ವಿಶ್ವವಿಜೇತರಿಗೆ ಫ್ರಾನ್ಸ್​ನಲ್ಲಿ ಭವ್ಯ ಸ್ವಾಗತ

ಪ್ಯಾರಿಸ್: 21ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಗೆ ರಷ್ಯಾದ ಮಾಸ್ಕೋದ ಲಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ತೆರೆ ಬಿದ್ದಿದೆ. 2ನೇ ಬಾರಿಯ ಚಾಂಪಿಯನ್ ಆದ ಫ್ರಾನ್ಸ್ ತಂಡದ ತವರಿನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಟೂರ್ನಿಯುದ್ದಕ್ಕೂ ಸ್ಪೂರ್ತಿದಾಯಕ ಆಟವಾಡಿ ಫೈನಲ್​ನಲ್ಲಿ ಕ್ರೊವೇಷಿಯಾ ಎಡವಿದರೂ ಜಗತ್ತಿನ ಫುಟ್​ಬಾಲ್ ಅಭಿಮಾನಿಗಳ ಹೃದಯ ಗೆದ್ದಿದೆ. ಕ್ರೊವೇಷಿಯಾ ಸಂಭ್ರಮವನ್ನು ‘ಸೈದ್ಧಾಂತಿಕ’ ಅಭಿಮಾನಿಗಳ ಹರ್ಷ ಎಂದು ಆಂಗ್ಲ ಮಾಧ್ಯಮಗಳು ವರ್ಣಿಸಿವೆ. ಇನ್ನೊಂದೆಡೆ ವಿಶ್ವಚಾಂಪಿಯನ್ ತಂಡದ ಎಲ್ಲ ಸದಸ್ಯರಿಗೆ ದೇಶದ ಪ್ರತಿಷ್ಠಿತ ಪುರಸ್ಕಾರವಾದ ‘ಲೀಜನ್ ಆಫ್ ಹಾನರ್’ ನೀಡುವುದಾಗಿ ಫ್ರಾನ್ಸ್ ಸರ್ಕಾರ ಪ್ರಕಟಿಸಿದೆ.

ಪ್ರಸಿದ್ಧ ಬೀದಿ ಚಾಂಪ್ಸ್ ಎಲಿಸೀಸ್​ನಲ್ಲಿ ಸಾವಿರಾರು ಅಭಿಮಾನಿಗಳ ಜತೆ ಫ್ರಾನ್ಸ್ ತಂಡ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿತು. ಫ್ರಾನ್ಸ್ ನ ಇನ್ನಿತರ ನಗರಗಳಲ್ಲಿ ಸಂಭ್ರಮ ಅತಿಯಾಗಿದ್ದರಿಂದ ಕೆಲ ಅಹಿತಕರ ಘಟನೆಗಳೂ ಸಂಭವಿಸಿತು. ಸುಮಾರು 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕೆಂಪು, ಬಿಳಿ, ನೀಲಿ ಬಣ್ಣದ ಫ್ರಾನ್ಸ್ ಬಾವುಟ ಹಾರಿಸಿ, ರಾಷ್ಟ್ರಗೀತೆ ಹಾಡುತ್ತಾ ಭಾವೋನ್ಮುಖರಾದರು. ಬಣ್ಣ ಬಣ್ಣದ ಪಟಾಕಿ ಸಿಡಿಮದ್ದುಗಳು ಸಿಡಿಯಿತು. ಕೆಲವರು ಬೆತ್ತಲೆ ದೇಹ ಪೂರ್ತಿ ಫ್ರಾನ್ಸ್ ಬಾವುಟದ ಬಣ್ಣ ಹಚ್ಚಿ ಗಮನ ಸೆಳೆದರು. ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ವಿಜೇತ ತಂಡದ ಆಟಗಾರರನ್ನು ಪ್ಯಾರಿಸ್​ನಲ್ಲಿ ಬರಮಾಡಿಕೊಂಡರು

ಸಂಭ್ರಮದಲ್ಲಿ ಇಬ್ಬರ ಸಾವು, ಘರ್ಷಣೆ: ವಿಶ್ವಕಪ್ ಗೆದ್ದ ಖುಷಿಯನ್ನು ಅತಿಯಾಗಿ ಸಂಭ್ರಮಿಸಿದ ಫ್ರಾನ್ಸ್​ನ ಕೆಲವೆಡೆ ಅಹಿತಕರ ಘಟನೆಗಳು ನಡೆಯಿತು. 2015ರ ಭಯೋತ್ಪಾದಕರ ದಾಳಿಯ ಮುನ್ನೆಚ್ಚರಿಕೆಯಿಂದ ಪೊಲೀಸರ ಬಿಗಿಬಂದೋ ಬಸ್ತ್ ನಡುವೆ ಅಭಿಮಾನಿಗಳ ಸಂಭ್ರಮಾಚರಣೆ ಏರ್ಪಟ್ಟಿತು. ಅಲ್​ಪಿನ್ ಸಿಟಿಯಲ್ಲಿ ಅಭಿಮಾನಿಯೊಬ್ಬ ಕಾಲುವೆಗೆ ಹಾರಿದ ವೇಳೆ ಕುತ್ತಿಗೆ ಮುರಿದು ಸಾವನ್ನಪ್ಪಿದರೆ, 30 ವರ್ಷದ ಯುವಕನೋರ್ವ ವೇಗವಾಗಿ ಕಾರು ಓಡಿಸಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.

2 ಸ್ಟಾರ್ ಜೆರ್ಸಿ ತೊಟ್ಟ ಗ್ರಿಜ್​ವುನ್

ಪಂದ್ಯ ಗೆದ್ದ ಬಳಿಕ ಫ್ರಾನ್ಸ್ ಸ್ಟಾರ್ ಅಂಟೋಯಿನ್ ಗ್ರಿಜ್​ವುನ್ 2 ಸ್ಟಾರ್​ಗಳಿದ್ದ ಜೆರ್ಸಿ ಧರಿಸಿ ಗಮನ ಸೆಳೆದರು. 2ನೇ ವಿಶ್ವಕಪ್ ಗೆದ್ದ ಸೂಚಕವಾಗಿ ಗ್ರಿಜ್​ವುನ್ ಪಂದ್ಯ ಮುಗಿದ ತಕ್ಷಣ ಮೈದಾನದಿಂದ ತೆರಳಿ 2 ಸ್ಟಾರ್ ಇದ್ದ ಜೆರ್ಸಿ ಧರಿಸಿ ಸಂಭ್ರಮಿಸತೊಡಗಿದರು. ಇವರಿಗೆ ಪೋಗ್ಬಾ ಹಾಗೂ ಬಾಪೆ ಕೂಡ ಸಾಥ್ ನೀಡಿದರು.

ನಾಚಿದ ಕಾಂಟೆ

ಫ್ರಾನ್ಸ್ ಆಟಗಾರರೆಲ್ಲರೂ ಚಿನ್ನದ ಟ್ರೋಫಿಯನ್ನು ಹಿಡಿಯಲು ನಾ ಮುಂದು ತಾ ಮುಂದು ಎಂದಿದ್ದರೆ ಡಿಫೆಂಡರ್ ಎನ್​ಗೊಲೊ ಕಾಂಟೆ ಕಪ್ ಹಿಡಿದು ಸಂಭ್ರಮಿಸಲು ನಾಚಿದರು. ಚೆಲ್ಸಿ ಕ್ಲಬ್ ಪರ ಗಮನಾರ್ಹ ನಿರ್ವಹಣೆ ತೋರಿದ್ದ ಕಾಂಟೆ ತಂಡದ ಸಂಭ್ರಮದಲ್ಲಿ ಸರಳತೆ ತೋರಿದ್ದಕ್ಕೆ ಎಲ್ಲಾ ಆಟಗಾರರ ಮನ ಗೆದ್ದರು. ಎಲ್ಲರೂ ಫೋಟೋಗ್ರಾಫರ್​ಗಳ ಎದುರು ಟ್ರೋಫಿ ಹಿಡಿದು ಪೋಸು ನೀಡುತ್ತಿದ್ದರೆ ಕಾಂಟೆ ಆ ಆಸೆಯಿದ್ದರೂ, ಕೇಳಲು ಹಿಂಜರಿದು ಒಂದು ಬದಿಯಲ್ಲಿ ನಿಂತು ಎಲ್ಲರನ್ನು ನೋಡಿ ಸುಮ್ಮನಿದ್ದರು. ಕಾಂಟೆಯ ಮುಗ್ಧತೆಯನ್ನು ನೋಡಿದ ಡಿಫೆಂಡರ್ ಸ್ಟೀವನ್ ಜೊಂಝಿ ಕಪ್​ಅನ್ನು ಇತರ ಆಟಗಾರರಿಂದ ಕೇಳಿ ಕಾಂಟೆ ಕೈಗೆ ನೀಡಿದರು.

