ಮಡಕೆಯಲ್ಲಿ ಗೊಬ್ಬರ!

ವಿಜಯವಾಣಿ ಸುದ್ದಿಜಾಲ ಮಂಗಳೂರು
ಅಡುಗೆ ಮನೆಯಲ್ಲಿ ತಯಾರಾದ ಹಸಿ ಕಸ ಮನೆಯಂಗಳದಲ್ಲೇ ವಿಲೇವಾರಿಯಾಗಬೇಕು ಎಂದು ಮಂಗಳೂರಿನ ರಾಮಕೃಷ್ಣ ಮಠ ಮಡಕೆ ಗೊಬ್ಬರ ಎಂಬ ವಿನೂತನ ಯೋಜನೆ ಹಮ್ಮಿಕೊಂಡಿದೆ.
ಮನೆಮನೆಯಲ್ಲಿ ಪರಿಸರ ಸ್ನೇಹಿಯಾಗಿ ಗೊಬ್ಬರ ತಯಾರಿಸುವ ಯೋಜನೆ ಇದು. ಹಸಿ ಕಸವನ್ನು ಮನೆಯಲ್ಲೇ ಸರಳವಾಗಿ ಕಾಂಪೋಸ್ಟ್ ಮಾಡಿ ಹೂ ಗಿಡಗಳಿಗೆ ಪೋಷಕಾಂಶ ನೀಡಬೇಕು ಎಂಬ ಉದ್ದೇಶದಿಂದ ಈಗಾಗಲೇ 150 ಮನೆಗಳಿಗೆ ರಾಮಕೃಷ್ಣ ಮಠ ಗೊಬ್ಬರ ತಯಾರಿ ಮಡಕೆಗಳನ್ನು ವಿತರಿಸಿದೆ. ಈ ಯೋಜನೆ ಯಶಸ್ವಿಯಾದರೆ ನಗರದ ಮಾರ್ಗದ ಬದಿ ಕಸ ರಾಶಿ ನಾರುವ ಪ್ರಮೇಯ ತಪ್ಪಲಿದೆ.

ಮಡಕೆ ಗೊಬ್ಬರ ತಯಾರಿ ಹೇಗೆ?: ಮಡಕೆ ಗೊಬ್ಬರ ಕಿಟ್ ಮೇಲಿಂದ ಮೇಲೆ ಇರಿಸುವ ಮೂರು ಮಣ್ಣಿನ ಪಾತ್ರೆಯುಳ್ಳ ಸರಳ ವ್ಯವಸ್ಥೆ. ಮೂರು ಮಡಕೆಯನ್ನು ಒಂದರ ಮೇಲೊಂದರಂತೆ ಜೋಡಿಸಿ ಅದರ ಮೇಲೆ ಮಣ್ಣಿನ ಮುಚ್ಚಳದಿಂದ ಮುಚ್ಚಬೇಕು. ಆರಂಭದಲ್ಲಿ ಕೆಳಗಿನ ಮಡಕೆಯ ಅರ್ಧ ಭಾಗದಷ್ಟು ಹಾಗೂ ಮೇಲ್ಭಾಗದ ಗಡಿಗೆಯಲ್ಲಿ ಒಂದು ಇಂಚು ಎತ್ತರದಷ್ಟು ತೆಂಗಿನ ನಾರು ತುಂಬಬೇಕು. ಬಳಿಕ ಮನೆಯ ಅಡುಗೆ ಮನೆಯಲ್ಲಿ ತಯಾರಾಗುವ ಹಸಿ ಕಸವನ್ನು ಮೇಲಿನ ಹಂತದ ಮಡಿಕೆಗೆ ಸುರಿಯುತ್ತಿರಬೇಕು. ಪ್ರತಿ ಬಾರಿ ಸುರಿದಾಗಲೂ ಸ್ವಲ್ಪ ತೆಂಗಿನ ನಾರನ್ನು ಕಸದ ಮೇಲ್ಭಾಗಕ್ಕೆ ಹರಡಬೇಕು. ವಾರ ಕಳೆಯುತ್ತಿದ್ದಂತೆ ಒಂದು ಚಮಚದಷ್ಟು ಬ್ಯಾಕ್ಟೀರಿಯಾ ಪುಡಿಯನ್ನು ನೀರಿನ ಜತೆ ಕಸದ ಮೇಲ್ಭಾಗದಲ್ಲಿ ಸಿಂಪಡಿಸಬೇಕು. ಇಲ್ಲಿಂದ ಕಸ ಕೊಳೆಯಲಾರಂಭಿಸಿ ಗೊಬ್ಬರವಾಗುತ್ತದೆ.
ಮೇಲಿನ ಮಡಕೆ ತುಂಬಿದಾಗ ಮಧ್ಯದ ಪಾತ್ರೆಯನ್ನು ಮೇಲ್ಭಾಗದಲ್ಲಿಟ್ಟು, ಕಸ ತುಂಬಲಾರಂಭಿಸಬೇಕು. ಮಧ್ಯದ ಮಡಕೆ ಗೊಬ್ಬರವಾದ ಬಳಿಕ ಕೆಳಗಿನ ಮಡಕೆಗೆ ಸುರಿದು ಖಾಲಿಯಾದ ಮಡಕೆ ಮೇಲ್ಭಾಗದಲ್ಲಿ ಇರಿಸಬೇಕು. ಒಂದು ತಿಂಗಳು ಕಳೆಯುವ ಹೊತ್ತಿಗೆ ತಳಭಾಗದ ಗಡಿಗೆ ಕಸ ಸಂಪೂರ್ಣವಾಗಿ ಕೊಳೆತು ಹುಡಿಯಾಗುತ್ತದೆ. ಇದನ್ನು ನೇರವಾಗಿ ಹೂ ಕುಂಡಗಳಿಗೆ ಗೊಬ್ಬರವಾಗಿ ಬಳಸಬಹುದು. ನಾಲ್ಕು ಜನರಿರುವ ಕುಟುಂಬದ ಒಂದು ಮಡಕೆ ಭರ್ತಿಯಾಗಲು ಒಂದು ತಿಂಗಳು ಬೇಕು.

