ಶೃಂಗೇರಿ ಶಾರದೆಗೆ ಮಯೂರ ಅಲಂಕಾರ

ಶೃಂಗೇರಿ: ಶ್ರೀ ಶಾರದೆಯು ಮಯೂರವಾಹನ ಅಲಂಕಾರದಲ್ಲಿ ಕಂಗೊಳಿಸಿದಳು. ಕೈಯಲ್ಲಿ ಆಯುಧವನ್ನು ಧರಿಸಿ, ನವಿಲನ್ನು ಏರಿ ಕುಮಾರಸ್ವಾಮಿ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸಿದಳು.

ಶ್ರೀಮಠದಲ್ಲಿ ಋತ್ವಿಜರ ನೇತೃತ್ವದಲ್ಲಿ ನಾಲ್ಕು ವೇದಗಳ ಪಾರಾಯಣ, ದೇವಿ ಭಾಗವತ, ಮಾಧವೀಯ, ಶಂಕರ ದಿಗ್ವಿಜಯ, ಲಕ್ಷ್ಮೀನಾರಾಯಣ ಹೃದಯ, ಪ್ರಸ್ಥಾನತ್ರಯ ಭಾಷ್ಯ ಪಾರಾಯಣಗಳು ನಡೆದವು.

ಸಂಜೆ 6 ಗಂಟೆಗೆ ನಡೆದ ರಾಜಬೀದಿ ಉತ್ಸವದಲ್ಲಿ ಕೂತುಗೋಡು ಗ್ರಾಪಂ ಭಕ್ತರು, ಸಿದ್ಧ ಸಮಾಧಿಯೋಗದ ಧ್ಯಾನಿಗಳು, ಸದ್ಭಾವನಾ ಸಂಘ, ವೈಕುಂಠಪುರ ಗೆಳೆಯರ ಬಳಗ, ಪ್ರಕೃತಿ ರೈತ ಸ್ವಸಹಾಯ ಸಂಘ, ಕನ್ಯಾಕುಮಾರಿ ರೈತ ಮಹಿಳಾ ಸ್ವಸಹಾಯ ಸಂಘ, ಗೋಚವಳ್ಳಿ ಸ್ಪೂರ್ತಿ ಯುವಕ ಸಂಘ, ತಾಲೂಕು ಒಕ್ಕಲಿಗರ ಸಂಘ, ಯುವ ಒಕ್ಕಲಿಗರ ವೇದಿಕೆ, ಸಹ್ಯಾದ್ರಿ ಸಂಘ, ವಿವಿಧ ದೇವಸ್ಥಾನ ಸಮಿತಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.

4ನೇ ದಿನದ ದರ್ಬಾರ್: ಶ್ರೀಮಠದ ಸಂಪ್ರದಾಯದಂತೆ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೀಶ್ವರ ತೊಟ್ಟಿಯಿಂದ ಶ್ರೀ ಶಾರದಾ ಅಮ್ಮನವರ ದೇವಾಲಯಕ್ಕೆ ಆಗಮಿಸಿದರು. ಜಗನ್ಮಾತೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಶ್ರೀಗಳು ಆಸೀನರಾದರು. ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರಾವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರ ನೀರಾಜನದೊಂದಿಗೆ ದರ್ಬಾರ್ ಮುಕ್ತಾಯಗೊಂಡಿತು.