More

  ಎಷ್ಟೊಂದು ಅಂಧಕಾರಗಳ ವಿರುದ್ಧ ಹೋರಾಡಬೇಕಿದೆ ಹಣತೆ

  ಎಷ್ಟೊಂದು ಅಂಧಕಾರಗಳ ವಿರುದ್ಧ ಹೋರಾಡಬೇಕಿದೆ ಹಣತೆಜಡ್ಡುಗಟ್ಟಿರುವ ಮನಸುಗಳು, ದಣಿದಿರುವ ಕನಸುಗಳು, ಪುರುಸೊತ್ತು ಕೊಡದ ಕೆಲಸಗಳು, ನಿಟ್ಟುಸಿರು ಬಿಡುತ್ತಿರುವ ಬೆವರಹನಿಗಳು, ನಾಳೆಗಳ ಬಗ್ಗೆ ಕನವರಿಕೆಗಳು, ಎಲ್ಲ ಸರಿಹೋದೀತಾ ಎಂಬ ನಿರೀಕ್ಷೆಗಳು, ಅವರೆಲ್ಲ ಉದ್ಧಾರ ಆದ್ರು, ನಾವು ಹೀಂಗೇನಾ ಎಂಬ ಬೇಸರದ ಉದ್ಗಾರಗಳು, ಅದೃಷ್ಟಾನೇ ಇಲ್ಲ ಬಿಡ್ರಿ ಎಂಬ ಹಳಹಳಿಕೆಗಳು, ಹಂಚಿಕೊಳ್ಳಲಾಗದೆ ಇರಿಯುತ್ತಿರುವ ಭಾವನೆಗಳು, ಮೌನವೂ ಘಾಸಿ ಮಾಡುತ್ತಿರುವ ಕ್ಷಣಗಳು, ಮುಂದಿನ ದಾರಿ ಗೋಚರಿಸದ ಸಂದಿಗ್ಧತೆಗಳು, ಅವರನ್ನು ಬದಲು ಮಾಡ್ಲಾ, ನಾನೇ ಬದಲಾಗಲಾ ಎಂಬ ತಾಕಲಾಟಗಳು, ನಾನೇಕೆ ಸೋಲಲಿ ಎಂಬ ಅಹಂನ ದೊಂಬರಾಟಗಳು, ಸ್ವಾರ್ಥದ ಭಾರದಲ್ಲಿ ಕುಸಿಯುತ್ತಿರುವ ಸಂಬಂಧಗಳು, ದೂರವಾಗುತ್ತಿರುವ ಬಾಂಧವ್ಯಗಳು, ಕೆಲವೊಮ್ಮೆ ಎಲ್ಲ ಇದ್ದರೂ ‘ಸಮಾಧಾನ’ ಇಲ್ಲ ಎಂಬ ಕೊರಗುಗಳು, ಜೀವನ ಅಂದ್ರೆ ಇಷ್ಟೇನಾ ಎಂಬ ಪ್ರಶ್ನೆಗಳು…

