ಸೋಂಪುರ ಜಾತ್ರೆಯಲ್ಲಿ ಸಂಕ್ರಾಂತಿ ಸಂಭ್ರಮ

ಬೆಂಗಳೂರು: ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ನೈಸ್​ರಸ್ತೆ ಸರ್ಕಲ್​ನಲ್ಲಿ ಮಂಗಳವಾರ ಕಣ್ಣು ಹಾಯಿಸಿದೆಡೆಯೆಲ್ಲಾ ಜನವೋ ಜನ. ಕಿವಿಗಡಚಿಕ್ಕುತ್ತಿದ್ದ ತಮಟೆ ನಗಾರಿಗಳ ಸದ್ದು, ನಿರಂತರ ಘಂಟಾನಾದ… ಕಬ್ಬು, ಕಡಲೆಕಾಯಿ ವ್ಯಾಪಾರದ ಜೋರು ಭರಾಟೆ… ಗಿರಗಿಟ್ಲೆ, ಜೋಕಾಲಿಗಳಲ್ಲಿ ಮಕ್ಕಳ ಕಲರವ..

ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಸೋಂಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ (ಕಡಲೆಕಾಯಿ ಪರಿಷೆ) ಕಂಡು ಬಂದ ದೃಶ್ಯಗಳಿವು. ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗದೊಂದಿಗೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್ ನೇತೃತ್ವದಲ್ಲಿ ಶ್ರೀ ಬಸವೇಶ್ವರ ಭಕ್ತಮಂಡಳಿ ಆಯೋಜಿಸಿದ್ದ 10ನೇ ವರ್ಷದ ಕಡಲೆಕಾಯಿ ಪರಿಷೆ ಅದ್ದೂರಿಯಾಗಿ ನೆರವೇರಿತು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇಗುಲ ಮಠದ ಶ್ರೀ ಚನ್ನಬಸವಸ್ವಾಮೀಜಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತಿತರರಿದ್ದರು.

ಮಾರಾಟ ಜೋರು: ಆನೇಕಲ್, ಅತ್ತಿಬೆಲೆ, ಶಿಡ್ಲಘಟ್ಟ ರಾಮನಗರ, ಕನಕಪುರ, ಮಾಗಡಿ, ಕುಣಿಗಲ್, ಹೊಸೂರು, ಪಾವಗಡ, ಅನಂತಪುರ, ಚಿತ್ತೂರಿನ ರೈತರು ಹಾಗೂ ವ್ಯಾಪಾರಿಗಳು ಆಗಮಿಸಿದ್ದರು. ಕಡಲೆಕಾಯಿ, ಕಡಲೆ ಪುರಿ, ಬತ್ತಾಸು, ತಂಪುಪಾನೀಯ, ಐಸ್ಕ್ರೀಂ, ಜಿಲೇಬಿ ಸೇರಿ ಬಗೆಬಗೆಯ ತಿಂಡಿ-ತಿನಿಸುಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ನಿರಂತರ ಅನ್ನದಾಸೋಹ: ಜಾತ್ರಾ ಮಹೋತ್ಸವದ ಪ್ರಯುಕ್ತ ನಿರಂತರ ಅನ್ನದಾಸೋಹ ನಡೆಯಿತು. ಬೆಳಗ್ಗೆ 8 ಗಂಟೆಯಿಂದಲೇ ಪ್ರಸಾದ ವಿತರಣೆ ಆರಂಭವಾಗಿತ್ತು. ಸಿಹಿ ಪೊಂಗಲ್, ಪುಳಿಯೋಗರೆಯನ್ನು ಭಕ್ತರು ಸವಿದರು. ಭಕ್ತರಿಗೆ ಒಂದು ಜಲ್ಲೆ ಕಬ್ಬು ಹಾಗೂ ಕಡಲೆಕಾಯಿಯನ್ನು ಉಚಿತವಾಗಿ ವಿತರಿಸಲಾಯಿತು.

