ವೈದ್ಯಕೀಯ ಪರಿವೀಕ್ಷಕ ನ್ಯಾಯಾಂಗ ಬಂಧನಕ್ಕೆ

ಕಡೂರು: ಬಾಸೂರು ಅಮೃತಮಹಲ್ ಕಾವಲಿನ ಸಗಣಿ ಗೊಬ್ಬರ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಸಂಗ್ರಹವಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಶು ವೈದ್ಯಕೀಯ ಪರೀಕ್ಷಕ ರವಿ ಅವರನ್ನು ಯಗಟಿ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಗೊಬ್ಬರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೃತಮಹಲ್ ಕಾವಲು ಪ್ರದೇಶದ ಅಜ್ಜಂಪುರ ಸಹಾಯಕ ನಿರ್ದೇಶಕ ಡಾ. ಎಸ್.ಎಲ್. ರಾಜಶೇಖರಯ್ಯ ಭಾನುವಾರ ಯಗಟಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ರವಿ ಅವರನ್ನು ಕರ್ತವ್ಯ ಲೋಪದ ಮೇಲೆ ಬಂಧಿಸಿದ್ದಾರೆ.

ಬಾಸೂರಿನ ತಮ್ಮಯ್ಯಪ್ಪ ಎಂಬುವರ ಜಮೀನಿನಲ್ಲಿ ಕಾವಲು ಪ್ರದೇಶಕ್ಕೆ ಸೇರಿದ ಸುಮಾರು 1.25 ಲಕ್ಷ ರೂ. ಬೆಲೆಯ 60ಕ್ಕೂ ಹೆಚ್ಚು ಲೋಡ್ ಸಗಣಿ ಗೊಬ್ಬರ ಸಂಗ್ರಹವಾಗಿದೆ. ಇದನ್ನು ಪರಿಶೀಲಿಸಿದ್ದು, ಪಶುವೈದ್ಯಕೀಯ ಪರೀಕ್ಷಕ ರವಿ ಅವರ ಕರ್ತವ್ಯಲೋಪ ಇದರಲ್ಲಿ ಕಂಡು ಬಂದಿದೆ ಎಂದು ನಿರ್ದೇಶಕರು ದೂರಿನಲ್ಲಿ ತಿಳಿಸಿದ್ದಾರೆ.

ಸದ್ಯ ಗೊಬ್ಬರವನ್ನು ಪೊಲೀಸರು ಪಾಳಿಯ ಮೇಲೆ ಕಾಯುತ್ತಿದ್ದು, ಮಹಜರು ಮತ್ತಿತರ ಪ್ರಕ್ರಿಯೆ ಮುಗಿದ ಮೇಲೆ ಗೊಬ್ಬರವನ್ನು ಕಾವಲು ಪ್ರದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಪ್ರಕರಣದ ತನಿಖೆ ಮುಂದುವರಿಯುತ್ತದೆ ಎಂದು ತನಿಖೆಯ ಹೊಣೆ ಹೊತ್ತಿರುವ ಬೀರೂರು ಸಿಪಿಐ ಸತ್ಯನಾರಾಯಣಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.