ಲಾಲ್​ಬಾಗ್​ನಲ್ಲಿ ಗ್ರಾಮೀಣ ಸೊಗಡು

ಬೆಂಗಳೂರು: ಕಬ್ಬು, ಬಾಳೆಗಳಿಂದ ಅಲಂಕೃತವಾದ ಎತ್ತಿನಗಾಡಿಗಳ ಮೆರವಣಿಗೆ… ಮದುವಣಗಿತ್ತಿಯಂತೆ ಸಿಂಗಾರಗೊಂಡು ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದ ರಾಸುಗಳು…. ನಾಡಿನ ಸಾಂಸ್ಕೃತಿಕ ವೈವಿಧ್ಯತೆ ಅನಾವರಣ ಮಾಡುವ ವಿವಿಧ ಕಲಾತಂಡದ ನೃತ್ಯ ವೈಭವ…. ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು….

ಇದು ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಬರಮಾಡಿಕೊಂಡ ಪರಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಬಿಬಿಎಂಪಿ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಕೆಂಪುತೋಟದಲ್ಲಿ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿತು.

ಲಾಲ್​ಬಾಗ್​ನ ಉತ್ತರ ಪ್ರವೇಶ ದ್ವಾರದಲ್ಲಿ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ಬಣ್ಣ ಬಣ್ಣದ ರಿಬ್ಬನ್, ಬಲೂನ್​ಗಳಿಂದ ಅಲಂಕೃತಗೊಂಡು, ಜೂಲು (ಅಲಂಕಾರಿಕ ಬಟ್ಟೆ) ಹೊದ್ದು, ಗೆಜ್ಜೆಗಳ ಕಿಣಿಕಿಣಿ ನಾದ ಹೊಮ್ಮಿಸುತ್ತ ಎತ್ತುಗಳು ಲಯಬದ್ಧವಾಗಿ ಹೆಜ್ಜೆ ಹಾಕುತ್ತ್ತ ಹಬ್ಬಕ್ಕೊಂದು ವಿಶೇಷ ಮೆರುಗು ತಂದುಕೊಟ್ಟವು. ಶಿವಶಂಕರ ರೆಡ್ಡಿ ಚಕ್ಕಡಿ ಏರಿ, ಸ್ವಲ್ಪ ದೂರ ಸಾಗಿ ಹೋಗಿದ್ದು ವಿಶೇಷವಾಗಿತ್ತು. ಪೂಜಾ ಕುಣಿತ, ವೀರಭದ್ರ ಕುಣಿತ, ಸಿದ್ದಿ ಢಮಾಯಿನೃತ್ಯ, ಕೊಡವ ನೃತ್ಯ, ಜೋಗತಿ ನೃತ್ಯ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದವು. ಕುಟುಂಬ ಸಮೇತ ಆಗಮಿಸಿದ ನಗರದ ಜನ ಗ್ರಾಮೀಣ ವೈಭವದಲ್ಲಿ ವಿಹರಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಕೃಷಿ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ನಿರ್ದೇಶಕ ಬಿ.ವೈ. ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಲವಂತರಾವ್ ಪಾಟೀಲ್, ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವೈವಿಧ್ಯತೆ ದರ್ಶನ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಾದೇಶಿಕವಾರು 8 ಮಳಿಗೆಗಳು ತಲೆಯೆತ್ತಿದ್ದವು. ಉತ್ತರ ಕನ್ನಡದ ಪ್ರಾಂತೀಯ ಕೃಷಿಕರ ಸಂಘಗಳ ಒಕ್ಕೂಟದ ಮಳಿಗೆ ಬಾಳೆ ಮಂಟಪದಿಂದಲೇ ಸಿದ್ಧವಾಗಿತ್ತು. ಮದುವೆ ಸಮಾರಂಭಕ್ಕಾಗಿ ಇಂತಹ ಮಂಟಪವನ್ನು ಸಿದ್ಧಪಡಿಸಲಾಗುತ್ತದೆ. ಇದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇದರ ಮುಂದೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು. ಹಳೇ ಮೈಸೂರು ಪ್ರಾಂತ್ಯದ ಮಳಿಗೆಯಲ್ಲಿ ಮೈಸೂರು ಪೇಟ ಧರಿಸಿದ್ದ ಶ್ವೇತ ವಸ್ತ್ರಧಾರಿಗಳು ಗಮನ ಸೆಳೆದರು. ಅದೇ ರೀತಿ, ಕೊಡಗು, ಮಲೆನಾಡು, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ, ದಾವಣಗೆರೆ ಪ್ರಾಂತ್ಯದ ಮಳಿಗೆಗಳಲ್ಲಿ ಸಾಂಸ್ಕೃತಿಕ ಪ್ರತಿನಿಧಿಗಳು ಜನರನ್ನು ಸ್ವಾಗತಿಸಿ, ತಮ್ಮ ಪ್ರಾಂತ್ಯದ ವೈಶಿಷ್ಟ್ಯವನ್ನು ವಿವರಿಸಿದ್ದು ವಿಶೇಷವಾಗಿತ್ತು.

ಅಕ್ಕಿ ಬಳಕೆ ಕಡಿಮೆ ಮಾಡಿ!

ನಗಾರಿ ಬಾರಿಸಿ ಸುಗ್ಗಿ-ಹುಗ್ಗಿ ಕಾರ್ಯಕ್ರಮಕ್ಕೆ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಚಾಲನೆ ನೀಡಿದರು. ನವಣೆ, ಸಜ್ಜೆ, ರಾಗಿ, ಜೋಳ ಸೇರಿ ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳ ಹೆಚ್ಚಿನ ಪ್ರಮಾಣದ ಬಳಕೆಯನ್ನು ರೂಢಿಸಿ ಕೊಳ್ಳಬೇಕು. ಇದರಿಂದ ಆರೋಗ್ಯ ವೃದ್ಧಿಸುವ ಜತೆಗೆ ರೈತರಿಗೂ ಪ್ರೋತ್ಸಾಹ ದೊರೆತಂತಾಗುತ್ತದೆ. ಊಟದಲ್ಲಿ ಅಕ್ಕಿ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.

ಸಾರ್ವಜನಿಕರು ಹೆಚ್ಚೆಚ್ಚು ಸಿರಿಧಾನ್ಯ ಬಳಸಿದರೆ ರೈತರಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ. ಸರ್ಕಾರ ಕೂಡ ಸಿರಿಧಾನ್ಯಗಳ ಕೃಷಿ, ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿದೆ. ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ನೀಡಲೆಂದೇ ಬೆಂಗಳೂರು ಅರಮನೆ ಮೈದಾನದಲ್ಲಿ ಜ.18ರಿಂದ 20ರವರೆಗೆ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಾರ್ವಜನಿಕರು ಇದನ್ನು ಯಶಸ್ವಿಗೊಳಿಸಬೇಕು.

| ಶಿವಶಂಕರ ರೆಡ್ಡಿ ಕೃಷಿ ಸಚಿವ