ಕೋಳೂರು ಸಾವಿರದ ಸುಗ್ಗಿಹಬ್ಬ ಸಂಪನ್ನ

ಬಣಕಲ್: ಕೋಳೂರು ಸಾವಿರದ ಸುಗ್ಗಿ ಹಬ್ಬ ರಾಟವಾಣ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಫಲ್ಗುಣಿ ಗ್ರಾಮಕ್ಕೆ ಸೇರಿದ ಕೋಳೂರು ಸಾವಿರ ವ್ಯಾಪ್ತಿಯ 14 ಗ್ರಾಮಗಳ ಸಾವಿರಾರು ಭಕ್ತರು ಹನುಮನಹಳ್ಳಿಯ ಹೊನ್ನಮ್ಮ, ಚಿನ್ನಮ್ಮ, ಜಕ್ಕಳ್ಳಿಯ ವೀರಭದ್ರೇಶ್ವರ, ಮುಗ್ರಹಳ್ಳಿಯ ದೊಡ್ಡಮ್ಮ, ಸಣ್ಣಮ್ಮ, ಬಂಕೇನಹಳ್ಳಿಯ ಮುಕ್ಕಣೇಶ್ವರ, ಕೂಡಹಳ್ಳಿಯ ಚನ್ನಕೇಶವಸ್ವಾಮಿ, ಹಳೇಹಳ್ಳಿಯ ಕುಮಾರಸ್ವಾಮಿ ಹಾಗೂ ಮುಗ್ರಹಳ್ಳಿ, ಕಾರ್ಮಕ್ಕಿ, ಹಳಿಕೆ ಗ್ರಾಮಗಳ ಮಾರಮ್ಮ ದೇವರನ್ನು ಅಲಂಕರಿಸಿ ವಾದ್ಯಗೋಷ್ಠಿಗಳೊಂದಿಗೆ ಫಲ್ಗುಣಿ ಗ್ರಾಮದ ಪದ್ಮಾವತಿ ದೇವಾಲಯದ ಸಮೀಪದ ಸುಗ್ಗಿಕಟ್ಟೆಗೆ ತಂದು ಪೂಜೆ ಸಲ್ಲಿಸಲಾಯಿತು.

ಕೋಳೂರು ಸಾವಿರದ ಭಕ್ತರು ರಾಟವಾಣದ ಮೇಲೆ ಕುಳಿತು ಸುತ್ತುವ ಮೂಲಕ ಪ್ರಸಿದ್ಧ ರಾಟವಾಣ ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ ಹರಕೆ ಒಪ್ಪಿಸಿದ ಬಳಿಕ ಆಯಾ ಗ್ರಾಮ ದೇವತೆಗಳನ್ನು ಕರೆದೊಯ್ಯಲಾಯಿತು.

ರಾಟವಾಣದ ಉತ್ಸವದಂದು ಕೋಳೂರು ಸಾವಿರದ ಗ್ರಾಮಗಳಿಗೆ ಮಳೆ ಬರುತ್ತದೆಂಬ ನಂಬಿಕೆಯಿದ್ದು ಕೋಳೂರು ಸಾವಿರ ವ್ಯಾಪ್ತಿಯ 14 ಹಳ್ಳಿಗಳಿಗೆ ಮಳೆಯ ಸಿಂಚನವಾಗಿದ್ದರಿಂದ ಭಕ್ತರ ಸಂಭ್ರಮ ಇಮ್ಮಡಿಯಾಗಿತ್ತು. 23ರಂದು ಸುಗ್ಗಿ ಉತ್ಸವದ ಒಳ್ಳೆ ಮಾತಿನವರು ಎಂಬ ಸೇವಾಕರ್ತರು, ದೇವರಮನೆ ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇವರಿಗೆ ಸೊಪ್ಪು ಒಪ್ಪಿಸುವ ಕಾರ್ಯಕ್ರಮದ ಮೂಲಕ 15 ದಿನಗಳ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ.

Leave a Reply

Your email address will not be published. Required fields are marked *