ಸಂಭ್ರಮ ಸೂತಕ ಆಗದಿರಲಿ

ಭಾರತ ಹಬ್ಬಗಳ ಬೀಡು. ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಬೆಸೆಯುವ ಸಂಭ್ರಮ ದೊಡ್ಡವರಿಗೆ ಭಕ್ತಿ, ಯುವಜನರಿಗೆ ಮನರಂಜನೆಯಾದರೆ ಮಕ್ಕಳ ಪಾಲಿಗೆ ಸಿಹಿಯೂಟ. ಆದರೆ ಇದೇ ಮನರಂಜನೆ ಅತಿಯಾದರೆ ಬದುಕೇ ಕಹಿ. ಉತ್ಸಾಹ ಎಲ್ಲೆ ಮೀರಿ, ಅವಘಡಗಳಾಗಿ ಕಾಮೋಡ ಕವಿದರೆ ಆಚರಣೆಯ ಅರ್ಥವೇ ಬದಲಾಗುತ್ತದೆ.

| ಯಗಟಿ ರಘು ನಾಡಿಗ್

ಘಟನೆ 1

ಅದು ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮ. ಗಣೇಶ ಹಬ್ಬದ ಸಂಭ್ರಮದಲ್ಲಿ ಊರಿಗೆ ಊರೇ ಮೈಮರೆತಿತ್ತು. ರೈಲು ನಿಲ್ದಾಣದ ಸಮೀಪ ಪ್ರತಿಷ್ಠಾಪಿಸಿ ಬರೋಬ್ಬರಿ 9 ದಿನಗಳವರೆಗೆ ಪೂಜೆ-ಪುನಸ್ಕಾರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ನಂತರ ಅಂದು ಗಣಪನನ್ನು ನೀರಲ್ಲಿ ವಿಸರ್ಜಿಸುವ ಕಾರ್ಯಕ್ರಮ. ಬಾಜಾ-ಬಜಂತ್ರಿ, ಶಿಳ್ಳೆ-ಕುಣಿತಗಳೊಂದಿಗೆ ವಿಜೃಂಭಣೆಯಿಂದ ಸಾಗಿದ ಮೆರವಣಿಗೆ ಬಾವಿಯ ಬಳಿ ಬಂತು. ವಿಸರ್ಜನೆಗೂ ಮುಂಚೆ ಗಣಪನ್ನು ಪೂಜಿಸಿ ಇನ್ನೇನು ಬಾವಿಯಲ್ಲಿ ವಿಸರ್ಜಿಸಬೇಕಿತ್ತು. ಅಷ್ಟರಲ್ಲಿ ಮೂವರು ಯುವಕರು ಬಾವಿಗೆ ಹಾರಿದರು. ವಿಸರ್ಜನೆಗೊಂಡ ಗಣಪನ್ನು ಸಮರ್ಪಕವಾಗಿ ನೀರಲ್ಲಿ ಮುಳುಗಿಸುವುದು ಅವರ ಇರಾದೆ. ಅಂದುಕೊಂಡಂತೆಯೇ ಗಣಪ ನೀರಿಗಿಳಿದ, ಜೈಕಾರವೂ ತಾರಕಕ್ಕೇರಿತು. ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸದಷ್ಟು ಗೊಂದಲ-ಗಲಾಟೆ. ಆದರೆ ಬಾವಿಗೆ ಜಿಗಿದಿದ್ದ ಮೂವರಲ್ಲಿ ಮೇಲೆ ಬಂದಿದ್ದು ಇಬ್ಬರು ಮಾತ್ರ; ಮತ್ತೋರ್ವ ಮೇಲೆ ಬರಲಾಗದೆ ಬದುಕಿಗೆ ಅಚಾನಕ್ಕಾಗಿ ಪೂರ್ಣವಿರಾಮ ಹಾಕಿಕೊಂಡ ದುರ್ದೈವಿ ಎನಿಸಿದ. ಗಣೇಶೋತ್ಸವದ ಸಂಭ್ರಮಕ್ಕೆ ಯುವಕನ ಸಾವಿನ ಸೂತಕದ ಕರಿಛಾಯೆ ಮುಸುಕಿತ್ತು….

