ಹುಬ್ಬಳ್ಳಿ: ಕ್ರಿಯಾಶೀಲ ಬರಹ ಹಾಗೂ ಚಟುವಟಿಕೆಗಳಿಂದಾಗಿ ಇದೇ ಮೊದಲ ಸಲ ರಾಜ್ಯ ಮಟ್ಟದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗುರುತಿಸಿಕೊಂಡ ಧಾರವಾಡ ಜಿಲ್ಲೆಯ ಸಾಧಕ ಪತ್ರಕರ್ತರನ್ನು ಸನ್ಮಾನಿಸಿದ ಸ್ಮರಣೀಯ ಘಳಿಗೆಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಾಕ್ಷಿಯಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸಂಘದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ಕೆಯುಡಬ್ಲುಜೆ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಸಾಧಕ ಪತ್ರಕರ್ತರಿಗೆ ಸನ್ಮಾನಿಸುವ ಮೂಲಕ ತವರುಮನೆ ಉಡುಗೊರೆ ನೀಡಿತು.
ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ಕೆಯುಡಬ್ಲುಜೆ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ವರದಿಗಾರ ಮರಿದೇವ ಹೂಗಾರ, ಪತ್ರಕರ್ತರಾದ ಗುರುರಾಜ ಹೂಗಾರ, ಶಿವಾನಂದ ಗೊಂಬಿ, ರವಿಕುಮಾರ ಕಗ್ಗಣ್ಣವರ ಅವರನ್ನು ಸಂಘದ ಪದಾಧಿಕಾರಿಗಳು, ಸದಸ್ಯರು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿ, ನಮ್ಮವರನ್ನು ಸನ್ಮಾನಿಸುವುದೆಂದರೆ ಅದು ಹರ್ಷದ ಸಂಗತಿ. ಮಾಧ್ಯಮ ಮಾನ್ಯತಾ ಸಮಿತಿ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಸದಸ್ಯರು ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಸಣ್ಣ ಹಳ್ಳಿಯಲ್ಲಿ ಪತ್ರಿಕೆ ಹಾಕುವ ಕೆಲಸದಿಂದ ನನ್ನ ಪತ್ರಿಕೋದ್ಯಮ ಪ್ರಯಾಣ ಆರಂಭವಾಯಿತು. ಹುಬ್ಬಳ್ಳಿಗೆ ಆಗಮಿಸಿದ ನಂತರ ಪರಿಶ್ರಮದಿಂದ ತೊಡಗಿಸಿಕೊಂಡೆ ಎಂದರು. ಈಗಿನ ಪತ್ರಿಕೋದ್ಯಮಕ್ಕೆ ತಕ್ಕಂತೆ ಕೆಲಸ ಮಾಡಿದರೆ ಬೆಳೆಯಲು ಸಾಧ್ಯ. ಮೊದಲ ಸನ್ಮಾನ ನಮ್ಮ ಸಂಘದಿಂದ ಸಿಕ್ಕಿರುವುದು ಬಹಳ ಖುಷಿ ಕೊಟ್ಟಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದರು.
ಪತ್ರಕರ್ತರಾದ ರವಿ ಕಗ್ಗನವರ, ಶಿವಾನಂದ ಗೊಂಬಿ, ಗುರುರಾಜ ಹೂಗಾರ, ಬಂಡು ಕುಲಕರ್ಣಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಮುಖರಾದ ಅಬ್ಬಾಸ್ ಮುಲ್ಲಾ, ರಾಜು ಬಿಜಾಪುರ, ಜಿ.ಟಿ. ಹೆಗಡೆ, ವಿಜಯ ಹೂಗಾರ, ಬಸವರಾಜ ಹೂಗಾರ ಇತರರು ಇದ್ದರು.