  ಕಣ್ಣು ಅರಳಿಸಿ ನೋಡಿದರೆ ಇವೆಲ್ಲ ನಮ್ಮ ಸುತ್ತಲೂ ಕಣ್ಣಿಗೆ ರಾಚುವ ಜೀವನ ಚಿತ್ರಶಾಲೆಯ ದೃಶ್ಯಗಳು. ಬದುಕು ಎಂದರೆ ಹಾಗೇ ಅಲ್ಲವೇ… ಅಂಧಕಾರದ ವಿರುದ್ಧ ನಿರಂತರ ಹೋರಾಟ, ಬೆಳಕಿಗಾಗಿ ಸತತ ಹುಡುಕಾಟ! ಅಷ್ಟಕ್ಕೂ ಬೆಳಕು ಎಂದರೆ ಅದು ಬರೀ ಪದವಲ್ಲ, ಭಾವನೆಯಲ್ಲ ಅದೊಂದು ದೊಡ್ಡ ಲೋಕ. ಭೌತಿಕ ಬದುಕಿನಲ್ಲೂ, ಅಧ್ಯಾತ್ಮ ಬದುಕಿನಲ್ಲೂ ಬೆಳಕು ಬೇಕೇ ಬೇಕು. ಬೆಳಕು ಎಂದರೆ ಚೈತನ್ಯ, ಕೌತುಕ, ಸಮೃದ್ಧಿ, ಭಾವಸಿರಿಯೂ ಹೌದು. ಬೆಳಕು ನೀಡುವ ಪ್ರಸನ್ನತೆ, ಸಾರ್ಥಕತೆ, ಸಂತೋಷ, ಸಂತೃಪ್ತಿ, ಸಮಾಧಾನವೇ ಅಸಾಧಾರಣ. ಆದರೆ, ಹೊರಗಿನ ಬೆಳಕು ಬರೀ ಕೃತಕತೆ, ತಾತ್ಕಾಲಿಕ. ಆಂತರ್ಯದ ಪ್ರಕಾಶಕ್ಕೆ ಸೌಂದರ್ಯವಿದೆ, ವ್ಯಕ್ತಿತ್ವವನ್ನು ಉತ್ಕರ್ಷಕ್ಕೆ ಕೊಂಡೊಯ್ಯುವ ಬಲವಿದೆ. ಬೆಳಕು ತರುವ ಪರಿವರ್ತನೆ ನೋಡಿ! ಸ್ವಾರ್ಥ ಕರಗಿಸಿ ಸಂವೇದನೆ ಅರಳಿಸುವ, ದುಃಖಗಳನ್ನು, ಲೌಕಿಕ ಜಂಜಾಟಗಳನ್ನು ಮರೆತು ಅಂತರಂಗದಲ್ಲಿ ಸಂತೋಷವನ್ನು ಆಹ್ವಾನಿಸುವ, ಬೇಕುಗಳಿಗೆ ಕಡಿವಾಣ ಹಾಕಿ ಪರರ ಹಿತದ ಬಗ್ಗೆಯೂ ಯೋಚಿಸುವ, ಬದುಕಿನ ದಾರಿ-ಗುರಿಯನ್ನು ಸರಿಮಾಡಿಕೊಂಡು ಮುಂದೆ ಸಾಗುವ ಸಂಭ್ರಮವನ್ನೂ ಬೆಳಕು ಸೃಷ್ಟಿ ಮಾಡುತ್ತದೆ.

  ಅದಕ್ಕೆಂದೆ ನಮ್ಮಲ್ಲಿ ದೀಪಾವಳಿ ಬಂದಾಗಲೆಲ್ಲ ಭಾವಲೋಕ ಶೃಂಗಾರಗೊಳ್ಳುತ್ತದೆ, ಹೊಸ ನಿರೀಕ್ಷೆಗಳು, ಎಲ್ಲ ಬಗೆಯ ಅಂಧಕಾರಗಳನ್ನು ದೂರಮಾಡುವ ಸಂಕಲ್ಪಗಳು ಗರಿಗೆದರುತ್ತವೆ. ಕೆಡುಕೆಲ್ಲ ನಿವಾರಣೆಯಾಗಿ, ಸಾತ್ವಿಕತೆಯ ಉದಯವಾಗಬೇಕಾದರೆ ಕಾಲ ಪಕ್ವವಾಗಬೇಕು. ಹಲವು ಶಕ್ತಿಗಳ ಸಮ್ಮಿಲನವಾಗಬೇಕು. ಹಾಗಾಗಿಯೇ ದೀಪಾವಳಿ ಎಂದರೆ ಹಲವು ಒಳಿತುಗಳ ಸಂಗಮ. ಈ ಹಬ್ಬದೊಂದಿಗೆ ಬಾಲ್ಯದ ನೂರೆಂಟು ನೆನಪುಗಳಿವೆ, ಭಾವನೆಗಳ ಮಿಠಾಯಿ ಇದೆ, ಚಕ್ಕುಲಿ, ಉಂಡೆ, ಚೂಡಾ, ಕರ್ಚಿಕಾಯಿಗಳ ಸ್ವಾದವಿದೆ. ‘ನಾನಲ್ಲ ನಾವು’ ಎಂದು ನೆನಪಿಸುವ ಭಾವವೈಶಾಲ್ಯವಿದೆ. ದೀಪಾವಳಿ ಎಂದರೆ ಕೌತುಕ, ಸಂಭ್ರಮಗಳ ಒಟ್ಟು ಮೊತ್ತ. ಆ ಬೆಳಕಿನಲ್ಲಿ ಮನಸುಗಳನ್ನು ತೊಳೆದುಬಿಡಬೇಕು, ಬೆಳಗಿ ಸಂಭ್ರಮಿಸಬೇಕು. ಜೀವನದ ದಾರಿಯನ್ನು ಪರಿಷ್ಕರಿಸಿಕೊಳ್ಳಬೇಕು.

  ಐತಿಹಾಸಿಕವಾಗಿ ಒಮ್ಮೆ ಕಣ್ಣಾಡಿಸಿದರೂ ಇದರ ಮಹತ್ವ ಅರಿವಾಗುತ್ತದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮಚಂದ್ರ ಹದಿನಾಲ್ಕು ವರ್ಷ ವನವಾಸ ಮಾಡಿದ್ದು ರಾಜಾ ದಶರಥನ ವಚನಪೂರ್ತಿಗೆ, ಕೈಕೇಯಿಯ ಹಠಕ್ಕೆ ಎಂಬುದು ಮೇಲ್ನೋಟಕ್ಕೆ ಗೋಚರಿಸುವ ಸಂಗತಿ. ಆದರೆ, ಅಧರ್ವಿು ಶಕ್ತಿಗಳನ್ನು ನಾಶ ಮಾಡಿ, ಧರ್ಮ ಸಂಸ್ಥಾಪನೆಯ ವಿಜಯಧ್ವಜವನ್ನು ಹಾರಾಡಿಸುವುದು ನೈಜ ಉದ್ದೇಶವಾಗಿತ್ತು. ಅದಕ್ಕೆಂದೆ ಹದಿನಾಲ್ಕು ವರ್ಷದ ವನವಾಸದ ಅವಧಿಯಲ್ಲಿ ಶ್ರೀರಾಮನು ನಡೆಸಿದ ಯುದ್ಧಗಳು ಸಾವಿರಾರು. ಅಸುರರು, ರಾಕ್ಷಸರು, ಋಷಿಗಳಿಗೆ, ಸಜ್ಜನರಿಗೆ ಕಿರುಕುಳ ನೀಡುತ್ತಿದ್ದ ದುಷ್ಟಶಕ್ತಿಗಳು ಶ್ರೀರಾಮನ ಬಾಣಕ್ಕೆ ಬಲಿಯಾಗಿ, ಮುಕ್ತಿ ಪಡೆದರು. ಶಿಲೆಯಾಗಿದ್ದ ಅಹಲ್ಯೆ ಶಾಪಮುಕ್ತಳಾದಳು. ಪ್ರಾಂಜಲ ಭಕ್ತಿಯ ಶಬರಿ ಆದರ್ಶವಾದಳು. ಪ್ರಭುಸೇವೆಯ ಮೂಲಕವೇ ಆಂಜನೇಯ ಜಗದ್ವಂದ್ಯನಾದ. ಭರತನಂತೂ ತ್ಯಾಗದ ಮೌಲ್ಯವನ್ನೇ ಸ್ಥಾಪಿಸಿದ. ಈ ಹದಿನಾಲ್ಕು ವರ್ಷದ ಅವಧಿಯಲ್ಲಿ ಶ್ರೀರಾಮನು ಅನೇಕ ವಿಜಯಗಳನ್ನೇ ಕಂಡುಕೊಂಡರೂ, ಎಲ್ಲೂ ಒಂದಡಿ ಭೂಮಿಯನ್ನು ತನಗಾಗಿ ಪಡೆಯಲಿಲ್ಲ. ರಾವಣನನ್ನು ಕೊಂದ ಬಳಿಕ ಸ್ವರ್ಣನಗರಿ ಲಂಕಾಕ್ಕೆ ರಾವಣನ ಸೋದರ ವಿಭೀಷಣನನ್ನು ರಾಜನಾಗಿ ಮಾಡಿದ. ‘ಲಂಕೆಯನ್ನು ರಾಜಧಾನಿ ಆಗಿಸಿಕೊಳ್ಳಬಹುದಲ್ಲವೇ?’ ಎಂಬ ಪ್ರಶ್ನೆ ಶ್ರೀರಾಮನ ಸಮ್ಮುಖದಲ್ಲಿ ಬಂದಾಗ, ‘ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು’ ಎಂದುಬಿಟ್ಟ. ಹಲವು ರಾಜರುಗಳಿಗೆ ನ್ಯಾಯಯುತವಾಗಿ ರಾಜ್ಯ ದೊರಕಿಸಿಕೊಟ್ಟು, ಸಾರ್ಥಕತೆ ಮೆರೆದ. ಅಧರ್ಮದ ನಾಶವಾದ ಮೇಲೆ ಧರ್ಮರಾಜ್ಯ ಸ್ಥಾಪನೆಯಾಗಬೇಕಿತ್ತಲ್ಲವೇ? ಆ ಮೂಲಕ ಗಾಢಾಂಧಕಾರ ಕಳೆದು ಧರ್ಮದ ಬೆಳಕು ಮೂಡಬೇಕಿತ್ತಲ್ಲವೇ? ಅದಕ್ಕಾಗಿ ಶ್ರೀರಾಮನು ಪಟ್ಟಾಭಿಷಿಕ್ತನಾಗಿದ್ದು ದೀಪಾವಳಿಯಂದು ಎಂಬ ಪ್ರತೀತಿ ಇದೆ. ಈಗಲೂ ಆದರ್ಶ ಆಡಳಿತ, ಪ್ರಜಾಸುಖ, ಜನಹಿತ, ನಿಜವಾದ ನೆಮ್ಮದಿ, ಸಮೃದ್ಧಿ, ಸಂತೃಪ್ತಿಗಳಿಗೆಲ್ಲ ರಾಮರಾಜ್ಯವೇ ಮಾದರಿ.

