ಅರುಣ್ ಜೇಟ್ಲಿ ಕ್ರೀಡಾಂಗಣವಾಗಲಿದೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್​ ಕ್ರೀಡಾಂಗಣ

ನವದೆಹಲಿ: ದೆಹಲಿಯ ಫಿರೋಜ್​ ಷಾ ಕೋಟ್ಲಾ ಕ್ರೀಡಾಂಗಣ ಹೆಸರನ್ನು ಅರುಣ್ ಜೇಟ್ಲಿ ಕ್ರೀಡಾಂಗಣವಾಗಿ ಮರುನಾಮಕರಣ ಮಾಡಲು ದೆಹಲಿ ಮತ್ತು ಡಿಸ್ಟ್ರಿಕ್ ಕ್ರಿಕೆಟ್​ ಅಸೋಸಿಯೇಷನ್(ಡಿಡಿಸಿಎ) ನಿರ್ಧರಿಸಿದೆ.
ಅರುಣ್ ಜೇಟ್ಲಿಯವರ ಬೆಂಬಲ ಹಾಗೂ ಪ್ರೋತ್ಸಾಹದಿಂದ ವಿರಾಟ್​ ಕೋಹ್ಲಿ, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್​ ನೆಹ್ರಾ, ರಿಷಭ್ ಪಂತ್ ಮತ್ತಿತರ ಪ್ರತಿಭೆಗಳು ರೂಪುಗೊಂಡು ದೇಶದ ಪ್ರತಿಷ್ಠೆ ಹೆಚ್ಚಿಸಿದ್ದಾರೆ. ಕ್ರಿಕೆಟ್​ಗೆ ಜೇಟ್ಲಿ ಅವರ ಸೇವೆ ಪರಿಗಣಿಸಿ ಕ್ರೀಡಾಂಗಣಕ್ಕೆ ಅವರ ಹೆಸರಿಡಲಾಗುತ್ತಿದೆ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಾರೆ.

ಮಾಜಿ ವಿತ್ತಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೂ ಆಗಿದ್ದ ಅರುಣ್ ಜೇಟ್ಲಿ, ಕಳೆದ ಶನಿವಾರ ನಿಧನರಾದರು. ಕ್ರಿಕೆಟ್​ನತ್ತ ಸಾಕಷ್ಟು ಒಲವು ಹೊಂದಿದ್ದ ಜೇಟ್ಲಿ, ಹಲವು ವರ್ಷ ಡಿಡಿಸಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಕೋಟ್ಲಾ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಡ್ರೆಸ್ಸಿಂಗ್ ರೂಮ್ ಹಾಗೂ ಮತ್ತಿತರ ಸೌಲಭ್ಯಗಳನ್ನು ಒದಗಿಸಿದ್ದರು. ಅಲ್ಲದೇ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಆಸನಗಳ ಸಂಖ್ಯೆಯನ್ನೂ ಹೆಚ್ಚಿಸಿದ್ದರು.

ಜವಹಾರ್​ಲಾಲ್ ನೆಹರು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 12 ರಂದು ಮರುನಾಮಕರಣ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗಿಯಾಗಲಿದ್ದಾರೆ. ಹಿಂದಿನ ನಿರ್ಧಾರದಂತೆ ಕ್ರೀಡಾಂಗಣದ ಒಂದು ಸ್ಟಾಂಡ್​ಗೆ ಅಂದೇ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೋಹ್ಲಿ ಹೆಸರಿಡಲಾಗುತ್ತದೆ.

Leave a Reply

Your email address will not be published. Required fields are marked *