ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರು ನಮಗೆ ಹೋರಾಟ ಮಾಡುವ ಶಕ್ತಿ ಕೊಟ್ಟಿದ್ದಾರೆ. ಆ ಹೋರಾಟದ ಮೂಲಕವೇ ನಾವು ಜಯಿಸಬೇಕು. ನಮ್ಮ ಕೊನೆ ರಕ್ತ ಇರುವರೆಗೂ ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡೋಣ(Fight to protect the Constitution until the last drop of blood) ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ತಿಳಿಸಿದರು.

ವಿಧಾನಸೌಧದ ಆವರಣ ಹಾಗೂ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ. ಅವರ ಆಚಾರ, ವಿಚಾರಗಳನ್ನು ಸ್ಮರಿಸುತ್ತಿದ್ದೇವೆ. ನಾವು ಇಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪೂಜಿಸುತ್ತಿಲ್ಲ, ಅವರ ಪ್ರತಿಭೆಗೆ ಪೂಜಿಸುತ್ತಿದ್ದೇವೆ. ಅವರ ಪ್ರತಿಭೆ ಒಂದು ಸಮಾಜ, ಒಂದು ಧರ್ಮಕ್ಕೆ ಸೀಮಿತವಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯ ರಕ್ಷಣೆಗೆ ಶ್ರಮಿಸಿದ ನಾಯಕ ಅಂಬೇಡ್ಕರ್. ನಮ್ಮ ಬದುಕಿಗೆ ಹೊಸ ರೂಪ ಕೊಟ್ಟವರು ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರು ತಮಗೆ ಮಾತ್ರ ಸೀಮಿತ ಎಂದು ಕೆಲವರು ಭಾವಿಸಿದ್ದಾರೆ. ಭಾರತದ ಪ್ರತಿ ಪ್ರಜೆಗೂ ಅಂಬೇಡ್ಕರ್ ದೇವರ ಸ್ವರೂಪ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ರಕ್ಷಣೆ ನೀಡಲು ಸಂವಿಧಾನ ತರಲಾಗಿದೆ. ಸಂವಿಧಾನವೇ ನಮ್ಮ ತಂದೆತಾಯಿ ಎಂದರು.
ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲ ಧರ್ಮಗ್ರಂಥಗಳು ಇರುವ ವಿಚಾರಗಳು ನಮ್ಮ ಸಂವಿಧಾನದಲ್ಲಿ ಅಡಗಿವೆ. ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ನಮ್ಮೆಲ್ಲರ ಪ್ರವಿತ್ರ ಗ್ರಂಥವಾಗಿದೆ. ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನ ಶತಮಾನೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದೆವು. ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಮಾಡಲಾಯಿತು ಎಂದು ಹೇಳಿದರು.
ನಾನು ನನ್ನ ಬದುಕಿನಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಕೆಲಸ ಪ್ರಾರಂಭಿಸುತ್ತೇನೆ. ಭಾರತದಲ್ಲಿ ಅನೇಕ ಧರ್ಮ, ಜಾತಿ, ನಾಯಕರುಗಳಿದ್ದಾರೆ. ಆದರೂ ದೇಶದಲ್ಲಿ ಅತಿ ಹೆಚ್ಚು ಪ್ರತಿಮೆಗಳಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು ಎಂದರು.
ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ
ಬೆಲೆ ಏರಿಕೆ ಪ್ರಾರಂಭವಾಗಿರುವುದು ಕೇಂದ್ರ ಸರ್ಕಾರದಿಂದ. ಹೀಗಾಗಿ ಬಿಜೆಪಿಯವರು ಹೋರಾಟ ಮಾಡುವುದಾದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೀಮೆಂಟ್, ಬೇಳೆ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಜಿಎಸ್ಟಿ ಮೂಲಕ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಆದರೂ ನಮ್ಮ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ವಿರುದ್ಧ ನಾವು ಏ.17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಮಟ್ಟದ ಹೋರಾಟ ಹಮ್ಮಿಕೊಂಡಿದ್ದೇವೆ. ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೀವು ಆಗಮಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.