  ಭೂಮಂಡಲವನ್ನೇ ನರಕವನ್ನಾಗಿ ಮಾಡುತ್ತೇನೆ ಎಂದು ಹೊರಟು, ದೇವಾದಿದೇವತೆಗಳನ್ನೂ ಕಾಡಿದ, ಇಂದ್ರ, ಅಷ್ಟ ದಿಕ್ಪಾಲಕರನ್ನು ಸೋಲಿಸಿ, ಅವರನ್ನು ಪದಚ್ಯುತಗೊಳಿಸಿದ, ಕ್ರೌರ್ಯದ ಪರಮಾವಧಿಯ ಲೋಕಪೀಡಕ ನರಕಾಸುರನನ್ನು ಭಗವಾನ್ ಶ್ರೀಕೃಷ್ಣನು ವಧಿಸಿದ್ದು ನರಕ ಚತುರ್ದಶಿಯಂದೇ. ಎಂಥ ದೊಡ್ಡ ಅಂಧಕಾರ ನಾಶವಾದ ದಿನವದು! ಬಾಲಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ ದಿನವೂ ಹೌದು. ಹೀಗೆ ದೀಪಾವಳಿ ಎಂದರೆ ಘೋರ ಅಂಧಕಾರ ವಿರುದ್ಧದ ವಿಜಯ!

