ಕೋಟ್ಲಾ ಸ್ಟೇಡಿಯಂಗೆ ಜೇಟ್ಲಿ ಹೆಸರು

ನವದೆಹಲಿ: ಕಳೆದ ಶನಿವಾರ ನಿಧನರಾದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಭಾರತದ 2ನೇ ಅತ್ಯಂತ ಹಳೆಯ ಕ್ರಿಕೆಟ್ ಸ್ಟೇಡಿಯಂ ಫಿರೋಜ್ ಷಾ ಕೋಟ್ಲಾಗೆ ಇಡಲು ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ಧರಿಸಿದೆ. ರಾಜಕಾರಣದ ನಡುವೆ ಜೇಟ್ಲಿ ಹಲವು ವರ್ಷ ಡಿಡಿಸಿಎ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ನೆನಪಿಗಾಗಿ ಕೋಟ್ಲಾ ಸ್ಟೇಡಿಯಂ ಹೆಸರನ್ನು ಬದಲಿಸಲು ಮಂಗಳವಾರ ತೀರ್ಮಾನ ಕೈಗೊಳ್ಳಲಾಯಿತು. ಗ್ರೌಂಡ್​ಗೆ ಫಿರೋಜ್ ಷಾ ಕೋಟ್ಲಾ ಎನ್ನುವ ಹೆಸರೇ ಮುಂದುವರಿ ಯಲಿದ್ದು, ಸ್ಟೇಡಿಯಂಗೆ ಮಾತ್ರ ಅರುಣ್ ಜೇಟ್ಲಿ ಹೆಸರು ಇರಲಿದೆ.

ಸೆ. 12ರಂದು ಅಧಿಕೃತವಾಗಿ ಹೆಸರು ಬದಲಾವಣೆ ಮಾಡುವ ಕಾರ್ಯ ನೆರವೇರಲಿದೆ. ಅದೇ ದಿನ ಕೋಟ್ಲಾ ಮೈದಾನದ ಒಂದು ಸ್ಟಾ್ಯಂಡ್​ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನೂ ಇಡಲಾಗುತ್ತಿದೆ. ‘ಅರುಣ್ ಜೇಟ್ಲಿ ಅವರ ಪ್ರೋತ್ಸಾಹ ಹಾಗೂ ಬೆಂಬಲದಿಂದಲೇ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ರಿಷಭ್ ಪಂತ್ ಸೇರಿದಂತೆ ಇನ್ನೂ ಹಲವರು ಭಾರತ ತಂಡಕ್ಕೆ ಆಡಲು ಸಾಧ್ಯವಾಯಿತು. ಈ ನೆನಪಿಗಾಗಿ ಸ್ಟೇಡಿಯಂಗೆ ಅವರ ಹೆಸರನ್ನೇ ಇಡಲಾಗುತ್ತಿದೆ’ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮ ತಿಳಿಸಿದ್ದಾರೆ.

ಡಿಡಿಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಕೋಟ್ಲಾ ಸ್ಟೇಡಿಯಂನ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅದರೊಂದಿಗೆ ಹೆಚ್ಚಿನ ಆಸನಗಳ ವ್ಯವಸ್ಥೆ ಹಾಗೂ ವಿಶ್ವದರ್ಜೆಯ ಡ್ರೆಸಿಂಗ್ ರೂಮ್ಳನ್ನು ನಿರ್ಮಾಣ ಮಾಡಲಾಗಿತ್ತು. ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಕಾರ್ಯಕ್ರಮ ನೆರವೇರಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಉಪಸ್ಥಿತರಿರಲಿದ್ದಾರೆ.

ತುಘಲಕ್ ಚಕ್ರವರ್ತಿಯ ಹೆಸರು

1883ರಲ್ಲಿ ನಿರ್ವಣವಾಗಿದ್ದ ಕೋಟ್ಲಾ ಮೈದಾನದ ಕ್ರಿಕೆಟ್ ಸ್ಟೇಡಿಯಂಗೆ ದೆಹಲಿಯನ್ನು (ಅಂದು ಫಿರೋಜಾಬಾದ್) ಆಳಿದ್ದ ಚಕ್ರವರ್ತಿ ಫಿರೋಜ್ ಷಾ ತುಘಲಕ್​ರ ಹೆಸರನ್ನು ಇಡಲಾಗಿತ್ತು. ಬಹದ್ದೂರ್ ಷಾ ಜಫರ್ ಮಾರ್ಗ್​ನಲ್ಲಿ ಈ ಸ್ಟೇಡಿಯಂ ಇದೆ. ಸ್ಟೇಡಿಯಂನ ಕೂಗಳತೆ ದೂರದಲ್ಲಿ ಫಿರೋಜ್ ಷಾನ ಕೋಟೆ ಇರುವ ಕಾರಣಕ್ಕೆ ಸ್ಟೇಡಿಯಂಗೂ ಅದೇ ಹೆಸರು ಬಂದಿತ್ತು.

Leave a Reply

Your email address will not be published. Required fields are marked *