ಮಹಿಳೆಗೆ ಶೇ.33 ಮೀಸಲಾತಿ ನೀಡಿ

ವಿಜಯವಾಣಿ ಸುದ್ದಿಜಾಲ ಬೀದರ್
ಭಾರತ ಸಂಪೂರ್ಣ ಭ್ರಷ್ಟಾಚಾರ ಮುಕ್ತ ಮಾಡಲು ಸಂಸತ್ನಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕು ಎಂದು ಬೆಂಗಳೂರಿನ ಮಕ್ಕಳ ಮನೋಶಾಸ್ತ್ರಜ್ಞೆ ಡಾ.ಸ್ವರ್ಣಲತಾ ಅಯ್ಯರ್ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ನಗರದಲ್ಲಿ ನಾಟ್ಯಶ್ರೀ ನೃತ್ಯಾಲಯವು ಆಯೋಜಿಸಿದ್ದ ಸ್ತ್ರೀ ಶಕ್ತಿಗೊಂದು ಸಲಾಂ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಮಕ್ಕಳು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪ್ರಸ್ತುತ ಎಲ್ಲ ರಂಗಗಳಲ್ಲಿ ಮಹಿಳೆಯರಿದ್ದರೂ ಅಲ್ಪಸಂಖ್ಯಾತೆ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರು ಮುಖ್ಯಸ್ಥರಾಗಿರುವ ಕಚೇರಿ, ಕಂಪನಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಮಹಿಳೆ ಭ್ರಷ್ಟಾಚಾರದ ಹಣವನ್ನು ಕಸಕ್ಕೆ ಸಮಾನವಾಗಿ ಕಾಣುತ್ತಾಳೆ. ಆದರೆ ಬಹುತೇಕ ಪುರುಷ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ನಿರಾಸಕ್ತಿ ತೋರುತ್ತಿರುವುದರಿಂದ ದೇಶ ಹಲವು ರಂಗಗಳಲ್ಲಿ ಹಿಂದುಳಿಯಲು ಕಾರಣವಾಗಿದೆ ಎಂದು ದೂಷಿಸಿದರು.

ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಉದ್ಘಾಟಿಸಿ ಮಾತನಾಡಿ, ಪೌರ ಹಾಗೂ ಕೂಲಿ ಕಾಮರ್ಿಕರ ಶ್ರಮ ದೇಶಕ್ಕೆ ಬಹುದೊಡ್ಡ ಕೊಡುಗೆ. ಮೂರು ತಿಂಗಳಿಂದ ನಗರದಲ್ಲಿ ಮತ್ತೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಹಸು, ಎಮ್ಮೆ ಪ್ಲಾಸ್ಟಿಕ್ ತಿಂದು ಜೀವಹಾನಿಗೆ ಒಳಗಾಗುತ್ತಿವೆ. ಬಹುತೇಕ ಜಲಧಾರೆಗಳು ಪ್ಲಾಸ್ಟಿಕ್ ಹಾವಳಿಗೆ ತುತ್ತಾಗಿವೆ. ಪ್ಲಾಸ್ಟಿಕ್ ಮುಕ್ತ ಮಾಡಲು ಮಹಿಳೆಯರು ಕೈಜೋಡಿಸಬೇಕು ಎಂದು ಕೋರಿದರು.

ಮಹಿಳಾ ವಿಶೇಷ ಪೊಲೀಸ್ ಠಾಣೆ ಸಿಪಿಐ ಮಲ್ಲಮ್ಮ ಚೌಬೆ ಮಾತನಾಡಿ, ಕೆಲ ಮಹಿಳೆಯರು ತಮ್ಮ ದೈನಂದಿನ ಕೆಲಸ ಬಿಟ್ಟು ಇತರರಿಗೆ ಒಪ್ಪಿಸುತ್ತಿರುವ ಸಂಸ್ಕೃತಿ ಬಿಡಬೇಕು. ನಮ್ಮ ಮನೆ ಕೆಲಸ ನಾವು ಮಾಡಿದರೆ ಅನೇಕ ರೋಗಗಳಿಂದ ಮುಕ್ತರಾಗಿರುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿ, ಮಹಿಳೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ರಾಯಭಾರಿ. ಈ ಮೂರು ರಂಗಗಳಲ್ಲಿ ಸ್ತ್ರೀ ಸಹಭಾಗಿತ್ವವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪ್ರತಿಪಾದಿಸಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಾಳೆ ಇತರರಿದ್ದರು. ನೃತ್ಯಾಲಯದ ಕಾರ್ಯದರ್ಶಿ ಸತ್ಯಮೂರ್ತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾ ಚಾಮಾ ನಿರೂಪಣೆ ಮಾಡಿದರು. ಶೈಲಜಾ ದಿವಾಕರ್ ವಂದಿಸಿದರು