ಹುಬ್ಬಳ್ಳಿ: ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಅಮರಗೋಳ ವಿದ್ಯಾಧಿರಾಜ ಭವನದಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ವಿಷ್ಣು ಲಾತೂರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022-23ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ಸುಮಾರು 2 ಸಾವಿರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಉಪ್ಪಾರ ಸಮಾಜದ ಏಕೈಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಸಚಿವರಾದ ಮಧು ಬಂಗಾರಪ್ಪ, ಶಿವರಾಜ ತಂಗಡಗಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ಭರತ ಮೈಲಾರ ಮಾತನಾಡಿ, ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಮೂಲಕ ನೋಂದಣಿ ಕೊನೆಗೊಂಡಿದೆ. ಆದರೆ, ಅಕ್ಟೋಬರ್ 1ರಂದು ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ ಜಾತಿ ಪ್ರಮಾಣಪತ್ರ, ಅಂಕ ಪಟ್ಟಿ ಹಾಗೂ ಆಧಾರ್ ಕಾರ್ಡ್ ಹಾಜರು ಪಡಿಸಿ ಪ್ರತಿಭಾ ಪುರಸ್ಕಾರಕ್ಕೆ ಹೆಸರು ನೋಂದಾಯಿಸಲು ಸಮಾಜದವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಈಶ್ವರಪ್ಪ ಶಿರಕೋಳ, ರಾಮಕೃಷ್ಣ ಬಬಲಿ, ಮಾರುತಿ ಮೇಳವಂಕಿ, ಪುಂಡಲೀಕ ಕರೆಣ್ಣವರ ಇದ್ದರು.