ಹುಧಾ ಅವಳಿನಗರದಲ್ಲಿ ಜ್ವರ ಫುಲ್ ‘ವೈರಲ್’

ಗಣಪತಿ ಭಟ್ ಹುಬ್ಬಳ್ಳಿ

ಯಾಕೋ ಮೈ ಕೈ ನೋವು, ತುಂಬಾ ಸುಸ್ತು, ಹೆಜ್ಜೆ ಮುಂದಿಡುವುದೂ ಕಷ್ಟ.. ತಲೆ ಸುತ್ತು, ಹೊಟ್ಟೆಯಲ್ಲಿ ತ್ರಾಸು… ಇದು ಇತ್ತೀಚೆಗೆ ವೈರಲ್ ಜ್ವರದಿಂದ ಬಳಲುತ್ತಿರುವವರ ಮಾತಿದು.

ಕಳೆದ 15 ದಿನಗಳಿಂದ ‘ವೈರಲ್ ಇನ್​ಫೆಕ್ಷನ್’ನಿಂದ ಬಳಲುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ. ಸರ್ಕಾರಿ ಆಸ್ಪತ್ರೆ, ಖಾಸಗಿ ಕ್ಲಿನಿಕ್​ಗಳಲ್ಲಿ ವೈರಲ್ ಜ್ವರದಿಂದ ತಪಾಸಣೆಗೊಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜ್ವರ ಎಂದರೆ ಕೆಮ್ಮು, ಕಫ, ನೆಗಡಿಯಾಗುವುದನ್ನು ಕೇಳಿದ್ದೇವೆ. ಆದರೆ, ಈ ಬಾರಿಯ ‘ವೈರಾಣು’ ವಿಚಿತ್ರವಾಗಿದೆ. ಜ್ವರದಿಂದ ಬಳಲಿದ ಹಲವರು ಜ್ವರ ಕಡಿಮೆಯಾದರೂ ನಂತರ ಒಂದು ವಾರ ಆಯಾಸ, ಸುಸ್ತಿನಿಂದ ನಿತ್ರಾಣಗೊಳ್ಳುತ್ತಿದ್ದಾರೆ. ಕಡಿಮೆ ಎಂದರೂ 10-12 ದಿನ ಜ್ವರದ ಅಡ್ಡ ಪರಿಣಾಮ ಎದುರಿಸಿದವರಿದ್ದಾರೆ.

ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರೂ ಜ್ವರದಿಂದ ಬಳಲುತ್ತಿದ್ದಾರೆ. ಮನೆಯಲ್ಲಿ ಒಬ್ಬರಿಗೆ ಶುರುವಾಗುವ ಜ್ವರ ಮನೆಮಂದಿಗೆಲ್ಲ ಹಬ್ಬುತ್ತಿದೆ. ಕಫ, ನೆಗಡಿ, ಕೆಮ್ಮು, ಸುಸ್ತು, ಜ್ವರದ ಲಕ್ಷಣವಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ಹಲವರು ಹಾಸಿಗೆ ಹಿಡಿದಿದ್ದಾರೆ. ಜ್ವರದಿಂದಾಗಿ ಬಾಯಿ ರುಚಿಯನ್ನೂ ಕಳೆದುಕೊಳ್ಳುವಂತಾಗಿದ್ದು, ಆಹಾರ ಸೇವಿಸುವುದೇ ಕಷ್ಟಕರವಾಗಿದೆ. ಸಮರ್ಪಕ ಆಹಾರ ಸೇವನೆ ಇಲ್ಲದಿರುವುದರಿಂದ ದೇಹದಲ್ಲಿ ನಿಶ್ಯಕ್ತಿ ಉಂಟಾಗಿ ಯಾವ ಕೆಲಸ ಮಾಡುವುದಕ್ಕೂ ಉತ್ಸಾಹವೇ ಇಲ್ಲದಂತಾಗಿದೆ ಎಂದು ಜ್ವರ ಪೀಡಿತರು ಪತ್ರಿಕೆಯೊಂದಿಗೆ ಅನುಭವ ಹಂಚಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಚಿಕೂನ್ ಗುನ್ಯಾ ರಾಜ್ಯಾದ್ಯಂತ ಹರಡಿತ್ತು. ಆಗಲೂ ಇದೇ ರೀತಿ ಮೈ ಕೈ ನೋವು ವಿಪರೀತವಾಗಿತ್ತು. ಈಗಲೂ ಅದೇ ನಮೂನೆಯ ಸುಸ್ತು ಆವರಿಸಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಸ್ವಚ್ಛತೆಗೆ ಆದ್ಯತೆ ನೀಡಿ: ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಕುಂಡ, ಟಯರ್ ಇತ್ಯಾದಿಗಳಲ್ಲಿ ನೀರು ಸಂಗ್ರವಾಗಿದ್ದರೆ ಕೂಡಲೇ ಸ್ವಚ್ಛಗೊಳಿಸಬೇಕು. ವಾರ, ಹದಿನೈದು ದಿನಗಳಿಂದ ನೀರು ನಿಂತರೆ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘ ಮತ್ತಿತರ ಜ್ವರ ಹರಡುವ ಸಾಧ್ಯತೆ ಹೆಚ್ಚಿರುತ್ತವೆ. ಈ ವರ್ಷ ಸತತವಾಗಿ ಸುರಿದ ಮಳೆಯ ಕಾರಣ, ವಾತಾವರಣದಲ್ಲಿನ ಬದಲಾವಣೆಯಿಂದ ವೈರಲ್ ಜ್ವರ ಹೆಚ್ಚಾಗಲು ಕಾರಣ ಎನ್ನಬಹುದು. ಇಂಥದ್ದೇ ವೈರಲ್ ಎನ್ನುವಂತಿಲ್ಲ. ಇದೀಗ ಜಿಲ್ಲೆಯಲ್ಲಿ ಜ್ವರದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜನರು ಜಾಗ್ರತರಾಗಬೇಕು. ಜ್ವರದ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಜ್ವರ ಮೂರು ನಾಲ್ಕು ದಿನಗಳ ನಂತರವೂ ಮುಂದುವರಿದಿದ್ದರೆ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು, ವೈದ್ಯರು ನೀಡುವ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ತಾವೇ ವೈದ್ಯರಾಗುವ ಬದಲು ಆಸ್ಪತ್ರೆಗೆ ಹೋಗಿ ನಿಯಮಿತವಾಗಿ ಚೆಕ್ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೆಚ್ಚು ಹೆಚ್ಚು ನೀರು ಕುಡಿಯಬೇಕು. ವೈದ್ಯರು ಕೊಟ್ಟ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಜ್ವರದ ಲಕ್ಷಣಗಳಾದ ನೆಗಡಿ, ಕೆಮ್ಮು, ಸುಸ್ತು ಕಂಡ ಬಂದ ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಮೈ ತುಂಬ ಬಟ್ಟೆ ಧರಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು ಉತ್ತಮ. ವೈರಲ್ ಜ್ವರಕ್ಕೆ ಇಂಥದ್ದೇ ವೈರಸ್ ಎಂದು ಹೇಳುವಂತಿಲ್ಲ. ವೈರಸ್ ಪ್ರತಿ ವರ್ಷವೂ ಬದಲಾಗುತ್ತಲೇ ಇರುತ್ತದೆ. ಮುಂಜಾಗ್ರತೆ ಕ್ರಮ ಕೈಗೊಳ್ಳುವುದರಿಂದ ಜ್ವರದಿಂದ ಗುಣಮುಖರಾಗಬಹುದು.

| ಡಾ. ನೀಲಾ ಹೂಲಿ

ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಗರ ಹುಬ್ಬಳ್ಳಿ

ವಾತಾವರಣ ಬದಲಾದಂತೆ ಥಂಡಿ ಜ್ವರ, ಬರೀ ಜ್ವರ ಬರುತ್ತವೆ. ಆಗ ಸ್ವಯಂ ಸಂರಕ್ಷಣೆ ಅಗತ್ಯ. ಸೊಳ್ಳೆಗಳು ಕಚ್ಚದಂತೆ ನೋಡಿಕೊಳ್ಳಬೇಕು. ಆಗಾಗ ಕಾಯಿಸಿ ಆರಿಸಿದ ನೀರು ಕುಡಿಯಬೇಕು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.

-ಡಾ. ಶ್ರೀಧರ ದಂಡಪ್ಪನವರ, ಚಿಟಗುಪ್ಪಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ

Share This Article

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…