ಆಲಂಕಾರಿಕಾ ವಸ್ತುವಾಗಿಯೂ ಬಳಕೆ: ಮಡಕೆ ಸುತ್ತ ಅಲ್ಲಲ್ಲಿ ಗಾಳಿಯಾಡಲು ಅನುಕೂಲವಾಗವಂತೆ ಸಣ್ಣ ತೂತುಗಳಿವೆ. ಇದು ಕಸ ಬೇಗನೆ ಗೊಬ್ಬರವಾಗಿಸಲು ಸಹಾಯ ಮಾಡುತ್ತದೆ. ಮನೆಯೊಳಗೆ ಆಲಂಕಾರಿಕ ವಸ್ತುವಿನಂತೆಯೂ ಈ ಗಡಿಗೆಗಳನ್ನು ಬಳಕೆ ಮಾಡಬಹುದು. ಮಡಕೆಗಳ ಹೊರಮೈಗೆ ವಿಶೇಷ ಚಿತ್ರಗಳನ್ನು ಬಿಡಿಸಿದ ಪಾತ್ರೆಗಳು ಮಾರ್ಕೆಟ್‌ನಲ್ಲಿ ಸಿಗುತ್ತವೆ. ಇಂಥ ಗಡಿಗೆಗಳಿಗೆ ದರ ಮಾತ್ರ ಜಾಸ್ತಿ.

ಆಸಕ್ತರಿಗೆ ಮಾಹಿತಿ: ಈಗಾಗಲೇ 150 ಮನೆಗಳಿಗೆ ಈ ಮಣ್ಣಿನ ಮಡಕೆ ವಿತರಿಸಿರುವ ಮಂಗಳೂರಿನ ರಾಮಕೃಷ್ಣ ಮಠ ಇನ್ನಷ್ಟು ಮಡಕೆಗಳನ್ನು ವಿತರಿಸಲು ಯೋಜನೆ ಮಾಡಿದೆ. ಸಾವಿರ ಮನೆಗಳಲ್ಲಿ ಇಂಥ ಗೊಬ್ಬರ ಗಡಿಗೆಗಳನ್ನು ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಎರಡು ಸಾವಿರ ರೂ. ಬೆಲೆಯ ಮಡಕೆ ಕಿಟ್ ಅನ್ನು ಆಶ್ರಮ 500 ರೂಪಾಯಿಗೆ ವಿತರಿಸುತ್ತಿದೆ. ಮಡಕೆ ಗೊಬ್ಬರ ಮಾಹಿತಿಗೆ ಕಾರ್ಯಕರ್ತ ಅಭಿಷೇಕ್ (ದೂ:9480716501) ಸಂಪರ್ಕಿಸಬಹುದು.

ವಾಸನೆ ಬರುವ ಆತಂಕವಿಲ್ಲ: ಮಡಕೆಯಲ್ಲಿರುವ ಹಸಿ ಕಸ ಕೊತು ನಾರುವ ಆತಂಕ ಬೇಕಿಲ್ಲ. ಸರಿಯಾದ ನಿರ್ವಹಣೆ ಮಾಡಿದರೆ ಹುಳುಗಳು ಉತ್ಪತ್ತಿಯಾಗಿ ಹೊರಗೆ ಬರುವ ಹೆದರಿಕೆ ಇರುವುದಿಲ್ಲ. ಗಡಿಗೆಯ ಕಸವನ್ನು ಒಂದರಿಂದ ಮತ್ತೊಂದಕ್ಕೆ ಬದಲಾಯಿಸುತ್ತಿರಬೇಕು. ಸಿಟ್ರಿಕ್ ಆ್ಯಸಿಡ್ ಅಂಶವಿರುವ ವಸ್ತುಗಳು ಸಂಪೂರ್ಣ ಗೊಬ್ಬರವಾಗುವುದಿಲ್ಲ.

 

ಸ್ವಚ್ಛ ಮಂಗಳೂರು ನಾಲ್ಕನೇ ಹಂತದ ಅಭಿಯಾನದಲ್ಲಿ ಪ್ರಾಯೋಗಿಕವಾಗಿ 150 ಮನೆಗಳಿಗೆ ಮಡಕೆ ಕಿಟ್ ವಿತರಿಸಲಾಗಿದೆ. ನಗರದ ಎಲ್ಲರೂ ಈ ವಿಧಾನ ಅಳವಡಿಸಿದರೆ ಕಸದ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ. ಗಿಡಗಳಿಗೆ ಮನೆಯಲ್ಲೇ ಪರಿಸರ ಸ್ನೇಹಿಯಾಗಿ ಕಾಂಪೋಸ್ಟ್ ತಯಾರಿಸಿದಂತಾಗುತ್ತದೆ.
ಜಿತಕಾಮಾನಂದ, ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