ಗ್ರಾಮಸ್ಥರು ಭಾಗಿ: ವರಾಹಸಂದ್ರ, ಹೆಮ್ಮಿಗೆಪುರ, ದೊಡ್ಡಬೆಲೆ, ಚನ್ನವೀರಯ್ಯನಪಾಳ್ಯ, ಎಚ್. ಗೊಲ್ಲಹಳ್ಳಿ, ಗೊಟ್ಟಿಗೆರೆ ಪಾಳ್ಯ, ಸೋಂಪುರ ಸೇರಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಪೂಜಾಕುಣಿತ, ವೀರಭದ್ರನ ಕುಣಿತ, ಯಕ್ಷಗಾನ, ಕೋಲಾಟ, ಕಂಸಾಳೆ ಮತ್ತಿತರ ಜಾನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದವು. ಈ ಬಾರಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಯಕ್ಷಗಾನ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಅಂಧಮಕ್ಕಳಿಗೆ ಬಟ್ಟೆ ವಿತರಣೆ

ಪ್ರತಿ ಬಾರಿ ಜಾತ್ರಾ ಉತ್ಸವದಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಪ್ರದಾಯವಿದೆ. ಈ ಬಾರಿ ಅಂಧಮಕ್ಕಳಿಗೆ ಸಂಕ್ರಾಂತಿ ಉಡುಗೊರೆ ನೀಡಲಾಯಿತು. ಉತ್ಸವದ ನೇತೃತ್ವ ವಹಿಸಿದ್ದ ಎಂ. ರುದ್ರೇಶ್ ಅಂಧಮಕ್ಕಳಿಗೆ ಬಟ್ಟೆ, ಶೂ ಮತ್ತಿತರ ವಸ್ತುಗಳನ್ನು ನೀಡಿದರು.

ಗಮನಸೆಳೆದ ವರಾಹಸಂದ್ರದ ಗೌರಿ ಗೋವು

ಸಂಕ್ರಾಂತಿ ಹಬ್ಬದಲ್ಲಿ ಪ್ರಮುಖ ಆಚರಣೆ ಎನಿಸಿರುವ ಗೋಪೂಜೆ ವಿಶೇಷವಾಗಿ ಗಮನ ಸೆಳೆಯಿತು. ವರಾಹಸಂದ್ರದ ಗೌರಿ ಹೆಸರಿನ ಗೋವಿಗೆ ಭಕ್ತರು ಪೂಜೆ ಸಲ್ಲಿಸಿದರು. ರಾಸುಗಳಿಗೆ ಕಾಣಿಸಿಕೊಳ್ಳುವ ರೋಗಪರಿಹಾರಕ್ಕೆ ಬಸವೇಶ್ವರ ಸ್ವಾಮಿಗೆ ಹರಕೆ ಹೊರುವ ಪದ್ಧತಿ ಇರುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ರಾಸುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ಹರಕೆ ಕಟ್ಟಿಕೊಂಡರು. ಇಡೀ ದೇಗುಲವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನ ಒಳಭಾಗದಲ್ಲಿ ಹಣ್ಣು ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ನಗರೀಕರಣದ ಭರಾಟೆಯಲ್ಲಿ ನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗುತ್ತಿವೆ. ಇಂಥ ಜಾತ್ರಾ ಉತ್ಸವಗಳ ಆಚರಣೆಯಿಂದ ಹಳ್ಳಿ ಸೊಗಡಿನ ಸಂಸ್ಕೃತಿ ಮತ್ತು ಪರಂಪರೆ ಜೀವಂತವಾಗುಳಿಯುತ್ತವೆ.

| ಗಂಗಾಂಬಿಕೆ ಮೇಯರ್

ಅಂಗವಿಕಲರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳಾಗಬೇಕು. ಇದರಿಂದ ಅವರಲ್ಲಿ ಆತ್ಮಬಲ ಹೆಚ್ಚುತ್ತದೆ. ಪ್ರತಿಯೊಬ್ಬರು ಇದನ್ನು ಕರ್ತವ್ಯ ಎಂದು ಭಾವಿಸಬೇಕು.

| ಶ್ರೀ ಶಿವಲಿಂಗಸ್ವಾಮೀಜಿ ಬಿಲ್ವಪತ್ರೆ ಮಠ

ಗ್ರಾಮೀಣ ಸೊಗಡಿನ ಜಾತ್ರೆ, ಉತ್ಸವಗಳು ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಸಹಬಾಳ್ವೆಗೆ ಇಂಬು ನೀಡುತ್ತವೆ.

| ಡಿ.ವಿ. ಸದಾನಂದಗೌಡ ಕೇಂದ್ರ ಸಚಿವ

ಶ್ರೀ ಬಸವೇಶ್ವರ ಸ್ವಾಮಿಗೆ ಲಕ್ಷಾಂತರ ಭಕ್ತರಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. 10ನೇ ವರ್ಷದ ಕಡಲೆಕಾಯಿ ಪರಿಷೆಗೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ. ನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಈ ಜಾತ್ರೆ ಆಯೋಜಿಸಲಾಗುತ್ತಿದೆ.

| ಎಂ. ರುದ್ರೇಶ್ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