More

    ಸಿಡಿಎಸ್ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ

    ಮದ್ದೂರು: ಎಲೆಮರೆ ಕಾಯಿಯಂತೆ ಸಮಾಜಮುಖಿ ಕಾರ್ಯ ಮಾಡುವವರನ್ನು ಸಂಘ-ಸಂಸ್ಥೆಗಳು ಗುರುತಿಸಬೇಕು ಎಂದು ಮಳವಳ್ಳಿಯ ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯಮದೂರು ಸಿದ್ದರಾಜು ಹೇಳಿದರು.

    ಪಟ್ಟಣದ ಪುರಸಭೆಯ ಸಿಡಿಎಸ್ ಭವನದಲ್ಲಿ ಭಾನುವಾರ ಅಂಬರ ಸೋಶಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ನೊಂದವರ ಬಾಳಿಗೆ ಹಲವಾರು ಜನರು ಬೆಳಕಾಗಿದ್ದಾರೆ. ಅಂತಹ ಮಾನವೀಯ ಗುಣಗಳಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

    ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಸ್ತೃತವಾದ ಸಂವಿಧಾನವನ್ನು ನೀಡುವ ಮೂಲಕ ತಳ ಸಮುದಾಯದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಕನಕದಾಸ, ಬಸವಣ್ಣ, ಬುದ್ಧ, ಅಂಬೇಡ್ಕರ್, ಕುವೆಂಪು ಸೇರಿದಂತೆ ಹಲವರು ಸಮಾಜದ ಪರಿವರ್ತನೆಗಾಗಿ ದುಡಿದಿದ್ದು, ಅಂತಹ ಮಹನೀಯರನ್ನು ಜಾತಿ ಹೆಸರಿನಲ್ಲಿ ಕಟ್ಟಿ ಹಾಕುವುದು ಸರಿಯಲ್ಲ. ಆ ಪ್ರವೃತ್ತಿಯನ್ನು ಬಿಟ್ಟು ವಿಶ್ವಮಾನವರನ್ನಾಗಿ ಕಾಣಬೇಕಾದ ಅಗತ್ಯತೆ ಇದೆ ಎಂದರು.

    ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಂಘಟನಾ ಕಾರ್ಯದರ್ಶಿ ಚೆಲುವರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಿಸ್ವಾರ್ಥವಾಗಿ ದುಡಿದವರಿಗೆ ಪ್ರಶಸ್ತಿ ಸಿಗುವುದು ಅಪರೂಪ. ರಾಜ್ಯೋತ್ಸವ ಪ್ರಶಸ್ತಿ ನೀಡಲು ರಾಜಕೀಯ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಅವಕಾಶ ವಂಚಿತ ಸಾಧಕರಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎ.ಸಿ.ಮಹೇಂದ್ರ, ಸುರೇಶ್ ಕುಮಾರ್, ಎಸ್.ಕೆ.ಗಿರೀಶ್, ಟಿ.ಸಿ.ವಸಂತ, ಮಂಜುಳಾ ಆಲದಹಳ್ಳಿ, ಪುಟ್ಟಮಂಚಮ್ಮ, ಗುಳ್ಳಘಟ್ಟ ರತ್ನಮ್ಮ, ಸೌಭಾಗ್ಯ ಸಿದ್ದರಾಜು, ಮಹದೇವ, ವಿ.ವಿಜಯಾ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪುರಸಭೆಯ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದೀಪ ನಮನ ಸಲ್ಲಿಸಲಾಯಿತು. ನಂತರ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.

    ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಸಿ.ಉಮಶಂಕರ್, ಕಾರ್ಯಪಾಲಕ ಇಂಜಿನಿಯರ್ ಚಂದ್ರಹಾಸ, ಖ್ಯಾತ ಚಿತ್ರ ಕಲಾವಿದ ದೇವರಾಜು ಮಾರ್ಕಾಲು, ಗಾಯಕ ಗಾಮನಹಳ್ಳಿ ಸ್ವಾಮಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಮನಗರ ಜಿಲ್ಲಾಧ್ಯಕ್ಷ ಕೆ.ಶಿವಪ್ರಕಾಶ್, ಉಪಾಧ್ಯಕ್ಷ ಶಿವಶಂಕರ್, ಸಂಘಟಕರಾದ ಅಂಬರಹಳ್ಳಿ ಸ್ವಾಮಿ, ಸೌಭಾಗ್ಯ, ಮುಖಂಡರಾದ ಕೆ.ಟಿ. ಶಿವಕುಮಾರ್, ಸಿ.ಎಸ್. ಶಂಕರಯ್ಯ, ಗುರುಮಲ್ಲಯ್ಯ, ಗುಡಿಗೆರೆ ಬಸವರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts