ಪಾಕಿಸ್ತಾನಕ್ಕೆ ಭಾರತೀಯರಿಂದ ತಕ್ಕ ಉತ್ತರ

ಮೂಡಿಗೆರೆ: ಭಾರತದ ಸೈನ್ಯ ವಾಯುದಾಳಿ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ಬಿಜಿಪಿ ವಿಜಯೋತ್ಸವ ಆಚರಿಸಿತು.

ಎಂಎಲ್​ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಪುಲ್ವಾಮ ದಾಳಿಯಲ್ಲಿ ಸೈನಿಕರು ಮೃತಪಟ್ಟಾಗ ದೇಶವೇ ಶೋಕಾಚರಣೆಯಲ್ಲಿ ಮುಳುಗಿತ್ತು. ಪಾಕಿಸ್ತಾನದ ಮೇಲೆ ಪ್ರತೀಕಾರಕ್ಕಾಗಿ ಭಾರತೀಯರು ಪ್ರಾರ್ಥಿಸುತ್ತಿದ್ದರು. ದಾಳಿ ನಡೆದ 13 ದಿನಕ್ಕೆ ಸರಿಯಾಗಿ ನಮ್ಮ ಭಾರತೀಯ ಸೇನೆ ಪಾಕಿಸ್ತಾನ ಒಳನುಗ್ಗಿ 350 ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದೆ. ಈ ಕಾರ್ಯಾಚರಣೆಗೆ ಮುಕ್ತ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ ಅವರನ್ನು ಎಲ್ಲ ಭಾರತೀಯರೂ ಅಭಿನಂದಿಸಬೇಕು ಎಂದು ತಿಳಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಯೋಧರ ಹತ್ಯೆ ಸೇಡನ್ನು ಭಾರತೀಯ ಸೇನೆ ತೀರಿಸಿಕೊಂಡಿದೆ. ಭಾರತದ ಮೇಲೆ ದುಷ್ಟ ಯೋಜನೆ ಮತ್ತು ಯೋಚನೆ ಜಾರಿಗೆ ತರುವವರನ್ನು ಹುಡುಕಿ ನಾಶಪಡಿಸಲಾಗುವುದು ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿರುವುದು ಭಾರತದ ಹೆಮ್ಮೆಯ ಸಂದೇಶ ಎಂದರು.