ಕನಕಗಿರಿ: ಬುತ್ತಿ ಜಾತ್ರೆ ಭಾವೈಕ್ಯ ಮೂಡಿಸುವದರ ಜತೆಗೆ ಭಾವನೆಗಳನ್ನು ಬೆಸೆಯುತ್ತವೆ ಎಂದು ಪ್ರವಚನಕಾರ ದೊಡ್ಡಬಸವಯ್ಯ ಶಾಸ್ತ್ರಿ ಶ್ರೀಧರ ಗಡ್ಡೆ ಹೇಳಿದರು.
ತಾಲೂಕಿನ ನವಲಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ಜಡೆಸಿದ್ದ ಶಿವಯೋಗಿಗಳ 42ನೇ ವರ್ಷದ ಪುರಾಣ ನಿಮಿತ್ತ ಭಾನುವಾರ ಆಯೋಜಿಸಿದ್ದ ಜಾತ್ರೆಯಲ್ಲಿ ಮಾತನಾಡಿದರು.
ಜಾತ್ರೆ, ಹಬ್ಬಗಳಿಂದ ಗ್ರಾಮಗಳು ಧಾರ್ಮಿಕ ಕೇಂದ್ರಗಳಾಗಿ ಬದಲಾಗಲಿವೆ. ಜಾತ್ರೆಯಲ್ಲಿ ಕೇವಲ ಸ್ಥಳೀಯರಲ್ಲದೆ ಸುತ್ತಲಿನ ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತಿ ಭೇದ ಮರೆತು ಎಲ್ಲರೂ ಪಾಲ್ಗೊಳ್ಳುವರು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ವಿರೂಪಣ್ಣ ಕಲ್ಲೂರು ಮಾತನಾಡಿ, ಮೇಲು-ಕೀಳು ಎನ್ನುವ ಭಾವನೆ ಹೋಗಲಾಡಿಸುವುದರ ಜತೆಗೆ ಸಮಾನತೆ ಉಂಟು ಮಾಡುತ್ತದೆ ಎಂದರು. ನೆಹರು ಶಾಲೆಯಿಂದ ಪ್ರಾರಂಭಗೊಂಡ ಬುತ್ತಿ ಜಾತ್ರೆಯ ಮೆರವಣಿಗೆ ಮಾಕಣ್ಣ ಕಂಬಳಿ ವೃತ್ತದ ಮೂಲಕ ಬುದ್ಧ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಸಂಪನ್ನಗೊಂಡಿತು.
ಮಹಿಳೆಯರು ನಾನಾ ಖಾದ್ಯ ಹೊತ್ತು ತಂದಿದ್ದ ಬುತ್ತಿಯನ್ನು ಸಾಮೂಹಿಕವಾಗಿ ಊಟಮಾಡಿದರು. ಗವಾಯಿ ಶರಣಬಸವ ನವಲಿ, ಶಿವಯ್ಯಸ್ವಾಮಿ, ತಬಲವಾದಕ ವೀರೇಶ ಬಡಿಗೇರ್ ಇತರರಿದ್ದರು.