  ಈಗಂತೂ ಅದೆಷ್ಟು ಬಗೆಯ ಕತ್ತಲೆಗಳ ವಿರುದ್ಧ ಹೋರಾಡಬೇಕಿದೆ. ಹೊರಗಿನ ಹೋರಾಟದ ಸ್ವರೂಪ ಒಂದಾದರೆ; ಒಳಗಡೆಯ ಹೋರಾಟದ ಆಯಾಮವೇ ಭಿನ್ನ. ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದಂತೆ ಮನುಷ್ಯ ತನ್ನ ವಿರುದ್ಧವೇ ಹೆಚ್ಚು ಹೋರಾಡುತ್ತಿದ್ದಾನೆ. ಏಕೆಂದರೆ, ಅತೀವ ಸ್ಪರ್ಧೆ, ತಾನು ಮಾತ್ರ ಚೆನ್ನಾಗಿ ಬದುಕಬೇಕೆಂಬ ಹಪಾಹಪಿ, ಸ್ವಾರ್ಥ, ಕೋಪ, ಮತ್ಸರ, ಅಹಂಕಾರ, ಒಂಟಿತನ, ಖಿನ್ನತೆ, ಬದುಕಿನ ಬಗ್ಗೆ ಸಂಕುಚಿತ ದೃಷ್ಟಿ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಾಗಾದರೆ, ಸಾರ್ಥಕ ಬದುಕಿನ ಪರಿಗಳು, ಮಾದರಿಗಳು ನಮ್ಮಲ್ಲಿ ಇಲ್ಲವೇ? ಖಂಡಿತವಾಗಿಯೂ ಇವೆ. ದುರದೃಷ್ಟವೆಂದರೆ ಸಮಾಜ ಅಂಥವರನ್ನು ಕೂಡ ಅನಾದರದಿಂದ ನೋಡುತ್ತಿದೆ. ಒಂದು ಉನ್ನತ ಧ್ಯೇಯದ ಸಾಕಾರಕ್ಕಾಗಿ ಬದುಕನ್ನು ಮೀಸಲಾಗಿಟ್ಟವರು, ಪರಿಸರ, ಶಿಕ್ಷಣ, ಆಹಾರ, ಆರೋಗ್ಯ, ಅಧ್ಯಾತ್ಮ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗಾಗಿ, ಅನಾಥರ, ಆಸರೆ ಇಲ್ಲದ ವೃದ್ಧರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವವರ ದೊಡ್ಡ ಪಡೆಯೇ ಇದೆ. ಆ ತೆರೆಮರೆಯ ಸಾಧಕರ ಅಂತಃಕರಣದ ಲೋಕ ಎಷ್ಟು ವಿಶಾಲವೆಂದರೆ, ಅಲ್ಲಿನ ಒಂದು ಸಣ್ಣ ಮೌಲ್ಯ ಕೂಡ ಶ್ರೀಸಾಮಾನ್ಯನ ಬದುಕನ್ನು ಸಾರ್ಥಕಗೊಳಿಸಬಲ್ಲದು. ಆದರೇನು ಮಾಡುವುದು? ‘ಯಶಸ್ಸಿನ’ ಮಾಪನ ಬದಲಾಗಿದೆ, ‘ಯಾರು ದೊಡ್ಡವರು?’ ಎಂಬುದು ಜ್ಞಾನ, ಸರಳತೆ, ಅವರ ಕೊಡುಗೆಗಳನ್ನು ಅವಲಂಬಿಸದೆ ಅಧಿಕಾರ, ಸಂಪತ್ತು, ವರ್ಚಸ್ಸನ್ನು ಅವಲಂಬಿಸಿದೆ. ಹಾಗಾಗಿಯೇ, ಹೊರಗಿನಿಂದ ‘ಸಮೃದ್ಧಿ’ ಇದ್ದರೂ, ಒಳಗಿನ ಬಡತನ ಅನೇಕರಿಗೆ ಕಾಡುತ್ತಿರುತ್ತದೆ.

  ಮನುಷ್ಯನ ಧೋರಣೆಯನ್ನು ಬಿಂಬಿಸುವ ಕವನವೊಂದು (ಅಜ್ಞಾತರು ಬರೆದಿದ್ದು) ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

  ‘ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರವಯ್ಯ

  ಊಟ ಮುಗಿದ ಮೇಲೆ ತಟ್ಟೆ ಭಾರ, ಮಳೆ ನಿಂತ ಮೇಲೆ ಕೊಡೆ ಭಾರ

  ಸಹಾಯ ಪಡೆದ ಮೇಲೆ ಸ್ನೇಹ ಭಾರ, ಮೋಹ ಕಳೆದ ಮೇಲೆ ಪ್ರೀತಿ ಭಾರ

  ಆಸ್ತಿ ಭಾಗವಾದ ಮೇಲೆ ಹೆತ್ತವರು ಭಾರ, ಮಡದಿ ಬಂದ ಮೇಲೆ ಒಡಹುಟ್ಟಿದವರು ಭಾರ,

  ಸಂಕಷ್ಟ ಕಳೆದ ಮೇಲೆ ಆ ದೇವರೇ ಭಾರ, ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರವಯ್ಯ’

