ದಾಖಲಿಸಿದರು.

ರಾಣಿ ರಾಂಪಾಲ್ ಪಡೆಗೆ ಇಂದು ಉರುಗ್ವೆ ಸವಾಲು

ಹಿರೋಶಿಮಾ: ಮುಂಬರುವ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತಾ ದೃಷ್ಟಿಯಿಂದ ಮಹತ್ವದ್ದೆನಿಸಿರುವ ಎಫ್​ಐಎಚ್ ಮಹಿಳಾ ಸಿರೀಸ್ ಫೈನಲ್ಸ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಶನಿವಾರ ಅಭಿಯಾನ ಆರಂಭಿಸಲಿದೆ. ಎ ಗುಂಪಿನ ಮೊದಲ ಪಂದ್ಯದಲ್ಲಿ ರಾಣಿ ರಾಂಪಾಲ್ ಬಳಗ ಉರುಗ್ವೆ ಸವಾಲನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ತಂಡಗಳು ವರ್ಷಾಂತ್ಯದ ಒಲಿಂಪಿಕ್ ಅರ್ಹತಾ ಟೂರ್ನಿಗೆ ಅರ್ಹತೆ ಪಡೆಯಲಿವೆ.

ಇಂದು ಫೈನಲ್

ಭಾರತ vs ದಕ್ಷಿಣ ಆಫ್ರಿಕಾ

# ಆರಂಭ: ಸಂಜೆ 7.15

# ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್