More

    ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆಗೆ ಹಗ್ಗಜಗ್ಗಾಟ!

    ತಿಪಟೂರು : ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತೇವೆ, ಗುತ್ತಿಗೆ ನಮಗೇ ಕೊಡಿ ಎಂದು ಗುತ್ತಿಗೆದಾರರು ಪರಸ್ಪರ ಪೈಪೋಟಿ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.

    ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರಲಿ ಎಂಬ ಉದ್ದೇಶದಿಂದ ಆನ್‌ಲೈನ್ ಟೆಂಡರ್ ಅಥವಾ ಮುಕ್ತ ಟೆಂಡರ್ ಮೂಲಕ ಕೊಟೇಶನ್ ಕರೆದು ಅತ್ಯಂತ ಕಡಿಮೆ ಬೆಲೆ ನಮೂದಿಸಿರುವ ಗುತ್ತಿಗೆದಾರರಿಗೆ ಪೂರೈಕೆ ಆದೇಶ ನೀಡುವುದು ಜಾರಿಯಲ್ಲಿರುವ ನಿಯಮ. ಇದರಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಆಹಾರ ಪದಾರ್ಥ ಸರಬರಾಜು ಮಾಡುವ ಗುತ್ತಿಗೆಯೂ ಒಂದು. 2019-20ಕ್ಕೆ ದರದಲ್ಲಿ ವ್ಯತ್ಯಾಸವಾಗದಂತೆ ನಿಗದಿತವಾಗಿ ಆಹಾರ ಪದಾರ್ಥ, ಹಣ್ಣು, ತರಕಾರಿ ಸರಬರಾಜು ಮಾಡುವ ಗುತ್ತಿಗೆ ಕೆಲವೆಡೆ ನೀಡಲಾಗಿದ್ದು, ಮಾರುಕಟ್ಟೆ ದರಕ್ಕಿಂತ ಕಲ್ಪನೆಗೂ ಮೀರಿ ಕಡಿಮೆ ದರಕ್ಕೆ ಕೊಟೇಶನ್ ನೀಡಿರುವುದು, ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಇಷ್ಟು ಕಡಿಮೆ ಬೆಲೆಗೆ ಆಹಾರ ಪದಾರ್ಥ ಸರಬರಾಜು ಮಾಡಲು ನಿಜಕ್ಕೂ ಸಾಧ್ಯವೇ? ಅಥವಾ ಇದರಲ್ಲಿ ಅವ್ಯವಹಾರ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

    ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ 2019-20ಕ್ಕೆ ಆಹಾರ ಸರಬರಾಜು ಮಾಡಲು ಮೂವರು ಗುತ್ತಿಗೆದಾರರು ಕೊಟೇಶನ್ ನೀಡಿದ್ದು, ಅವರು ನಮೂದಿಸಿರುವ ದರಪಟ್ಟಿ (ಪ್ರತಿ ಕಿ.ಲೋಗೆ) ಕ್ರಮವಾಗಿ ಇಂತಿದೆ. ಕಾಫಿ ಪೌಡರ್ 135-138-133.90, ಕಾಳುಗಳು 36.30-39-35.90, ತೊಗರಿಬೇಳೆ 59.30-68-59.90, ಕಡಲೆಕಾಯಿ ಎಣ್ಣೆ 59.90-72,-58.90, ಬಾಳೆಹಣ್ಣು ಒಂದಕ್ಕೆ 2.10-2.80-2.60, ಉಪ್ಪು 4.90-5-4.90. ಸಕ್ಕರೆ, 31.30.-36-34.90, ಹುಣಸೇಹಣ್ಣು 34.90-30-34.90, ಸಾಂಬಾರ್‌ಪುಡಿ 127.90-138-123.90, ತೆಂಗಿನ ಕಾಯಿ ( ಒಂದಕ್ಕೆ ) 11.90-12,-12.90, ತರಕಾರಿ ಕಿ.ಲೋಗೆ 15.30-17,-14.90, ಗುಣಮಟ್ಟದ ಅಕ್ಕಿ 30.30- 36, 29.90, ಹಾಗೂ ಈರುಳ್ಳಿ 11.90- 14, – 12.90 ಈ ಪೈಕಿ ತುಮಕೂರಿನ ಗುತ್ತಿಗೆದಾರರಿಗೆ ಆಹಾರ ಸರಬರಾಜು ಮಾಡಲು ಆದೇಶ ನೀಡಲಾಗಿದೆ. ಇಲ್ಲಿ ಗುಣಮಟ್ಟದ ಅಕ್ಕಿಯನ್ನು ಕಿಲೋ ಗೆ 29.90ರಂತೆ ನೀಡುತ್ತಾರೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದರೂ ದರಪಟ್ಟಿಯಲ್ಲಿ 12ರೂ. ಹಾಗೂ 150 ರೂ. ಕಿಲೋ ಬೆಲೆಯ ಹುಣಿಸೆಹಣ್ಣು 40 ರೂ. ಮತ್ತು 250ಕ್ಕೂ ಅಧಿಕ ಬೆಲೆ ಇರುವ ಗುಣಮಟ್ಟದ ಕಡಲೇಕಾಯಿ ಎಣ್ಣೆಗೆ 60 ರೂ., ಮಾರುಕಟ್ಟೆಯಲ್ಲಿ 120 ರೂ. ಇರುವ ತೊಗರಿಬೇಳೆ ಇಲ್ಲಿ ಕೇವಲ 60 ರೂ, ಗೆ ಸರಬರಾಜು ಆಗುತ್ತದೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ.

    ಇನ್ನು ಸರ್ಕಾರದ ನಿಯಮಾನುಸಾರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ರತೀ ಒಳರೋಗಿಗೆ ಆತ ಬಯಸಿದರೆ, ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಪ್ರತಿ ರೋಗಿಗೆ 340 ಗ್ರಾಂ ಅಕ್ಕಿ, 70 ಗ್ರಾಂ ತೊಗರಿಬೇಳೆ, 227 ಗ್ರಾಂ ತರಕಾರಿ, 7 ಗ್ರಾಂ ಸಾಂಬಾರ್ ಪುಡಿ, 14 ಎಂ.ಎಲ್. ಕಡಲೇಕಾಯಿ ಎಣ್ಣೆ, 160 ಮಿ.ಲೀ. ಹಾಲು, (ಮಕ್ಕಳಿಗೆ 850 ಮಿ.ಲೀ) ಸಕ್ಕರೆ 28 ಗ್ರಾಂ
    (ಮಕ್ಕಳಿಗೆ 56 ಗ್ರಾಂ) ಬ್ರೆಡ್ 113 ಗ್ರಾಂ, ಕಾಳುಗಳು, 85 ಗ್ರಾಂ, ಬಾಳೆಹಣ್ಣು 113 ಗ್ರಾಂ, ತೆಂಗಿನಕಾಯಿ 28 ಗ್ರಾಂ, ಮತ್ತು ಕಾಫಿ ಪುಡಿ 14 ಗ್ರಾಂ ಒಳಗೊಂಡಿರಬೇಕು.

    ಮರ್ಮ ಇರುವುದೇ ಇಲ್ಲಿ!: ಪ್ರತೀ ರೋಗಿಗೆ ದಕ್ಕಬೇಕಾದ ಆಹಾರ ಪದಾರ್ಥಗಳು ನಮೂದಿತ ಅಳತೆಯಂತೆ ಸಿಗುತ್ತಿಲ್ಲ. ರಾತ್ರಿಗೂ ಸೇರಿ ಒಂದೇ ಸಾರಿ ಬಡಿಸಲಾಗುತ್ತಿರುವ ಸಾಂಬಾರಿನಲ್ಲಿ ನಿಗದಿತ ಪ್ರಮಾಣದ ಬೇಳೆ, ತರಕಾರಿ, ಇರಲ್ಲ. ಶಾಸಕ ಬಿ.ಸಿ.ನಾಗೇಶ್ ಅವರು ಇತ್ತೀಚೆಗೆ ಆಸ್ಪತ್ರೆಯ ಅಡುಗೆ ಮನೆಗೆ ಭೇಟಿ ನೀಡಿ 60 ರೋಗಿಗಳಿಗೆ ಸಾಂಬಾರ್ ಮಾಡಲು ಕೇವಲ ಅರ್ಧ ಕಿ.ಲೋ.ತೊಗರಿಬೇಳೆ ಬೇಯಿಸಿಟ್ಟಿದ್ದು, 14 ಕಿಲೋ ತರಕಾರಿ ಬದಲಿಗೆ ಕೇವಲ 4 ಕಿಲೋ ತರಕಾರಿ ಬೇಯಿಸಿದ್ದನ್ನು ಗಮನಿಸಿ ಹೌಹಾರಿದ್ದು ನೋಡಿದರೆ ಕಡಿಮೆ ದರ ನಮೂದಿಸಿ ಟೆಂಡರ್ ಪಡೆಯುವ ಅಸಲಿಯತ್ತು ಗೊತ್ತಾಗಲಿದೆ.

    ಗುಣಮಟ್ಟ ಮತ್ತು ಕಡಿಮೆ ಬೆಲೆಗೆ ಆದ್ಯತೆ ನೀಡಿದ್ದು, ಸ್ಪರ್ಧಾತ್ಮಕ ದರದಲ್ಲಿ ಯಾರು ಸರಬರಾಜು ಮಾಡುತ್ತಾರೋ ಅವರಿಂದ ಆಹಾರ ಪದಾರ್ಥ ಖರೀದಿಸಲಾಗುವುದು.
    ಡಾ.ಈಶ್ವರಯ್ಯ ತಿಪಟೂರು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ

    ನಮೂದಿಸಿರುವ ದರಗಳು ನಿಜಕ್ಕೂ ಯೋಗ್ಯವೇ ಎಂಬ ನಿಯಮಾನುಸಾರ ರೋಗಿಗಳಿಗೆ ಲಭ್ಯವಾಗಬೇಕಾದ ಆಹಾರ ಪದಾರ್ಥ ಸಿಗುತ್ತಿದೆಯೇ.? ಎಂಬುದನ್ನು ಟೆಂಡರ್ ಅನುಮೋದಿಸುವ ಹಿರಿಯ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದಾಗ ಮಾತ್ರ ಸತ್ಯ ಹೊರಬರಲಿದೆ.
    ಕುಮಾರ್ ಸಾರ್ವಜನಿಕ ತಿಪಟೂರು.

    ಆಸ್ಪತ್ರೆ ದಾಖಲಾಗಿ ವಾರವಾಯ್ತು, ಇಲ್ಲಿವರೆಗೂ ದಿನದಲ್ಲಿ ಎರಡು ಬಾರಿ ಸಾಂಬಾರ್ ಮಾಡಿ ಬಡಿಸಿದ್ದನ್ನು ನೋಡಿಲ್ಲ. ಮಧ್ಯಾಹ್ನ ನೀಡಿದ್ದನ್ನೇ ಬಿಸಿ ಮಾಡಿಕೊಂಡು ರಾತ್ರಿಗೂ ಬಳಸುತ್ತೇವೆ.
    ಹೆಸರೇಳಲಿಚ್ಚಿಸದ ರೋಗಿಗಳು ಸರ್ಕಾರಿ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts