ವೇಣುವಿನೋದ್ ಕೆ.ಎಸ್.ಮಂಗಳೂರು
ಮಳೆ ಮುಗಿದು ಚಳಿ ಶುರುವಾಗುತ್ತಲೇ, ಅಡಕೆ ಬುಡಕ್ಕೆ ಗೊಬ್ಬರ ಕೊಡುವ ಕಾಲ ಶುರುವಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ರಸಗೊಬ್ಬರದಲ್ಲಿ ಪೊಟಾಶ್ ಬಳಸಲಾಗುತ್ತದೆ.
ಆದರೆ ಜಿಲ್ಲೆಯ ಹಲವು ಕಡೆಗಳಲ್ಲಿ ಪೊಟಾಶ್ ಸಿಗುತ್ತಿಲ್ಲ. ಕೇಳಿದರೆ ಅದರೊಂದಿಗೆ ಲಿಂಕ್ ಆಗಿರುವ ಇತರ ಗೊಬ್ಬರವನ್ನೂ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೊಸೈಟಿಗಳಲ್ಲಿ, ಅಂಗಡಿಗಳಲ್ಲಿ ಕೃಷಿಕರ ಮೇಲೆ ಒತ್ತಾಯ ಹೇರಲಾಗುತ್ತಿದೆ.
ರಸಗೊಬ್ಬರ ಸಂಗ್ರಹ ಕೊರತೆ ಇದೆಯೇ ಎಂದು ಕೇಳಿದರೆ ಕೃಷಿ ಇಲಾಖೆಯವರು ಲೆಕ್ಕಾಚಾರ ನೀಡಿ, ಸಾಕಷ್ಟಿದೆ ಎನ್ನುತ್ತ ಗುರಿ ಮೀರಿದ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಕೇರಳದಿಂದಲೂ ನೆರೆಯ ಜಿಲ್ಲೆಗಳಿಂದಲೂ ಇಲ್ಲಿಗೆ ಬಂದು ಕೃಷಿಕರು ರಸಗೊಬ್ಬರ ಪಡೆಯಲು ಅವಕಾಶ ಇರುವಾಗ ಅದನ್ನೇ ನಂಬುವುದು ಹೇಗೆ, ನಮಗೆ ರಸಗೊಬ್ಬರ ಸಿಕ್ಕಿಲ್ಲ ಎನ್ನುವುದು ಕೃಷಿಕರ ವಾದ.
ಮುಖ್ಯವಾಗಿ ಪೊಟಾಶ್: ಜಿಲ್ಲೆಯಲ್ಲಿ ಅಡಕೆ ಬೆಳೆಗೆ ಬೇಕಾಗಿರುವುದು ಪೊಟಾಶ್ ಹಾಗೂ ಇಫ್ಕೊದವರ ಕಾಂಪ್ಲೆಕ್ಸ್ ಗೊಬ್ಬರವಾದ 10.26.26. ಡಿಎಪಿ, ಯೂರಿಯಾ, ಸೂಪರ್ ಫಾಸ್ಪೇಟ್ ನಮಗೆ ಅಗತ್ಯವಿಲ್ಲ. ಅದು ಗದ್ದೆಗೆ ಮಾತ್ರ ಬಳಕೆ. ಪೊಟಾಶ್ ಇದ್ದರೆ ಮಾತ್ರ ಅದರ ಜತೆಯಲ್ಲಿ ಸ್ವಲ್ಪ ಕಾಂಬಿನೇಶನ್ ರೀತಿಯಲ್ಲಿ ಯೂರಿಯಾ, ಸೂಪರ್ ಫಾಸ್ಪೇಟ್ ಬಳಸಬಹುದು. ಪೊಟಾಶ್ ಇಲ್ಲ್ಲದಿದ್ದರೆ ಇವುಗಳ ಬಳಕೆಯಿಲ್ಲ ಎಂದು ಕೃಷಿಕರೊಬ್ಬರು ದೂರಿದ್ದಾರೆ.
*ಮಾರ್ಕೆಟಿಂಗ್ ತಂತ್ರ?: ಕಳೆದ ನಾಲ್ಕು ತಿಂಗಳಿಂದ ಪೊಟಾಶ್ ಸರಿಯಾಗಿ ವಿತರಣೆಯಾಗುತ್ತಿಲ್ಲ. ಪೊಟಾಶ್ ಕೇಳಿದರೆ ಅದರ ಜತೆ ಲಿಂಕ್ ಆಗಿರುವ ಬೇರೆ ರಾಸಾಯನಿಕ ಗೊಬ್ಬರಗಳನ್ನೂ ಕೊಳ್ಳಿ ಎಂಬ ಒತ್ತಡ ತಂತ್ರವನ್ನು ಅನುಸರಿಸಲಾಗುತ್ತದೆ. ಇನ್ನು ಇಫ್ಕೊದವರ 10.26.26 ಕಾಂಪ್ಲೆಕ್ಸ್ ಗೊಬ್ಬರ ಕೇಳಿದರೆ ಅದರ ಜತೆಗೆ ನ್ಯಾನೋ ಯೂರಿಯಾ ಖರೀದಿಗೆ ಒತ್ತಾಯ. ಜನರು ಸಾವಯವ ಗೊಬ್ಬರದತ್ತ ಹೊರಳುತ್ತಿರುವಾಗ ಬಾಕಿಯಾಗಿರುವ ಗೊಬ್ಬರವನ್ನು ಈ ರೀತಿ ಮಾರುವುದಕ್ಕೆ ಯತ್ನಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ರಸಗೊಬ್ಬರದ ದರವೂ ಏರಿಕೆಯಾಗಿದೆ. ಇಫ್ಕೊ ಬ್ಯಾಗ್‌ಗೆ 1800 ರೂ. ಕೊಡಬೇಕು, ಜತೆಗೆ ಲಿಂಕ್ ಗೊಬ್ಬರಕ್ಕೂ ಹಣ ಕೊಡಬೇಕು.
ಸಾಕಷ್ಟು ಸಂಗ್ರಹವಿದೆ ಎನ್ನುತ್ತದೆ ಕೃಷಿ ಇಲಾಖೆ: ದ.ಕ.ಜಿಲ್ಲೆಯಲ್ಲಿ ಖರ್ಚಾಗುವ ರಸಗೊಬ್ಬರ ಮುಖ್ಯವಾಗಿ ಎನ್‌ಪಿಕೆ, ಯೂರಿಯಾ, ಡಿಎಪಿ, ಎಂಒಪಿ(ಪೊಟಾಶ್). ಜಿಲ್ಲೆಯಲ್ಲಿ ಕಳೆದ ವರ್ಷ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 31165 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇತ್ತು. 36317.13 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ. ಪೊಟಾಶ್ 3200 ಟನ್‌ಗೆ ಬೇಡಿಕೆ ಇದ್ದು 3893.68 ಟನ್ ವಿತರಣೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಅವರ ಪ್ರಕಾರ ಸದ್ಯ ಯೂರಿಯಾ 2965 ಟನ್, 95 ಟನ್ ಡಿಎಪಿ, 1200 ಟನ್ ಪೊಟಾಶ್, 4100 ಟನ್ ಎನ್‌ಪಿಕೆ ಸಂಗ್ರಹವಿದೆ.
ಉಡುಪಿಯಲ್ಲಿಲ್ಲ ಅಭಾವ
ಉಡುಪಿ ಜಿಲ್ಲೆಯಲ್ಲಿ ಅಡಕೆಗೆ ರಸಗೊಬ್ಬರ ಅಭಾವ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ವಿಜಯವಾಣಿಗೆ ತಿಳಿಸಿದ್ದಾರೆ. ಬೇಡಿಕೆಯೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿರುವುದರಿಂದ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ ಎಂದು ಅವರು ತಿಳಿಸಿದ್ದಾರೆ.
ಪೊಟಾಶಿಯಂ ಇರುವ ರಸಗೊಬ್ಬರಕ್ಕೆ 850 ರೂ., ಇದ್ದ ಬೆಲೆ ಈಗ 1800 ರೂ.ಗೆ ಏರಿದೆ. ಹಾಗಿದ್ದರೂ ಪೂರೈಕೆ ಇಲ್ಲ. ಮಳೆ ಹೋಗಿ ಬಿಸಿಲು ಧಗಿಸುವ ಈ ಹೊತ್ತಿನಲ್ಲಿ ಗೊಬ್ಬರ ಹಾಕಿಯೇ ನೀರು ಹಾಕಬೇಕು ಎನ್ನುವ ಒತ್ತಡದಲ್ಲಿರುವ ರೈತರು ರಸಗೊಬ್ಬರ ಇಲ್ಲದೆ ಕಂಗಾಲಾಗಿದ್ದೇವೆ. ಬೆಲೆ ಇಳಿಸಿ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸಬೇಕು.
ಧನಂಜಯ ಪಡ್ಪು ಕೃಷಿಕ
ಸಮಸ್ಯೆ ಇದ್ದರೆ ನಮ್ಮ ಅಥವಾ ಆಯಾ ತಾಲೂಕಿನ ಕೃಷಿ ಅಧಿಕಾರಿಗಳ ಗಮನಕ್ಕೆ ತರಲಿ. ಲಿಂಕ್ ಆಗಿ ರಸಗೊಬ್ಬರ ಖರೀದಿಗೆ ಒತ್ತಾಯ ಮಾಡುವಂತಿಲ್ಲ. ರೈತರು ಅವರಿಗೆ ಬೇಕಾದ್ದನ್ನಷ್ಟೇ ಖರೀದಿ ಮಾಡಿಕೊಳ್ಳಬಹುದು. ನಮ್ಮಲ್ಲಿ ರಸಗೊಬ್ಬರ ಕೊರತೆ ಇಲ್ಲ.
ಮಧುಕೇಶ್ವರ್
ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ, ದ.ಕ.