ಪಂಕಜ ಕೆ.ಎಂ. ಬೆಂಗಳೂರು
ಗರ್ಭದಲ್ಲಿರುವಾಗಲೇ ಕಾಣಿಸಿಕೊಳ್ಳುವ ನ್ಯೂನತೆ ಹಾಗೂ ಅನುವಂಶಿಕ ಕಾಯಿಲೆ ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ನಗರದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (ಐಜಿಐಸಿಎಚ್) ‘ಫೀಟಲ್ ಮೆಡಿಸಿನ್ ಸೆಂಟರ್’ (ಎಫ್ಎಂಸಿ) ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ.
ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಈ ಸೆಂಟರ್ ಸ್ಥಾಪನೆಗೊಳ್ಳುತ್ತಿದ್ದು, ಇದಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್) ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ 1 ಕೋಟಿ ರೂ. ದೇಣಿಗೆ ನೀಡಿದೆ. ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ವೈದ್ಯಕೀಯ ಪರಿಕರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ.
ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇದೆಯಾದರೂ ಹೆಚ್ಚು ದರ ಇರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ತಂತ್ರಜ್ಞಾನದ ಲಾಭ ಪಡೆಯುವುದು ಕಷ್ಟ. ಹೀಗಾಗಿ ಐಜಿಐಸಿಎಚ್ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದು, ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಹಾಗೂ ಉಳಿದವರಿಗೆ ಅತಿ ಕಡಿಮೆ ದರದಲ್ಲಿ ಸೇವೆ ದೊರೆಯಲಿದೆ.
ಸಾವಿರಕ್ಕೆ 14 ಮಕ್ಕಳ ಸಾವು: ದೇಶದಲ್ಲಿ ಅನುವಂಶಿಕ ಸೇರಿ ನಾನಾ ಆರೋಗ್ಯ ಸಮಸ್ಯೆಗಳಿಂದ, ಜನಿಸಿದ ವರ್ಷದೊಳಗೆ ಸಾವಿರ ಶಿಶುಗಳಲ್ಲಿ ಶೇ.25.79 ಮರಣ ಹೊಂದುತ್ತಿವೆ. ಕರ್ನಾಟಕದಲ್ಲಿ ಸಾವಿರ ಶಿಶುಗಳಲ್ಲಿ 14 ಜನಿಸಿದ ಒಂದು ವರ್ಷದೊಳಗೆ ಸಾವನ್ನಪ್ಪುತ್ತಿವೆ. ಫೀಟಲ್ ಮೆಡಿಸಿನ್ ಸೆಂಟರ್‌ನಿಂದಾಗಿ ಗರ್ಭಾವಸ್ಥೆಯಲ್ಲಿ ಸಮಸ್ಯೆ ಪತ್ತೆಹೆಚ್ಚಿ ಚಿಕಿತ್ಸೆ ನೀಡುವ ಮೂಲಕ ಶಿಶುಗಳ ಮರಣ ಪ್ರಮಾಣ ತಗ್ಗಿಸಬಹುದಾಗಿದೆ ಎನ್ನುತ್ತಾರೆ ಸಂಸ್ಥೆಯ ಮಕ್ಕಳ ತಜ್ಞ (ಅನುವಂಶಿಕ ಕಾಯಿಲೆ) ಡಾ. ಸಂಜೀವ್.
ಏನಿದು ಎಫ್ಎಂಸಿ? ಪ್ರಸವಪೂರ್ವ ಭ್ರೂಣದ ಪರೀಕ್ಷೆ ಇದಾಗಿದ್ದು, ಗರ್ಭಾವಸ್ಥೆಯ ಉದ್ದಕ್ಕೂ ತಾಯಿ- ಮಗುವಿನ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ನಡೆಸುವ ಮೇಲ್ವಿಚಾರಣೆಯನ್ನು ಎಫ್ಎಂಸಿ ಮಾಡಲಿದೆ. ಇದರಿಂದ ಗರ್ಭಾವಸ್ಥೆಯ ಮೊದಲ ಹಂತದಲ್ಲೇ ಅಂದರೆ ಮೂರು ತಿಂಗಳ ಒಳಗೆ ಭ್ರೂಣದ ಅಸಹಜತೆಗಳು, ಅಂಗ ನ್ಯೂನತೆಗಳು, ರಚನಾತ್ಮಕ ಹಾಗೂ ಅನುವಂಶಿಕ ಸಮಸ್ಯೆಗಳು ಸೇರಿ ಒಟ್ಟಾರೆ ಆರೋಗ್ಯವನ್ನು ನಿರ್ಣಯಿಸಿ ಅಗತ್ಯ ಇದ್ದಲ್ಲಿ ಭ್ರೂಣಾವಸ್ಥೆಯಲ್ಲಿಯೇ ಚಿಕಿತ್ಸೆ ನೀಡಿ ಸಮಸ್ಯೆ ಗುಣಪಡಿಸಬಹುದಾಗಿದೆ. ಒಂದು ವೇಳೆ ಭ್ರೂಣದಲ್ಲೇ ಸರಿಪಡಿಸಲಾಗದ ಗಂಭೀರ ಸ್ವರೂಪದ ಸಮಸ್ಯೆ ಕಂಡುಬಂದಲ್ಲಿ, ಜನಿಸಿದ ಒಂದು ವರ್ಷದೊಳಗೆ ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿದ್ದ ಸಂದರ್ಭದಲ್ಲಿ ತಾಯಿಯ ಆರೋಗ್ಯಕ್ಕೆ ತೊಂದರೆ ಆಗುವ ಮುನ್ನವೇ ಕಾಯ್ದೆ ಅನ್ವಯ ಗರ್ಭಪಾತ ಮಾಡಿಸಲು ನೆರವಾಗಲಿದೆ.
ಚಿಕಿತ್ಸಾ ವಿಧಾನ: ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಲ್ಲಿ, ಮೊದಲ ಶಿಶುವಿಗೆ ಆನುವಂಶಿಕ ಅಥವಾ ಇತರೆ ನ್ಯೂನತೆ ಇದ್ದಾಗ, ಐವಿಎ್ ಮೂಲಕ ಗರ್ಭಧರಿಸಿದ್ದರೆ, ರಕ್ತ ಸಂಬಂಧಿಗಳಿಗೆ ಗಂಭೀರ ಸ್ವರೂಪದ ಕಾಯಿಲೆ ಇದ್ದಾಗ ಅಥವಾ ಭ್ರೂಣದಲ್ಲಿ ವ್ಯತ್ಯಾಸಗಳು ಕಂಡುಬಂದ ಸಂದರ್ಭದಲ್ಲಿ ಸ್ಕಾೃನ್ ಮಾಡಲಾಗುವುದು. ಬಳಿಕ ಭ್ರೂಣದಲ್ಲಿ ಸಮಸ್ಯೆ ಇರುವ ಭಾಗದಿಂದ ಸಣ್ಣ ಸೂಜಿ ಮೂಲಕ ರಕ್ತವನ್ನು ತೆಗೆದು ಪರೀಕ್ಷೆ ನಡೆಸಿ ಸಮಸ್ಯೆಯನ್ನು ನಿಖರವಾಗಿ ಪತ್ತೆಹಚ್ಚಬಹುದು. ಅದೇ ರೀತಿ ಸಾಧ್ಯತೆಗಳಿದ್ದಲ್ಲಿ ಭ್ರೂಣದಲ್ಲಿ ನಿರ್ದಿಷ್ಟ ಸಮಸ್ಯೆಗೆ ಚಿಕಿತ್ಸೆ ಒದಗಿಸುವ ಮೂಲಕ ಭ್ರೂಣವು ಆರೋಗ್ಯಕರವಾಗಿ ಬೆಳವಣಿಗೆ ಹೊಂದುವಂತೆ ಮಾಡುವುದಾಗಿದೆ.
ಕೋಟ್:
ಫೀಟಲ್ ಮೆಡಿಸಿನ್ ಸೆಂಟರ್‌ನಿಂದಾಗಿ ಭ್ರೂಣದಲ್ಲೇ ಅಂಗ ನ್ಯೂನತೆ, ಬುದ್ಧಿ ಮಾಂದ್ಯತೆ, ದೃಷ್ಟಿ ಮತ್ತು ಶ್ರವಣ ದೋಷ, ಮಿದುಳಿನ ಸಮಸ್ಯೆ, ರಕ್ತ ಕಣಗಳ ಸಮಸ್ಯೆ, ಶ್ವಾಸಕೋಶದ ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವಂತ ಶಿಶು ಜನನಕ್ಕೆ ಸಹಕಾರಿಯಾಗಲಿದೆ.
ಡಾ. ಸಂಜಯ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