  ನಿಜಕ್ಕೂ ವಾಸ್ತವದ ಅನಾವರಣ. ಬದುಕಿನ ಹಾದಿ ಹೀಗಾದರೆ ಕತ್ತಲೆ ಕಳೆಯುವುದು ಹೇಗೆ? ಸಂಬಂಧ, ನಂಬಿಕೆಗಳು ಬಲಗೊಳ್ಳುವುದು ಹೇಗೆ? ಅವರವರ ಬದುಕಿಗೆ ಒಂದಿಷ್ಟು ಸ್ವಾರ್ಥ ಅನಿವಾರ್ಯ ಎಂಬುದೇನೋ ನಿಜ. ಆದರೆ, ಇದಕ್ಕೊಂದು ಲಕ್ಷ್ಮಣರೇಖೆ ಹಾಕಿಕೊಳ್ಳದಿದ್ದರೆ ಸ್ವಾರ್ಥದ ಕೋಟೆಯಲ್ಲಿ ಬಂದಿಯಾಗಿ ಬಿಡುತ್ತೇವೆ. ಎಲ್ಲವೂ ನಮಗಾಗಿ ಬೇಕು ಎಂದು ಹಪಹಪಿಸುತ್ತೇವೆ. ಬೆಳಕು ನೀಡುವ ಸಂದೇಶವೇ ಮುಂದೆ ಸಾಗು, ಖುಷಿಯನ್ನು ಹರಡು ಎಂದು. ಒಳ್ಳೆಯತನಕ್ಕೆ ಕೊರತೆಯಿಲ್ಲ, ಆ ಹಾದಿಯಲ್ಲಿ ಸಾಗುವವರು ಕಮ್ಮಿಯಾಗುತ್ತಿದ್ದಾರೆ ಅಷ್ಟೇ. ಇನ್ನು ಕೆಲವರು ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳುತ್ತಿದ್ದಾರೆ. ನಮ್ಮನ್ನು ನಾವು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಖಿನ್ನತೆಗೆ ಜಾರುವುದೆಂದರೆ ನಮ್ಮನ್ನು ನಾವೇ ಶಿಕ್ಷಿಸಿಕೊಂಡಂತೆ. ಖಿನ್ನತೆಯಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಚೆ ಬರಲು ಯತ್ನಿಸಬೇಕು. ಇದಕ್ಕಾಗಿ, ಮೊದಲು ಜೀವನವನ್ನು ಪ್ರೀತಿಸಲು, ನಮ್ಮನ್ನು ನಾವು ಪ್ರೀತಿಸಲು ಆರಂಭಿಸಬೇಕು.

  ಹೀಗೆ ನಿಜವಾದ ಕತ್ತಲು ಕಳೆಯುವ ಆಂದೋಲನ ಈ ದೀಪಾವಳಿಯಿಂದ ಆರಂಭವಾಗಲಿ. ಅದಕ್ಕಾಗಿ ? ಮಾನವೀಯತೆಗೆ ಮೊದಲ ಪ್ರಾಶಸ್ಱ ನೀಡೋಣ ?ಜೀವನದಲ್ಲಿ ಈಗಿರುವ ಸ್ಥಿತಿಯನ್ನು ಒಪ್ಪಿಕೊಂಡು, ಮುಂದೆ ಸಾಗೋಣ. ?ಕತ್ತಲು ಕಳೆದ ಬಳಿಕ ಬೆಳಕು ಬಂದೇ ಬರುತ್ತದೆ ಎಂದು ಆಶಾವಾದಿಯಾಗೋಣ. ? ಎಲ್ಲ ದಿನಗಳೂ ಕಷ್ಟದ ದಿನಗಳಾಗಿರುವುದಿಲ್ಲ ಎಂಬ ವಾಸ್ತವ ಅರಿಯೋಣ.

  ಪುಟ್ಟದೊಂದು ಹಣತೆ ಗಾಢಾಂಧಕಾರದ ವಿರುದ್ಧ ಹೋರಾಡಿ, ಗೆಲ್ಲಲು ಸಾಧ್ಯವಾದರೆ, ನಮಗೆ, ನಿಮಗೆ ಕೂಡ ಈ ಬೆಳಕಿನ ಪಯಣ ಆರಂಭಿಸಲು ಖಂಡಿತ ಸಾಧ್ಯ. ಅಲ್ಲವೇ?

  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts