ಹಾಸನಾಂಬೆ ಪವಾಡದ ಸುತ್ತ ಬಿಸಿ ಬಿಸಿ ಚರ್ಚೆ

ಹಾಸನ: ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಶಕ್ತಿ ದೇವತೆ ಹಾಸನಾಂಬ ದೇವಿ ಪವಾಡ ಕುರಿತು ಪರ ವಿರೋಧ ಚರ್ಚೆಗಳು ಜಿಲ್ಲಾದ್ಯಂತ ಬಿರುಗಾಳಿ ಎಬ್ಬಿಸಿವೆ.

ದೇವಿ ಗರ್ಭಗುಡಿಯಲ್ಲಿ ಒಂದು ವರ್ಷದವರೆಗೆ ದೀಪ ಆರುವುದಿಲ್ಲ, ನೈವೇದ್ಯದ ಅನ್ನ ಹಳಸುವುದಿಲ್ಲ ಹಾಗೂ ಹೂವು ಬಾಡುವುದಿಲ್ಲ ಎಂಬ ನಂಬಿಕೆಯನ್ನು ವೈಜ್ಞಾನಿಕವಾಗಿ ಸಾದರಪಡಿಸಬೇಕೆಂಬ ಭಾರತ ಜ್ಞಾನ ವಿಜ್ಞಾನ ಸಮಿತಿ ಪದಾಧಿಕಾರಿಗಳ ಕೂಗು ಎಲ್ಲೆಡೆ ಮೊಳಗುತ್ತಿದೆ.

ಇದಕ್ಕೆ ವಿರುದ್ಧವಾಗಿ ಹಿಂದುಪರ ಸಂಘಟನೆಗಳಿಂದ ‘ವಾಯ್ಸ ಆಫ್ ಹಾಸನ್’ ಹೆಸರಿನಲ್ಲಿ ಬೃಹತ್ ಜನಾಂದೋಲನವು ಸಿದ್ಧಗೊಳ್ಳುತ್ತಿದೆ. ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ಪ್ರಗತಿಪರರ ವಿರುದ್ಧ ಸಹಿ ಸಂಗ್ರಹ ಅಭಿಯಾನ, ಭಿತ್ತಿ ಪತ್ರಗಳ ಹಂಚಿಕೆ ಕಾರ್ಯ ಆರಂಭವಾಗಿದೆ. ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಹಾಸನಾಂಬ ಪವಾಡದ ಕುರಿತು ಎದ್ದಿರುವ ವಿವಾದದ ಅಲೆಗೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸಿದ್ದಾರೆ.

ದಶಕಗಳಿಂದ ನಡೆದುಕೊಂಡು ಬಂದಿರುವ ಹಾಸನಾಂಬ ಜಾತ್ರೆ ಈ ಬಾರಿ ವಿವಾದದ ಕೇಂದ್ರ ಬಿಂದುವಾಗಲು ಜಿಲ್ಲಾಡಳಿತ ಕಳೆದ ಬಾರಿ ಪ್ರಕಟಿಸಿದ ಆಹ್ವಾನ ಪತ್ರಿಕೆಯೇ ಕಾರಣವಾಗಿದೆ. ಮೌಢ್ಯ ಪ್ರತಿಬಂಧಕ ಕಾಯ್ದೆ ಮಸೂದೆ ಜಾರಿಗೊಳಿಸಿರುವ ಸರ್ಕಾರ ಹಾಸನದಲ್ಲಿ ಮೌಢ್ಯಕ್ಕೆ ಪ್ರಚೋದನೆ ನೀಡುತ್ತಿದೆ ಎಂಬುದು ಬಿಜಿವಿಎಸ್ ಆರೋಪ. ಪ್ರಚಾರಕ್ಕಾಗಿ ಜನರ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವುದು ಖಂಡನೀಯ ಎಂಬುದು ಹಿಂದುಪರ ಸಂಘಟನೆಗಳ ವಾದ. ದೇವಾಲಯ ಬಾಗಿಲು ತೆರೆಯುವುದು ಕೇವಲ ಹದಿನೈದು ದಿನಗಳಿದ್ದು, ಈ ವಿವಾದ ಯಾವ ದಾರಿಯಲ್ಲಿ ಸಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಹಾಸನಾಂಬ ಪವಾಡ ಬಯಲು ಕುರಿತ ಧ್ವನಿಗೆ ಜಿಲ್ಲೆಯ ಜನರು ‘ಲೌಡ್ ಸ್ಪೀಕರ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೇವರ ಅಸ್ತಿತ್ವ ಪ್ರಶ್ನಿಸುವುದು ಅಜ್ಞಾನ
ಭಾರತೀಯ ಧಾರ್ಮಿಕ ಪರಂಪರೆ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ದೇವರ ಅಸ್ತಿತ್ವವನ್ನು ಪ್ರಶ್ನಿಸುವುದು ಅಜ್ಞಾನದ ಪರಮಾವಧಿಯಾಗುತ್ತದೆ. ಹಾಸನಾಂಬ ದೇವಿಯ ಪವಾಡ ಕುರಿತು ಪ್ರಶ್ನಿಸಲು ಇವರಿಗೆ ಯಾವ ಹಕ್ಕಿದೆ. ದೇಗುಲದಲ್ಲಿ ಆರದ ದೀಪ, ಹಳಸದ ಅನ್ನ, ಬಾಡದ ಹೂವು ಕುರಿತು ಸತ್ಯಶೋಧನೆಗೆ ಮುಂದಾಗಿರುವುದು ಖಂಡನೀಯ. ಹಿಂದು ಧಾರ್ಮಿಕ ಭಾವನೆಗೆ ಚ್ಯುತಿ ತರಲು ಹೊರಟಿರುವವರ ವಿರುದ್ಧ ಬೃಹತ್ ಜನಾಂದೋಲನ ನಡೆಸುತ್ತೇವೆ.
ರಕ್ಷಿತ್ ಭಾರದ್ವಾಜ್ ಆಂಜನೇಯ ಸ್ವಾಮಿ ದೇವಾಲಯ ಅರ್ಚಕ

ಸತ್ಯ ಜನರಿಗೆ ಗೊತ್ತಾಗಲಿ ಬಿಡಿ
ಹಾಸನಾಂಬ ದೇವಾಲಯದಲ್ಲಿ ಪವಾಡ ನಡೆಯುತ್ತಿರುವುದು ಸತ್ಯವಾಗಿದ್ದರೆ ಅದು ಜನರಿಗೆ ಗೊತ್ತಾಗಲಿ ಬಿಡಿ. ಪುರಾತನ ಕಾಲದಿಂದಲೂ ಕಟ್ಟುಕತೆಗಳಿಂದ ಮಾರುಹೋಗಿರುವ ನಾಗರಿಕರು ಈಗ ಎಚ್ಚೆತ್ತುಕೊಂಡಿರುವುದು ಸಮಯೋಚಿತ. ಜಿಲ್ಲಾಡಳಿತವೇ ಅಧಿಕೃತ ಆಹ್ವಾನದಲ್ಲಿ ದೇವಿ ಪವಾಡ ಕುರಿತು ಪ್ರಚಾರ ಮಾಡಿದ್ದು, ಈಗ ಅದನ್ನು ಸಾಬೀತುಪಡಿಸಲಿ.
ರೋಷನ್ ಹರಗರಹಳ್ಳಿ ನಿವಾಸಿ

ಕಡೆಗಣಿಸುವುದೇ ಸಮಸ್ಯೆಗೆ ಪರಿಹಾರ
ಹಿಂದು ಸಂಸ್ಕೃತಿಯ ಮೌಲ್ಯ ಹಾಗೂ ಆಚಾರ ವಿಚಾರಗಳ ಮಹತ್ವ ಅರಿಯದೆ ಕೂಗುತ್ತಿರುವವರನ್ನು ಕಡೆಗಣಿಸುವುದೇ ಸಮಸ್ಯೆಗೆ ಪರಿಹಾರ. ಪ್ರಚಾರ ಪ್ರಿಯರ ಬೊಗಳೆಯ ಪ್ರಶ್ನೆಗಳು ಅಥವಾ ದೇವಿ ಪವಾಡ ಸತ್ಯ ಶೋಧನೆಯಿಂದ ನಮ್ಮ ಹಾಸನಾಂಬ ದೇವಿಯ ಶಕ್ತಿ ಇನ್ನೂ ಹೆಚ್ಚುತ್ತದೆ.
ಎಚ್.ಆರ್.ಶಂಕರ್ ವರ್ತಕ ಹೊಳೆನರಸೀಪುರ

ದೇವಿ ನಮಗೆಂದೂ ದೇವಿಯೇ
ದೈವ ಶಕ್ತಿ, ಪವಾಡ, ಪೂಜೆ-ಆರಾಧನೆಗಳ ನಂಬಿಕೆಯ ಮೇಲೆ ಹಿಂದು ಧರ್ಮ ಹಾಗೂ ಸಂಸ್ಕೃತಿ ನಿಂತಿದೆ. ಅದರಂತೆಯೇ ನಾವೆಲ್ಲರೂ ಬದುಕುತ್ತಿದ್ದೇವೆ. ಆದರೆ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತಿನಂತೆ ಪವಾಡದ ಸತ್ಯ ಶೋಧನೆ ನಡೆದರೆ ತಪ್ಪೇನಲ್ಲ. ಇದರಿಂದ ಹಾಸನಾಂಬ ದೇವಿಗೆ ಧಕ್ಕೆಯಾಗುವುದಿಲ್ಲ. ದೇವಿ ನಮಗೆಂದೂ ದೇವಿಯೇ ಆಗಿರುತ್ತಾಳೆ. ಆದರೆ ಪವಾಡ ಏನೆಂದು ತಿಳಿಯಬೇಕೆಂಬ ಕುತೂಹಲ ಸಹಜ.
ಟಿ.ಎನ್.ಧರ್ಮೇಶ್ ಡಿ.ತುಮಕೂರು (ದಿಡಗ)

ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು
ದೇವರು ಮತ್ತು ಧರ್ಮದ ಕುರಿತು ಮಾತನಾಡುವಾಗ ಎಚ್ಚರ ವಹಿಸುವುದು ಅಗತ್ಯ. ಹಾಸನಾಂಬ ಸೇರಿದಂತೆ ಎಲ್ಲ ದೇವರ ಬಗ್ಗೆ ಜನರಿಗೆ ತಮ್ಮದೆ ಆದ ನಂಬಿಕೆಯಿದೆ. ಆದರೆ, ಪವಾಡ ಪರೀಕ್ಷೆ ನಡೆಸುವ ಆತುರದಲ್ಲಿ ಜನರಿಗೆ ತಪ್ಪು ಸಂದೇಶ ರವಾನಿಸಿದರೆ ಅಪಾಯ ತಪ್ಪಿದ್ದಲ್ಲ.
ಶಶಿಧರ್ ಅರಸೀಕೆರೆ ಎಪಿಎಂಸಿ ಉಪಾಧ್ಯಕ್ಷ

ಮೊದಲ ದಿನದ ದರ್ಶನವನ್ನು ಸಾರ್ವಜನಿಕಗೊಳಿಸಿ
ಹಾಸನಾಂಬ ಇತಿಹಾಸ ಪ್ರಸಿದ್ಧ ದೇವಸ್ಥಾನ ಹಾಗೂ ಇಲ್ಲಿನ ಗ್ರಾಮ ದೇವತೆ. ವರ್ಷಕ್ಕೊಮ್ಮೆ ದರ್ಶನ ಕೊಡುವ ತಾಯಿಯನ್ನು ನೋಡಲು ಎಲ್ಲ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ದೇವರು ಎಂಬುದು ನಮ್ಮೊಳಗಿನ ನಂಬಿಕೆ, ಆ ನಂಬಿಕೆ ಮೇಲೀಗ ಹಲವು ಪ್ರಶ್ನೆಗಳು ಮೂಡಿದೆ. ಯಾವುದೆ ರೀತಿ ಪರೀಕ್ಷೆ ಮಾಡಿದರೂ ದೇವರಿಲ್ಲ ಎಂದು ರುಜುವಾತು ಮಾಡಲು ಸಾಧ್ಯವಿಲ್ಲ. ಹಾಸನದ ಜನ ಶಕ್ತಿದೇವತೆಯನ್ನು ಬಿಟ್ಟುಕೊಡುವುದಿಲ್ಲ. ಮೊದಲ ದಿನದ ದರ್ಶನವನ್ನು ಸಾರ್ವಜನಿಕಗೊಳಿಸಿದರೆ ದೇವರ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚುತ್ತದೆ.
ಶ್ವೇತಾ ಲೇಖಕಿ ಹಾಸನ

ದೇವಿ ಅಸ್ತಿತ್ವದ ಕುರಿತು ಪ್ರಶ್ನಿಸುತ್ತಿರುವುದು ತಪ್ಪು
ನಮ್ಮ ಸಮಾಜ ನಂಬಿಕೆ ಆಧಾರದ ಮೇಲೆ ನಿಂತಿದೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತರುವ ಕೆಲಸ ನಡೆಯುತ್ತಿದೆ. ಇದರಿಂದ ಯಾರಿಗೂ ಯಾವ ಲಾಭವಿಲ್ಲ. 15 ವರ್ಷಗಳಿಂದ ಆ ತಾಯಿಯ ಭಕ್ತನಾಗಿದ್ದೇನೆ. ಹಾಸನಾಂಬ ದೇವಿಗೆ 800 ವರ್ಷಗಳ ಇತಿಹಾಸ ಇದೆ. ದೇವಿ ಅಸ್ತಿತ್ವದ ಕುರಿತು ಪ್ರಶ್ನಿಸುತ್ತಿರುವುದು ತಪ್ಪು.
ರವಿ ಸೋಮು ನಗರ ನಿವಾಸಿ

ಇಷ್ಟವಿಲ್ಲದವರು ದೇಗುಲಕ್ಕೆ ಬರಬೇಡಿ
ಬಿಜಿವಿಎಸ್‌ನವರ ನಡೆ ನಂಬಿಕೆಯನ್ನೇ ಪ್ರಶ್ನಿಸುವ ಹಾಗಿದೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಪ್ರಶ್ನಿಸುತ್ತಿರುವುದು ಖಂಡನೀಯ. ಈ ರೀತಿ ವಿವಾದ ಸೃಷ್ಟಿಸಿ ಯುವ ಪೀಳಿಗೆಯನ್ನು ಮತ್ತಷ್ಟು ನಾಸ್ತಿಕರನ್ನಾಗಿ ಮಾಡಲು ಇವರು ಯತ್ನಿಸುತ್ತಿದ್ದಾರೆ. ಇಷ್ಟವಿಲ್ಲದವರು ದೇವಾಲಯದ ಕಡೆಗೆ ಬರುವುದು ಬೇಡ. ಈ ರೀತಿ ಸಮಾಜದ ಸ್ವಾಸ್ಥೃ ಹದಗೆಡಿಸುವುದು ಒಳ್ಳೆಯದಲ್ಲ.
ದಿವ್ಯಾ ಆಲೂರು ನಿವಾಸಿ