ಲೀಜನ್ ಆಫ್ ಹಾನರ್

1802ರಲ್ಲಿ ನೆಪೋಲಿಯನ್ ಬೊನಾಪಾರ್ಟೆ ಸ್ಥಾಪಿಸಿದ ಫ್ರಾನ್ಸ್​ನ ಅತಿಶ್ರೇಷ್ಠ ಪುರಸ್ಕಾರ ಲೀಜನ್ ಆಫ್ ಹಾನರ್​ಗೆ ತಂಡದ ಆಟಗಾರರು ಪಾತ್ರರಾಗಲಿದ್ದಾರೆ. 1998ರಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೂ ಈ ಪುರಸ್ಕಾರ ನೀಡಲಾಗಿತ್ತು. ಕೋಚ್ ಡೆಶಾಂಪ್ಸ್ ಹೊರತಾಗಿ ಉಳಿದ ಆಟಗಾರರು ಇದನ್ನು ಪಡೆಯಲಿದ್ದಾರೆ. ಡೆಶಾಂಪ್ಸ್ 1998ರಲ್ಲೇ ಈ ಗೌರವ ಪಡೆದಿದ್ದಾರೆ.

ಮನಗೆದ್ದ ಕ್ರೊವೇಷಿಯಾ

‘ಪದಕ ಬೆಳ್ಳಿಯಾದರೂ ಹೃದಯ ಚಿನ್ನ’, ‘ಧೈರ್ಯಶಾಲಿ ಗುಂಡಿಗೆಯ ನೀವು ನಮಗೆ ಹೆಮ್ಮೆ ತರಿಸಿದ್ದೀರಿ’ ಎಂಬಿತ್ಯಾದಿ ಆಕರ್ಷಕ ಶೀರ್ಷಿಕೆಗಳೊಂದಿಗೆ ಕ್ರೊವೇಷಿಯಾದ ಪತ್ರಿಕೆಗಳು ತಮ್ಮ ತಂಡವನ್ನು ಪ್ರಶಂಸಿಸಿವೆ. ಅದಲ್ಲದೆ ತಂಡದ ರನ್ನರ್ ಅಪ್ ಸಾಧನೆಗೆ ಅಲ್ಲಿನ ಅಭಿಮಾನಿಗಳು ಅಹಿತಕರ ಘಟನೆಗಳಿಲ್ಲದೆ ಒಗ್ಗಟ್ಟಿನಿಂದ ಸಂಭ್ರಮಿಸಿದರು. ಇನ್ನು ಮಾಧ್ಯಮ, ಅಂತರ್ಜಾಲಗಳಲ್ಲಿ, ಜನತೆಗೆ ಸ್ಟಾರ್ ನಾಯಕ ಲೂಕಾ ಮಾಡ್ರಿಕ್ ಮತ್ತು ಅಧ್ಯಕ್ಷೆ ಕೊಲಿಂಡಾ ಗ್ರಾಬರ್ ಇವರಿಬ್ಬರಲ್ಲಿ ಯಾರ ಮೇಲೆ ಹೆಚ್ಚು ಆಪ್ತತೆ, ಅಭಿಮಾನ ಮೂಡಿತೆಂಬ ಸಮೀಕ್ಷೆ ನಡೆಸಿತು. ಇದರಲ್ಲಿ ಕೊಲಿಂಡಾ ಅವರಿಗಿಂತ ಶೇ.25ರಷ್ಟು ಅಧಿಕ ಅಭಿಮಾನ ಲೂಕಾ ಮೇಲೆ ವ್ಯಕ್ತವಾಗಿದೆ ಎಂದಿದೆ. ಕ್ರೊವೇಷಿಯಾ ತಂಡ ಕೂಡ ಸೋಮವಾರ ಸಂಜೆ 3 ಗಂಟೆಯ ವೇಳೆಗೆ ತವರಿಗೆ ಆಗಮಿಸಿತು. ಆಟಗಾರರನ್ನು ತೆರೆದ ಬಸ್​ನಲ್ಲಿ ಮೆರವಣಿಗೆ ನಡೆಸಲಾಯಿತು. ರಾಜಧಾನಿ ಜಾಗ್ರೆಬ್​ನಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ತಂಡವನ್ನು ಬರ ಮಾಡಿಕೊಂಡರು. ಈ ವೇಳೆ ಅಧ್ಯಕ್ಷೆ ಕೊಲಿಂಡಾ ಕೂಡ ಭಾಗಿಯಾದರು. ‘ನಾವು ಚಾಂಪಿಯನ್ ಆಗಿಲ್ಲವೆಂಬ ದುಃಖವಿಲ್ಲ.ಇಂದು ಜಗತ್ತಿನ ಮೂಲೆ ಮೂಲೆಗಳಿಗೂ ಕ್ರೊವೇಷಿಯಾ ಎಂಬ ಹೆಸರು ಗೊತ್ತಾಗಿರುವುದು ಇದೇ ಲೂಕಾ ಮಾಡ್ರಿಕ್ ಪಡೆಯಿಂದ’ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.