ಘಟನೆ 2

ಅದು ಬೆಂಗಳೂರಿನ ಕುರುಬರಹಳ್ಳಿ ಬಡಾವಣೆ. ಗಣೇಶ ಮೂರ್ತಿಯ ವಿಸರ್ಜನೆಗೆಂದು ಟೆಂಪೋ ಒಂದರ ಮೇಲೆ ಮೂರ್ತಿಯನ್ನು ಕೂರಿಸಿಕೊಂಡು ಮೆರವಣಿಗೆ ಸಾಗಿತ್ತು. ತಮಟೆಯ ಸದ್ದಿನಿಂದ ಆಕರ್ಷಿತನಾಗಿ ಮನೆಯಿಂದ ಹೊರಗಡಿಯಿಟ್ಟ 15ರ ಹರೆಯದ ಹುಡುಗನೊಬ್ಬ ರಸ್ತೆಯಂಚಲ್ಲಿ ನಿಂತು ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ. ಆದರೆ ವಾಹನ ಏಕಾಏಕಿ ನಿಯಂತ್ರಣ ಕಳೆದುಕೊಂಡು ಎಲ್ಲೆಂದರಲ್ಲಿ ನುಗ್ಗತೊಡಗಿ ಹಾದಿಯಲ್ಲಿದ್ದ ವಾಹನಗಳು, ಜನರಿಗೆ ಡಿಕ್ಕಿಹೊಡೆಯುತ್ತ ಸಾಗಿತು. ಈ ಹುಡುಗನಿಗಂತೂ ಜೋರಾಗಿ ಅಪ್ಪಳಿಸಿತು. ಪರಿಣಾಮ, ಕನಸುಕಂಗಳ ಬಾಲಕ ಇಲ್ಲವಾದ (ಈತನ ಪೋಷಕರು ಹೇಳುವಂತೆ ವಾಹನ ಚಾಲಕ ಮದ್ಯಪಾನ ಮಾಡಿದ್ದ). ಮರಳಿನ ದಿಬ್ಬಕ್ಕೆ ವಾಹನ ಡಿಕ್ಕಿ ಹೊಡೆಯದೇ ಹೋಗಿದ್ದಿದ್ದಲ್ಲಿ ಅವಘಡದ ತೀವ್ರತೆ ಮತ್ತಷ್ಟು ಹೆಚ್ಚುತ್ತಿತ್ತು ಎಂಬುದು ಪ್ರತ್ಯಕ್ಷ ಸಾಕ್ಷಿಗಳ ಅಭಿಮತ…..

ಹಬ್ಬದ ಸಂಭ್ರಮ-ಸಡಗರಗಳು ಸೂತಕವಾಗಿ ಪರಿಣಮಿಸಿ, ಹರತಾಳವಾಗಿಯೂ ಮಾರ್ಪಟ್ಟ ಇಂಥ ನಿದರ್ಶನಗಳು ಏನನ್ನು ಹೇಳುತ್ತವೆ? ‘ಅವಸರ, ಅವಿವೇಕದ ಕೈಗೆ ಬುದ್ಧಿ ಕೊಟ್ಟರೆ ಸಂಭವಿಸುವುದು ಅವಘಡವೇ..’ ಎಂಬ ಸತ್ಯವನ್ನಲ್ಲವೇ? ಅದು ದೇಶದಲ್ಲಿ ಬ್ರಿಟಿಷರ ಪಾರುಪತ್ಯ ಮತ್ತು ದಬ್ಬಾಳಿಕೆಗಳು ತೀವ್ರವಾಗಿದ್ದ ಕಾಲ. ಶತಾಯಗತಾಯ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಳ್ಳಲೇಬೇಕು ಎಂದು ಟೊಂಕಕಟ್ಟಿದ್ದ ಸ್ವಾತಂತ್ರ್ಯ ಹೋರಾಟಗಾರರು ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ದುಸ್ತರವಾಗಿದ್ದಂಥ ಕಹಿಪರ್ವವದು. ಹೀಗಾಗಿ, ಜನರನ್ನು ಒಂದೆಡೆ ಒಟ್ಟುಮಾಡಿ ಸ್ವಾತಂತ್ರ್ಯದ ಮಹತ್ವ ಮತ್ತು ಅದನ್ನು ದಕ್ಕಿಸಿಕೊಳ್ಳಬೇಕಾಗಿರುವ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡಬೇಕಿತ್ತು. ಅಂಥ ಭೂಮಿಕೆಯೊಂದರ ಕುರಿತು ಲೋಕಮಾನ್ಯ ಬಾಲಗಂಗಾಧರ ತಿಲಕರು ಆಲೋಚಿಸುತ್ತಿದ್ದಾಗ ಹೊಳೆದ ಪರಿಕಲ್ಪನೆಯೇ ಸಾರ್ವಜನಿಕ ಗಣೇಶೋತ್ಸವ.

