ಶಿವಮೊಗ್ಗ: ಶಿಕಾರಿಪುರ ತಾಲೂಕಿನಲ್ಲಿ ಕೆಪಿಟಿಸಿಎಲ್ ಕೈಗೊಂಡಿರುವ ಅವೈಜ್ಞಾನಿಕ ಯೋಜನೆ ಕೈಬಿಡದಿದ್ದಲ್ಲಿ ಈಸೂರು ದಂಗೆಯ ಎರಡನೇ ಹೋರಾಟವನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಎಚ್ಚರಿಸಿದರು.
ನೂರಾರು ರೈತರ ಜಮೀನಿನ ಮೇಲೆ ಅವೈಜ್ಞಾನಿಕವಾಗಿ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದುಹೋಗುವುದನ್ನು ವಿರೋಧಿಸಿ ಶಿಕಾರಿಪುರದಲ್ಲಿ ಪ್ರತಿಭಟನೆಗಿಳಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದಿಂದ ಅಂಜನಾಪುರ ಮತ್ತು ಕೊರಲಹಳ್ಳಿ ಗ್ರಾಮದ ಗ್ರಿಡ್‌ಗೆ ರೈತರ ಜಮೀನಿನ ಮೇಲೆ ಕೆಪಿಟಿಸಿಎಲ್ ಅವೈಜ್ಞಾನಿಕ ಗೋಪುರ ವಿದ್ಯುತ್ ಮಾರ್ಗ ನಿರ್ಮಿಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಹೈಟೆನ್ಷನ್ ಎಸ್‌ಸಿ ಲೈನ್ ಡಿಸಿ ಗೋಪುರದಿಂದ ಹಾದುಹೋಗುವ ಉಪಕೇಂದ್ರಗಳಿಗೆ ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದ ಸರ್ವೇ ನಂ.5ರ ಲವತ್ತಾದ ಮತ್ತು ನೀರಾವರಿ ಅಡಕೆ ತೋಟಗಳ ಮೇಲೆ ಅವೈಜ್ಞಾನಿಕವಾಗಿ ನೀಲಿನಕ್ಷೆ ತಯಾರು ಮಾಡಲಾಗಿದೆ ಎಂದು ದೂರಿದರು.
ಗ್ರಾಮಗಳಲ್ಲಿ ಸಣ್ಣ ರೈತರಿದ್ದಾರೆ. ಈಗಾಗಲೇ ಜಮೀನುಗಳಲ್ಲಿ ಅಡಕೆ, ತೆಂಗು ಇತರ ಬೆಳೆ ಬೆಳೆದಿದ್ದಾರೆ. ಇದನ್ನೇ ನಂಬಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಕೆಪಿಟಿಸಿಎಲ್ ಯೋಜನೆಯಿಂದ ಅತಂತ್ರರಾಗಿದ್ದಾರೆ. ಸ್ವಾತಂತ್ರ್ಯಪೂರ್ವದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಈಸೂರು ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ದಿಟ್ಟ ಗ್ರಾಮ ಇದಾಗಿದೆ. ನಮ್ಮ ಗ್ರಾಮದ ಹಿರಿಯರ ಹೋರಾಟವನ್ನು ಜನಪ್ರತಿನಿಧಿಗಳು ಮರೆತಿದ್ದಾರೆ. ಈಗ ನೀಲಿನಕ್ಷೆಯನ್ನು ಕಡಿಮೆ ಅಂತರದ ದೂರದ ಮಾರ್ಗದಲ್ಲಿ ಮಾಡಿ ಎಂದರೆ ಅದು ಅರಣ್ಯ ಜಮೀನು ಎಂದು ಸಬೂಬು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಜಿಲ್ಲಾಧಿಕಾರಿ ಸೂಚಿಸಿದ ಮಾರ್ಗ ಇದಾಗಿದ್ದು, ಕೂಡಲೇ ರೈತರ ಸಂಕಷ್ಟ ಅರಿತು ಅವೈಜ್ಞಾನಿಕ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ರಾಜೇಶ್, ಪ್ರೇಮಾನಂದ್, ಸಂತೋಷ್ ಈಸೂರು, ಗಿರೀಶ್, ಕಾರ್ತಿಕ್ ಸುದ್ದಿಗೋಷ್ಠಿಯಲ್ಲಿದ್ದರು.