ಕಾಡಾನೆ ಹಾವಳಿ ತಪ್ಪಿಸಲು ಆಗ್ರಹ

ಚಿಕ್ಕಮಗಳೂರು: ತಾಲೂಕಿನ ಕಳವಾಸೆ ಸುತ್ತಮುತ್ತ ಕಾಡಾನೆ ಹಾವಳಿಗೆ ನೂರಾರು ಎಕರೆ ಗದ್ದೆ ಹಾಗೂ ತೋಟಗಳಲ್ಲಿ ಬೆಳೆ ನಾಶವಾಗಿದ್ದು, ನಿತ್ಯ ಗ್ರಾಮಸ್ಥರು ಭಯದಲ್ಲೇ ಓಡಾಡುವ ದುಸ್ಥಿತಿ ತಲೆದೋರಿದೆ.

15-20 ದಿನಗಳಿಂದ ಕಳವಾಸೆ, ಹೊಸಕೊಪ್ಪ, ಗೋಣಿಕಲ್ಲು, ಮೂಲೆಮನೆ, ವಾಟೆ ಹಂಕಲ್ ಸೇರಿ ಹಲವು ಗ್ರಾಮಗಳಲ್ಲಿ ಕಾಡು ಕೋಣ ಮತ್ತು ಕಾಡಾನೆಗಳ ಹಾವಳಿ ಜನರ ನಿದ್ರೆಗೆಡಿಸಿದೆ. ಕಾಫಿ, ಅಡಕೆ, ಭತ್ತ, ಮೆಣಸು, ತೆಂಗು ಸೇರಿ ಅಲ್ಲಲ್ಲಿ ನಿತ್ಯ ಬೆಳೆಗಳನ್ನು ಆನೆಗಳು ಹಾನಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಉದಯಕುಮಾರ್, ವಿನಯ್, ಪಾರ್ವತಮ್ಮ, ಸಾವಿತ್ರಮ್ಮ, ಶ್ರೀನಿವಾಸ್, ಸೀತಮ್ಮ ಸೇರಿ ಹಲವಾರು ರೈತರು ಮತ್ತು ಬೆಳೆಗಾರರ ತೋಟ, ಗದ್ದೆಗಳಿಗೆ ನಿತ್ಯ ರಾತ್ರಿ ವೇಳೆ ಕಾಡಾನೆ ದಾಳಿಗೆ ಒಳಗಾಗುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

ಈ ಭಾಗದ ಸುತ್ತಲಿನ ಪ್ರದೇಶದಲ್ಲಿ 140 ಮನೆಗಳಿದ್ದು, ಸಂಜೆಯಿಂದ ರಾತ್ರಿವರೆಗೆ ಗ್ರಾಮಸ್ಥರು ಓಡಾಡಲು ನಡುಕವುಂಟಾಗುತ್ತದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ನೂರಾರು ವರ್ಷಗಳಿಂದ ಈ ಪ್ರದೇಶದಲ್ಲೇ ನಾವು ವಾಸಿಸುತ್ತಿದ್ದು, ಗದ್ದೆ ಮತ್ತು ತೋಟಗಳನ್ನೇ ಅವಲಂಬಿತರಾಗಿ ಜೀವನ ಸಾಗಿಸುತ್ತಿದ್ದೇವೆ. ಆದರೆ 15-20 ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಆನೆ ಬಾರದಂತೆ 20 ಅಡಿ ಉದ್ದ, ಹತ್ತು ಅಡಿ ಅಗಲದ ಅರಣ್ಯ ಇಲಾಖೆ ಕಂದಕ ನಿರ್ವಿುಸಿದ್ದು, ಅದು ಈಗ ಪ್ರತೀ ವರ್ಷದ ಮಳೆಯಿಂದ ಮಣ್ಣು ತುಂಬಿ ಮುಚ್ಚಿಹೋಗಿದೆ. ಅದರಿಂದ ಕಾಡುಕೋಣಗಳು ಮತ್ತು ಆನೆಗಳು ಬರಲು ಅನುಕೂಲವಾಗಿದ್ದು, ಅದನ್ನು ತಡೆಗಟ್ಟಲು ಮತ್ತೆ ಕಂದಕವನ್ನು ನಿರ್ವಿುಸುವ ಜತೆಗೆ ಪ್ರಾಣಿ ಹಾವಳಿ ತಡೆಗಟ್ಟದಿದ್ದಲ್ಲಿ ಮುಂದೆ ಯಾವುದೇ ರೀತಿ ಅಪಾಯ ಸಂಭವಿಸಿದಲ್ಲಿ ಅಧಿಕಾರಿಗಳೇ ನೇರ ಹೊಣೆ ಎಂದು ಕಸಾಪ ಜಾಗರ ಹೋಬಳಿ ಅಧ್ಯಕ್ಷ ರವಿ ತಿಳಿಸಿದ್ದಾರೆ.