ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಸ್.ಬಿ.ಹಂದ್ರಾಳ್ ಹೇಳಿಕೆ

ಬಳ್ಳಾರಿ: ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧ. ಮಹಿಳೆಯರ ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸಮಾನ ಲಿಂಗಾನುಪಾತಕ್ಕೆ ಸರ್ವರು ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಮಹಿಳೆ-ಪುರುಷರ ಅನುಪಾತ ಅಸಮತೋಲನದಿಂದ ಅನೇಕ ಸಮಸ್ಯೆಗಳು ಉಂಟಾಗಲಿವೆ. ಕುಟುಂಬದ ಜತೆಗೆ ಸಾಮಾಜಿಕ ಕಾರಣಗಳಿಂದ ಮಹಿಳೆಯರ ಸಂಖ್ಯೆ ಕ್ಷೀಣಿಸುತ್ತಿದೆ. ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿಸಿಪಿಎನ್‌ಡಿಟಿ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವಾ ಮಾತನಾಡಿದರು. ಡಿಎಚ್‌ಒ ಡಾ.ಶಿವರಾಜ ಹೆಡೆ ಅಧ್ಯಕ್ಷತೆ ವಹಿಸಿದ್ದರು. ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಸಮಿತಿ ಸದಸ್ಯ ಪಾಟೀಲ್ ಸಿದ್ದರೆಡ್ಡಿ, ಎಫ್‌ಪಿಎಐ ಕಾರ್ಯದರ್ಶಿ ಪಿ.ಜಿ.ವಿಠ್ಠಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸ್ತ್ರೀರೋಗ ತಜ್ಞ ಪ್ರಶಾಂತ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಇತರರು ಇದ್ದರು.

ಪಿಸಿಪಿಎನ್‌ಡಿಟಿ ಕಾಯ್ದೆ ಜಾರಿಗೆ ಬಂದು 16ವರ್ಷಗಳಾದರೂ ಭ್ರೂಣಲಿಂಗ ಪತ್ತೆ ಪ್ರಕರಣಗಳು ನಡೆಯುತ್ತಿವೆ. ಮೊದಲ ಅಪರಾಧಕ್ಕೆ 50 ಸಾವಿರ ರೂ. ದಂಡ ಮತ್ತು 3 ವರ್ಷ ಜೈಲು. ಎರಡನೇ ಬಾರಿ ಕಾಯ್ದೆ ಉಲ್ಲಂಘಿಸಿದರೆ 1ಲಕ್ಷ ರೂ. ದಂಡ ಮತ್ತು 5 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜನರು ಜಾಗೃತರಾಗಿ ಭ್ರೂಣಲಿಂಗ ಪತ್ತೆಗೆ ಕಡಿವಾಣ ಹಾಕಲು ಸಹಕರಿಸಬೇಕು.
| ಡಾ.ವಿಜಯಲಕ್ಷ್ಮಿ ಅನುಷ್ಠಾನ ಅಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