ಬೈಲಹೊಂಗಲ: ಕೋವಿಡ್-19 ಹಾವಳಿ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನ ಶೋಕಾಚರಣೆಯ ಹಿನ್ನೆಲೆಯಲ್ಲಿ ಕಿತ್ತೂರು ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು ತಮ್ಮ 47ನೇ ಜನ್ಮದಿನವನ್ನು ಬುಧವಾರ ಸರಳವಾಗಿ ಆಚರಿಸಿಕೊಂಡರು. ಬುಧವಾರ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ಕ್ಷೇತ್ರದ ಜನರಿಗೆ ಎಲ್ಲ ರೀತಿಯಿಂದ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಂಡಿರುವುದಾಗಿ ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.
ಕಿತ್ತೂರು ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಉದ್ದೇಶ ಹೊಂದಲಾಗಿದ್ದು, ಎಲ್ಲ ಸರ್ಕಾರಿ ಕಚೇರಿಗಳನ್ನು ನಿರ್ಮಿಸುವ ಗುರಿ ಇದೆ. ಹೆಚ್ಚೆಚ್ಚು ನೀರಾವರಿಗೆ ಆದ್ಯತೆ ನೀಡುತ್ತ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಆರೋಗ್ಯ, ಶಿಕ್ಷಣ, ಸಹಕಾರಿ ಕ್ಷೇತ್ರಗಳನ್ನು ಬಲವರ್ಧನೆ ಮಾಡಲಾಗುವುದು. ಯುವಕರಿಗೆ ಉದ್ಯೋಗ ನೀಡಲು ಒತ್ತು ನೀಡಲಾಗುವುದು. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಏಳಿಗೆಗೆ ಗುರಿ ಹೊಂದಲಾಗಿದೆ ಎಂದರು.
ಶಾಸಕರಾಗಿ ಕೇವಲ ಎರಡು ವರ್ಷಗಳಲ್ಲಿಯೇ ಕ್ಷೇತ್ರದ ಅಭಿವೃದ್ಧಿಗೆ 560 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಭರದಿಂದ ಮಾಡಿಸುತ್ತಿರುವ ಶಾಸಕರು ಈ ಬಾರಿ ಅಭಿವೃದ್ಧಿ ಪಥದಲ್ಲಿ ತಮ್ಮ ಜನ್ಮದಿನ ಆಚರಿಸಿ ಕೊಳ್ಳುತ್ತಿರುವುದು ವಿಶೇಷವಾಗಿದೆ. ಕ್ಷೇತ್ರದಲ್ಲಿ ಒಂದೆಡೆ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಇದು ಕ್ಷೇತ್ರದ ಜನತೆಗೆ ಸಂತೋಷದ ವಿಷಯವಾಗಿದ್ದರೆ, ಇನ್ನೊಂದೆಡೆ ಶಾಸಕರ ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಮಾಡಬೇಕೆಂದುಕೊಂಡಿದ್ದ ಅವರ ಅಪಾರ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ಸುಳ್ಳಲ್ಲ.
ಚನ್ನಮ್ಮ ಕಿತ್ತೂರು ವರದಿ: ಶಾಸಕ ಮಹಾಂತೇಶ ದೊಡಗೌಡರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾ ಗ್ರಾಮೀಣ ಬಿಜೆಪಿ ಉಪಾಧ್ಯಕ್ಷ ಸಂದೀಪ ದೇಶಪಾಂಡೆ ಮಾತನಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ ಮತಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ತಂದು ವಿವಿಧ ಕಾಮಗಾರಿ ಕೈಗೊಂಡಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಗಟ್ಟಿಗೊಳ್ಳಲಿದೆ. ಯುವಕರಿಗೆ ಮಹಾಂತೇಶ ಅವರು ಮಾದರಿಯಾಗಿದ್ದಾರೆ ಎಂದರು.
ಹನುಮಂತ ಲಂಗೋಟಿ, ಕಿರಣ ಪಾಟೀಲ, ಮಂಜುನಾಥ ದೊಡಮನಿ, ಮಹಾಂತೇಶ ನಾಗಲಾಪುರ, ಮಹಾಂತೇಶ ಮಾತಣ್ಣವರ, ನವೀಣ ಪಟ್ಟಣಶೆಟ್ಟಿ, ಪಾಪು ನರಗುಂದ, ಶಂಕರ ಗುರುಪುತ್ರ ಇದ್ದರು. ಮಹಾಲಕ್ಷ್ಮೀ ದರ್ಶನ: ಜನ್ಮದಿನದ ಅಂಗವಾಗಿ ಶಾಸಕ ಮಹಾಂತೇಶ ದೊಡ್ಡಗೌಡರ ಕುಟುಂಬ ಸಮೇತ ಕೊಲ್ಲಾಪುರ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.