ಅಭಿವೃದ್ಧಿಗೆ 80ಪಿ ಕಾಯ್ದೆ ಅಡ್ಡಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆ 80ಪಿ ಜಾರಿ ಹಾಗೂ ಲೆಕ್ಕಪರಿಶೋಧನಾ ಶುಲ್ಕವನ್ನು 10 ಲಕ್ಷ ರೂ.ಗೆ ನಿಗದಿ ಮಾಡಿರುವುದು ಸಹಕಾರ ಬ್ಯಾಂಕುಗಳ ಬೆಳವಣಿಗೆಗೆ ಅಡ್ಡಿಯಾಗಿವೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ಧಮೇಗೌಡ ಹೇಳಿದರು.

65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ, ತಾಂತ್ರಿಕತೆ ವೃದ್ಧಿಪಡಿಸುವ ದಿನಾಚರಣೆ ಹಾಗೂ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಶುಲ್ಕವನ್ನು ಏಕರೂಪದಲ್ಲಿ 10 ಲಕ್ಷ ರೂ. ನಿಗದಿ ಮಾಡಿದೆ. ಈ ಮೊದಲು ಕೇವಲ 4 ಲಕ್ಷ ರೂ.ನಲ್ಲಿ ಲೆಕ್ಕ ಪರಿಶೋಧನೆ ಪ್ರಕ್ರಿಯೆ ಮುಗಿಯುತ್ತಿತ್ತು. ಅಡಿಟ್ ಶುಲ್ಕವನ್ನು ಹಿಂದಿನಂತೆ ಸಂಧಾನದ ಮೂಲಕ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡುವಂತೆ ಮನವಿ ಮಾಡಲಾಗುವುದು ಎಂದರು.

ಡಿಸಿಸಿ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದ 11 ಸಾವಿರ ರೈತರಿಂದ 7.50 ಕೋಟಿ ರೂ. ವಿಮಾ ಕಂಪನಿಗೆ ಪಾವತಿಸಲಾಗಿದೆ. ರಾಜ್ಯದಲ್ಲಿ 22 ಲಕ್ಷ ರೈತರು 280 ಕೋಟಿ ರೂ. ವಿಮೆ ಮೊತ್ತ ಪಾವತಿಸಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವಾಗ ಇಂಥ ಹೊರೆ ರೈತರ ಮೇಲೆ ಹಾಕವುದು ಸರಿಯಲ್ಲ. ವಿಮೆ ಕಂಪನಿ ಅಧಿಕಾರಿಗಳು ರೈತರಿಗೆ ಹಾಗೂ ಕೃಷಿ ಇಲಾಖೆಗೆ ಲಭ್ಯವಾಗುತ್ತಿಲ್ಲ. ಇದರಿಂದ ಹಲವು ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಗಣಕೀಕರಣ ಕುರಿತು ಮಂಜುನಾಥ್ ಮಾತನಾಡಿ, ತಂತ್ರಜ್ಞಾನದಲ್ಲಿ ರಾಜ್ಯ ವಿಶ್ವದಲ್ಲಿಯೇ ಮೊದಲಿಗನಾಗಿದೆ. ಆದರೆ, ಸಹಕಾರ ಬ್ಯಾಂಕ್​ಗಳು ಇನ್ನೂ ಗಣಕೀಕರಣವಾಗಲು ಹಿಂದೇಟು ಹಾಕುತ್ತಿವೆ. ತಂತ್ರಾಂಶ ಅಳವಡಿಸಿಕೊಂಡು ಕೋರ್ ಬ್ಯಾಂಕಿಂಗ್ ಸೌಲಭ್ಯ ಮಾಡಿಕೊಂಡರೆ ಕೆಲಸದ ವೇಗ ಹೆಚ್ಚಾಗುತ್ತದೆ ಎಂದರು.

ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕಿ ರೇಣುಕಾ ವೆಂಕಟೇಶ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಅಭಿವೃದ್ಧಿಯ ಯಶಸ್ಸು ಕಾಣಬಹುದು ಎಂದರು.

ಉತ್ತಮ ಪ್ರಗತಿ ಸಾಧಿಸಿದ ಸಹಕಾರ ಬ್ಯಾಂಕ್​ಗಳ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎ. ವಿವೇಕ್, ಉಪಾಧ್ಯಕ್ಷ ಪಿ.ರವಿ, ನಿರ್ದೇಶಕಿ ಡಿ.ಎಸ್. ರೇಖಾ ಇರೇಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ. ದಿನೇಶ್ ಹೆಗ್ಡೆ, ಟಿ.ಇ. ಮಂಜುನಾಥ್, ಮಾಮ್ೋಸ್ ಜಿಲ್ಲಾಧ್ಯಕ್ಷ ಹೆಡಗೆರೆ ಸುಬ್ರಹ್ಮಣ್ಯ ಇದ್ದರು.

80ಪಿ ತೆರಿಗೆ ವಿನಾಯಿತಿಗೆ ಮನವಿ: 2006-07ರಿಂದ ಕೇಂದ್ರ ಸರ್ಕಾರ ಸಹಕಾರ ಸಂಸ್ಥೆಗಳು ಲಾಭಂಶದ ಶೇ.33ರಷ್ಟು ಮೊತ್ತವನ್ನು ಕೇಂದ್ರಕ್ಕೆ ಪಾವತಿಸುವಂತೆ ಕಾಯ್ದೆ 80ಪಿ ಜಾರಿಮಾಡಿದೆ. ಡಿಸಿಸಿ ಬ್ಯಾಂಕ್ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ 2.5 ಕೋಟಿ ರೂ.ಪಾವತಿಸುತ್ತಿದೆ. ಹಾಲು ಉತ್ಪಾದಕ ಸಂಘಗಳು, ಅಪೆಕ್ಸ್ ಬ್ಯಾಂಕು ಸೇರಿ ರಾಜ್ಯದಲ್ಲಿ 850 ಕೋಟಿ ರೂ. ತೆರಿಗೆ ಪಾವತಿಸಿವೆ. ರೈತರು, ಜನ ಸಾಮಾನ್ಯರ ಬವಣೆಗೆ ಸಾಲ ನೀಡುವ ಸಹಕಾರ ಸಂಘಗಳಿಗೆ ಕಾಯ್ದೆ 80ಪಿ ತೆರಿಗೆ ವಿನಾಯಿ ನೀಡಬೇಕು ಎಂದು ಮನವಿ ಮಾಡಿದರು.

ವಿಮೆ ಗೊಂದಲ ನಿವಾರಿಸಿ: ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ನ್ಯೂನತೆ ಮತ್ತು ಗೊಂದಲ ಸರಿಪಡಿಸಬೇಕು. 2016-17ರಲ್ಲಿ ಹವಾಮಾನ ಆಧರಿತ ಬೆಳೆ ವಿಮೆಯಡಿ 3,788 ರೈತರು 10.40 ಕೋಟಿ ರೂ. ಪಾವತಿಸಿದ್ದು, 886 ರೈತರಿಗೆ 5.11 ಕೋಟಿ ರೂ. ಮಾತ್ರ ಪರಿಹಾರ ಬಂದಿದೆ. 2902 ರೈತರಿಗೆ ವಿಮೆ ಬಂದಿಲ್ಲ. ಫಸಲ್ ಭಿಮಾ ಯೋಜನೆಯಡಿ 1,858 ರೈತರು 25.41 ಲಕ್ಷ ರೂ. ವಿಮೆ ಪಾವತಿಸಿದ್ದು, 27 ರೈತರಿಗೆ 3.91 ಲಕ್ಷ ರೂ. ಮಾತ್ರ ಪರಿಹಾರ ಬಂದಿದೆ. ಇನ್ನೂ 1,831 ರೈತರಿಗೆ ಪರಿಹಾರ ಬಂದಿಲ್ಲ. ಒಂದೇ ಗ್ರಾಮದಲ್ಲಿ ಒಬ್ಬ ರೈತರಿಗೆ ಪರಿಹಾರ ಬಂದರೆ ಮತ್ತೊಬ್ಬರಿಗೆ ಬಂದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.