ಘಟನೆ 3

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲೂ ಗಣೇಶ ಮೂರ್ತಿ ವಿಸರ್ಜನೆ ವೇಳೆ 25ರ ಹರೆಯದ ಯುವಕನೊಬ್ಬ ಅಚಾನಕ್ಕಾಗಿ ಮುಳುಗಿ ಮೃತಪಟ್ಟ. ಹಬ್ಬದ ಸಂಭ್ರಮವನ್ನು ಮೆಲುಕು ಹಾಕುತ್ತಿದ್ದ ಗ್ರಾಮಸ್ಥರಲ್ಲಿ ದಟ್ಟ ವಿಷಾದ ಆವರಿಸಿತು..

ಘಟನೆ 4

ಅದು ಕೊಪ್ಪಳ. ಗಣಪತಿ ವಿಸರ್ಜನೆ ಸಂಬಂಧಿತ ಮೆರವಣಿಗೆ ಹೊರಟಿತ್ತು. ಜತೆಯಲ್ಲಿ ಹಾಡು-ಕುಣಿತಕ್ಕೆ ಉತ್ತೇಜಿಸುವ ‘ಮ್ಯೂಸಿಕ್ ಸೌಂಡ್ ಸಿಸ್ಟಂ’ ಕೂಡ ಇತ್ತು. ಅಲ್ಲಿಗೆ ಬಂದ ಪೊಲೀಸರು ಆ ಸೌಂಡ್ ಸಿಸ್ಟಂ ಅನ್ನು ವಶಪಡಿಸಿಕೊಂಡಾಗ, ‘ಪೊಲೀಸ್ ಇಲಾಖೆ ನೀಡಿರುವ ಸೂಚನೆಯನ್ನು ಪಾಲಿಸಿದ್ದೇವೆ, 2 ಸಾವಿರ ಮೆಗಾವಾಟ್ ಸಾಮರ್ಥ್ಯಕ್ಕಿಂತ ಕಡಿಮೆಯ ಸೌಂಡ್ ಸಿಸ್ಟಂ ಅನ್ನೇ ಬಳಸಿದ್ದೇವೆ’ ಎಂದು ಮೆರವಣಿಗೆಯ ಆಯೋಜಕರು/ಯುವಕರು ಸಮರ್ಥಿಸಿಕೊಂಡರೂ ವಾಗ್ವಾದ ಶುರುವಾಗಿ ವಾತಾವರಣದಲ್ಲಿ ಕಾವೇರಿತು. ಹುಯಿಲು-ತಳ್ಳಾಟ ತಾರಕಕ್ಕೇರಿದಾಗ ಗತ್ಯಂತರವಿಲ್ಲದೆ ಪೊಲೀಸರು ಲಾಠಿಪ್ರಹಾರಕ್ಕೆ ಮುಂದಾದರು. ಇದರಿಂದ ಕೆರಳಿದ ಯುವಕರು, ವಿಸರ್ಜನೆಗೆಂದು ಒಯ್ಯುತ್ತಿದ್ದ ಗಣಪನ ಮೂರ್ತಿಯನ್ನು ವಾಹನದಿಂದ ಕೆಳಗಳಿಸಿ ಅಲ್ಲಿನ ವೃತ್ತವೊಂದರ ಬಳಿಯಿಟ್ಟು ಪ್ರತಿಭಟನೆಗೆ ಕುಳಿತರು. ಸ್ಥಳೀಯ ಪೊಲೀಸರು, ಡಿವೈಎಸ್​ಪಿ ಮಾತಿಗೆ ಪ್ರತಿಭಟನಾಕಾರರು ಜಗ್ಗದಿದ್ದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಸ್ಥಳಕ್ಕೆ ಬರಬೇಕಾಯಿತು. ಇಷ್ಟಾಗಿಯೂ ಕೆಲ ಕಿಡಿಗೇಡಿಗಳು ಕಲ್ಲುತೂರಾಟಕ್ಕೆ ಮುಂದಾದಾಗ ಬಿಗುವಿನ ವಾತಾವರಣ ನಿರ್ವಣವಾಯಿತು. ಕೊನೆಗೆ ಪೊಲೀಸ್ ಸಿಬ್ಬಂದಿಯೇ ಗಣೇಶ ಮೂರ್ತಿಯನ್ನು ವಿಸರ್ಜಿಸುವಂತಾಯಿತು….

ಹಬ್ಬದ ಸಂಭ್ರಮಾಚರಣೆ, ಆ ನೆಪದಲ್ಲಿ ಹಮ್ಮಿಕೊಳ್ಳುವ ಧಾರ್ವಿುಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಕುರಿತು ಅರಿವು ಮೂಡಿಸಲು ಅವರು ಮುಂದಾದರು. ವರ್ಷಗಳುರುಳಿದಂತೆ ಸಾರ್ವಜನಿಕ ಗಣೇಶೋತ್ಸವಕ್ಕೆ ದೊಡ್ಡ ಹರಹು-ಎತ್ತರಗಳೇ ದಕ್ಕಿಬಿಟ್ಟವು, ಇರಲಿ. ಆದರೆ, ಈಗ ನಾವು ಕಾಣುತ್ತಿರುವ ಗಣೇಶೋತ್ಸವಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳು ತಿಲಕರ ಪರಿಕಲ್ಪನೆಯ ಮುಂದುವರಿದ ಭಾಗಗಳಾಗಿವೆಯೇ ಅಥವಾ ಮೂಲೋದ್ದೇಶದಿಂದ ವಿಮುಖವಾಗಿವೆಯೇ ಎಂಬುದನ್ನು ಅವಲೋಕಿಸಲು ಇದು ಸಕಾಲ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಪೂಜೆ-ಪುನಸ್ಕಾರ, ಆಚರಣೆಗಳನ್ನು ಅವಕ್ಕಿರುವ ಮಹತ್ವವನ್ನು ಸಮರ್ಥವಾಗಿ ಮನಗಂಡು ಮುಂದುವರಿಸಿಕೊಂಡು ಹೋಗಲೇಬೇಕು. ಇದು ಸಮಾಜದ ವಿವಿಧ ಸ್ತರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಕೊಳಿಸುವ ಬಂಧಕವೂ ಹೌದು. ಆದರೆ, ಇಂಥ ಸಂಭ್ರಮವೇ ಬದುಕನ್ನು ಕಸಿಯುವಂತಾಗುವಷ್ಟರ, ಸಮಾಜದ ವಿವಿಧ ಸ್ತರಗಳು, ಗುಂಪುಗಳ ನಡುವೆ ವೈಷಮ್ಯ ಹುಟ್ಟುಹಾಕುವಷ್ಟರ ಮಟ್ಟಿಗೆ ವಿರೂಪಗೊಳ್ಳಬಾರದಲ್ಲವೇ?

ಇಂಥ ಧಾರ್ವಿುಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತಾಗಿ ಸರ್ಕಾರ ನಿಗದಿಪಡಿಸಿರುವ ಒಂದಷ್ಟು ನಿಯಮಗಳು, ಮಾರ್ಗದರ್ಶಿ ಸೂತ್ರಗಳೇ ಇವೆ. ಇವಕ್ಕೆ ಧಕ್ಕೆಯಾಗದಂತೆ, ಸಾರ್ವಜನಿಕರಿಗೆ ಮತ್ತು ಸಾರ್ವಜನಿಕ ಸ್ವತ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಹಬ್ಬ ಆಚರಿಸಿದರೆ ಯಾರೂ ಬೇಡವೆನ್ನುವುದಿಲ್ಲ. ಇಂಥ ಸಂದರ್ಭದಲ್ಲಿ ಸಾಕಷ್ಟು ಹಣ ಖರ್ಚಾಗುತ್ತದೆ, ಕಾರ್ಯಕ್ರಮಗಳ ಆಯೋಜನೆಗೆ ವಿವಿಧ ತೆರನಾದ ಸಾಧನ-ಸಂಪತ್ತುಗಳು ಬೇಕಾಗುತ್ತವೆ ಎಂಬುದೇನೋ ದಿಟ; ಅದಕ್ಕಾಗಿ ಸಾರ್ವಜನಿಕರಿಂದ ವಂತಿಗೆಯನ್ನೂ ಸಂಗ್ರಹಿಸಬೇಕಾಗುತ್ತದೆ. ಆದರೆ ಅದು ಬೆದರಿಕೆ ಹಾಕಿಯೋ ಇಲ್ಲವೇ ಬಲವಂತದಿಂದಲೋ ವಸೂಲು ಮಾಡುವಂಥದ್ದಾಗಿರಬಾರದಲ್ಲವೇ? ಹಬ್ಬದ ಆಚರಣೆಯ ಸಂಭ್ರಮ ಎಂದಾಕ್ಷಣ ಪಟಾಕಿ ಸಿಡಿಸುತ್ತ, ಬಣ್ಣಗಳನ್ನು ಎರಚುತ್ತ ಅಕ್ಷರಶಃ ಮಕ್ಕಳೇ ಆಗಿಬಿಡುವುದು ಮಾನವಸಹಜ ಸ್ವಭಾವ. ಆದರೆ ಇದರಿಂದಾಗಿ ಮತ್ತೊಬ್ಬರ ಆರೋಗ್ಯಕ್ಕೆ ಧಕ್ಕೆಯಾಗಬಾರದು ಎಂಬ ವಿವೇಕವೂ ಸಂಬಂಧಪಟ್ಟವರಲ್ಲಿ ಅಂತರ್ಗತವಾಗಿದ್ದರೆ ಒಳಿತಲ್ಲವೇ? ಭಾರಿ ಸದ್ದಿನ ಆಟಂಬಾಂಬ್​ಗಳ ಶಬ್ದಕ್ಕೆ ಹೃದ್ರೋಗಿಗಳಿಗೆ, ವಯಸ್ಸಾದವರಿಗೆ, ಶ್ರವಣಸೂಕ್ಷ್ಮತೆ ಇರುವವರಿಗೆ ಅದೆಷ್ಟು ತೊಂದರೆಯಾಗುತ್ತದೆ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕಲ್ಲವೇ?

ಹಬ್ಬದ ಸಂಭ್ರಮಾಚರಣೆಯೆಲ್ಲ ಮುಗಿದು ಗಣಪನನ್ನು ವಿಸರ್ಜಿಸುವ ಸಂದರ್ಭ ಬಂದಾಗಲೂ ಉತ್ಸಾಹ, ಖುಷಿ ಮೇರೆಮೀರದಂತೆ ನೋಡಿಕೊಳ್ಳಬೇಕಾದ್ದು ಅತ್ಯಗತ್ಯ. ಹಳ್ಳಿಗಳಲ್ಲಾದರೆ ಕೆರೆ-ಬಾವಿಗಳು, ತೊರೆಗಳು ಇದ್ದಾವು; ನಗರ ಪ್ರದೇಶಗಳಲ್ಲಿ ಇವು ವಿರಳವಾಗಿರುವುದರಿಂದ, ನಿಯೋಜಿತ ತಾಣಗಳಲ್ಲಿ ಕಲ್ಪಿಸಲಾಗಿರುವ ಕೃತಕ ಕುಂಟೆ ಅಥವಾ ಹೊಂಡಗಳಲ್ಲೇ ಮೂರ್ತಿಗಳನ್ನು ವಿಸರ್ಜಿಸಬೇಕಾಗಿ ಬರುತ್ತದೆ. ಇಂಥ ಸಂದರ್ಭಗಳಲ್ಲಿ ಅನಗತ್ಯ ಗೊಂದಲ, ದೊಂಬಿ, ತಳ್ಳಾಟಗಳಿಗೆ ಆಸ್ಪದ ನೀಡಿ ಅದು ಕಾನೂನು-ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುವಂತಾಗದ ಹಾಗೆ ನೋಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ಸಹಭಾಗಿಯ ಹೆಗಲಮೇಲಿನ ಹೊಣೆ.

‘ಅರೆ! ಹೆಚ್ಚು ಜನ ಸೇರಿರುವ ಸಂದರ್ಭದಲ್ಲಿ ಇವೆಲ್ಲ ಕಾಮನ್; ಅದಕ್ಕೆ ಇಷ್ಟೊಂದು ಎಚ್ಚರಿಕೆಯ ಅಗತ್ಯವಿದೆಯೇ?’ ಎಂಬುದಾಗಿ ಈ ಮಾತನ್ನು ಹಗುರವಾಗಿ ಪರಿಗಣಿಸಲಾಗದು ಎಂಬುದಕ್ಕೆ ಒಂದು ಊರಿನ ಕತೆಯನ್ನು ಸೂಚ್ಯವಾಗಿ ಹೇಳುವುದು ಸೂಕ್ತವಾದೀತು. ಅದು ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಎಂಬ ಗ್ರಾಮ. ಸರಿಸುಮಾರು 2,500 ಜನಸಂಖ್ಯೆಯಿರುವ ಆ ಊರಿನಲ್ಲಿ ಯಾವುದೇ ಜಾತಿಭೇದವಿಲ್ಲದೆ ಗಣೇಶೋತ್ಸವವನ್ನು ‘ನಾಡಹಬ್ಬ’ದ ರೀತಿಯಲ್ಲಿ ದಶಕಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿತ್ತು. ಭಾರಿ ಪೆಂಡಾಲುಗಳನ್ನು ನಿರ್ವಿುಸಿ, ವಿವಿಧ ಧಾರ್ವಿುಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಜೀವನೋಪಾಯಕ್ಕಾಗಿ ಹಳ್ಳಿಯಿಂದ ವಿವಿಧ ಪಟ್ಟಣಗಳಿಗೆ ತೆರಳಿದವರು, ಹಬ್ಬದ ಸಂಭ್ರಮಾಚರಣೆಯ ನೆಪವಿಟ್ಟುಕೊಂಡು 3 ದಿನಗಳವರೆಗೆ ಹಳ್ಳಿಯಲ್ಲಿ ಠಿಕಾಣಿ ಹೂಡುತ್ತಿದ್ದರು. ಆದರೆ 2 ವರ್ಷದ ಹಿಂದೆ ಗಣೇಶ ವಿಸರ್ಜನೆ ವೇಳೆ, ತುಂಗಭದ್ರಾ ನದಿಯಲ್ಲಿ ತೆಪ್ಪಕ್ಕೆ ತೆಪ್ಪವೇ ಮುಳುಗಿ 12 ಯುವಕರು ಮೃತಪಟ್ಟರು. ಕಷ್ಟಪಟ್ಟು ಓದಿ ಮೆಸ್ಕಾಂನಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಹಿರಿಯಮಗ ಹಾಗೂ ಇಂಜಿನಿಯರಿಂಗ್ ಓದುತ್ತಿದ್ದ ಕಿರಿಯ ಮಗ- ಹೀಗೆ ಒಂದೇ ಕುಟುಂಬದ 2 ಕುಡಿಗಳು ಕಣ್ಮರೆಯಾಗಿದ್ದೂ ಈ ದುರಂತದಲ್ಲೇ. ಈ ನೋವನ್ನು ಜೀರ್ಣಿಸಿಕೊಳ್ಳಲಾಗದ ಗ್ರಾಮಸ್ಥರು ಸಾರ್ವಜನಿಕ ಗಣೇಶೋತ್ಸವದಿಂದಲೇ ವಿಮುಖರಾದರು. ಮನೆಗಳಲ್ಲಾಗಲೀ, ಶಾಲೆಯಲ್ಲಾಗಲೀ ಗಣೇಶ ಪ್ರತಿಷ್ಠಾಪನೆಗೆ ಮನಸ್ಸು ಮಾಡಲಿಲ್ಲ. ತೆಪ್ಪದ ದುರಂತವಾದ ನಂತರ, ನದಿ ದಾಟಲೆಂದು ಸರ್ಕಾರದ ವತಿಯಿಂದ ಮೋಟಾರು ದೋಣಿಗಳ (ಲಾಂಚ್​ಗಳ) ವ್ಯವಸ್ಥೆ ಮಾಡಲಾಗಿದೆಯಾದರೂ, ಅದರಲ್ಲಿ ಹತ್ತುವ ಜನ ದುರಂತ ಸಂಭವಿಸಿದ ಸ್ಥಳ ಹತ್ತಿರವಾಗುತ್ತಿದ್ದಂತೆ ಗದ್ಗದಿತರಾಗುತ್ತಾರೆ….

ಗಣೇಶೋತ್ಸವದ ಸಂಭ್ರಮ-ಸಡಗರ ತಪ್ಪಲ್ಲ; ಆದರೆ ಬದುಕಿ ಬಾಳಬೇಕಾದ ಜೀವಗಳು ಆ ನೆಪದಲ್ಲಿ ಜೀವನಷ್ಟವನ್ನೋ ನೋವನ್ನೋ ತಂದುಕೊಳ್ಳುವಂತಾಗಬಾರದು, ಸಾರ್ವಜನಿಕರ ಸ್ವಾಸ್ಥ್ಯ ಮತ್ತು ನೆಮ್ಮದಿಗೆ, ಕಾನೂನು-ಸುವ್ಯವಸ್ಥೆಗೆ ಭಂಗವಾಗಬಾರದು ಎಂಬುದಷ್ಟೇ ಇಲ್ಲಿನ ಆಶಯ. ‘ಮಾನವ ಜನ್ಮ ದೊಡ್ಡದು, ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದಿದ್ದಾರೆ ದಾಸವರೇಣ್ಯರೊಬ್ಬರು. ಈ ಮಾತನ್ನು ಮರೆಯದಿರೋಣ…