ಕೈಗಾರಿಕೆಗಳಿಗೆ ನೀರು ದರ ಏರಿಕೆ ಹಿಂಪಡೆಯಲು ಒತ್ತಾಯ

ಮಂಗಳೂರು: ಕೈಗಾರಿಕಾ ಜಲ ನೀತಿಯನ್ವಯ ರಾಜ್ಯದಲ್ಲಿ ಕೈಗಾರಿಕೆಗಳಿಗೆ ನೀಡುವ ನೀರಿನ ದರವನ್ನು ವಿಪರೀತ ಏರಿಕೆ ಮಾಡಿರುವ ಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ವಿಷಾದ ವ್ಯಕ್ತಪಡಿಸಿ, ಅದನ್ನು ಹಿಂಪಡೆಯಲು ಒತ್ತಾಯಿಸಿದೆ.

ಜಲ ದರಗಳನ್ನು 2002ರ ನೀತಿಯನ್ವಯ ಕೈಗಾರಿಕಾ ಸಮುದಾಯಕ್ಕೆ ಸಮಾಧಾನವಾಗುವಂತೆ ಪರಿಷ್ಕರಣೆ ಮಾಡಬೇಕಿತ್ತು. ಆದರೆ ಪ್ರಾಕೃತಿಕ ಮೂಲದ ನೀರಿನ ದರವನ್ನು 1800 ರೂ.ನಿಂದ(ಮಿಲಿಯನ್ ಕ್ಯೂಬಿಕ್ ಫೀಟ್‌ಗೆ) 1.50 ಲಕ್ಷ ರೂ.ಗೆ ಹಾಗೂ ಕೆರೆ ಮತ್ತು ಜಲಾಗಾರಗಳಿಂದ ಪಡೆಯುವ ನೀರಿನ ದರವನ್ನು 3200 ರೂ.ನಿಂದ 3 ಲಕ್ಷ ರೂ.ಗೆ ತೀರಾ ದುಬಾರಿಯಾಗಿ ಏರಿಸಲಾಗಿದೆ. ಇದನ್ನು ಕೈಬಿಟ್ಟು ನ್ಯಾಯಬದ್ಧ ಏರಿಕೆ ಮಾಡುವಂತೆ ಸಂಸ್ಥೆ ಅಧ್ಯಕ್ಷ ಸುಧಾಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳು ಕೈಗಾರಿಕೆಗಳಿಗೆ 27-2-2015ರ ಸರ್ಕಾರಿ ಆದೇಶದ ಅನ್ವಯ ಏಕರೂಪದ ತೆರಿಗೆ ವಿಧಿಸಬೇಕು. ಆದರೆ ಇದನ್ನು ಬಿಟ್ಟು ಗ್ರಾಪಂಗಳು ಅತಿಯಾದ ಹಾಗೂ ಏಕರೂಪವಲ್ಲದ ಆಸ್ತಿ ತೆರಿಗೆ ವಿಧಿಸುತ್ತಿವೆ, ಇದು ಉದ್ದಿಮೆದಾರರಿಗೆ ಮಾಡಲಾಗುತ್ತಿರುವ ಶೋಷಣೆ ಎಂದರು.

ಗ್ರಾಪಂಗಳು ಶೇ 2.5ರಿಂದ 2.45ರಷ್ಟು ತೆರಿಗೆ ವಿಧಿಸಬೇಕು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಸಿಯಾನ್ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ದೇಶ-ವಿದೇಶದ ಸುಮಾರು 41 ಉದ್ಯಮಿಗಳು ಪಾಲ್ಗೊಂಡಿದ್ದು, ಮುಂದಿನ ದಿನದಲ್ಲಿ ರಾಜ್ಯದಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳ ಉದ್ದಿಮೆ, ಕೈಗಾರಿಕೆಗಳ ಸ್ಥಾಪನೆಗೆ ಮನಸ್ಸು ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಉದ್ಯಮ ಕ್ಷೇತ್ರ ಬಹುದೊಡ್ಡ ಸಾಧನೆ ಮಾಡಲಿದೆ. ಜೂನ್‌ನಲ್ಲಿ ಬೆಂಗಳೂರಿನಲ್ಲಿ ಎನ್‌ಆರ್‌ಐ ಕನ್‌ಕ್ಲೇವ್ ನಡೆಯಲಿದ್ದು, ಇದರಲ್ಲಿ ದೇಶ-ವಿದೇಶದ ಹಲವು ಉದ್ಯಮಗಳು ಪಾಲ್ಗೊಂಡು, ರಾಜ್ಯದಲ್ಲಿ ಇನ್ನಷ್ಟು ಉದ್ಯಮ ಕ್ಷೇತ್ರ ಅಭಿವೃದ್ಧಿ ಗುರಿ ಇರಿಸಲಾಗಿದೆ ಎಂದರು.
ಪ್ರಮುಖರಾದ ಸಿ.ಆರ್.ಜನಾರ್ದನ್, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಉಪಾಧ್ಯಕ್ಷ ಇಸಾಕ್ ವಾಝ್ ಹಾಜರಿದ್ದರು.

ಭೂಬ್ಯಾಂಕ್ ಸ್ಥಾಪಿಸಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವ ನೆಲೆಯಲ್ಲಿ ಭೂಮಿ ಲಭ್ಯತೆಯ ಭೂಬ್ಯಾಂಕ್‌ಗಳ ರಚನೆಯಾಗಿದ್ದರೂ, ದ.ಕ. ಜಿಲ್ಲೆಯಲ್ಲಿ ಭೂಬ್ಯಾಂಕ್ ಆಗದಿರುವ ಕಾರಣದಿಂದ ವಿವಿಧ ಉದ್ದಿಮೆ, ಕೈಗಾರಿಕೆಗಳು ದ.ಕ. ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಭೂ ಬ್ಯಾಂಕ್ ಸ್ಥಾಪನೆಗೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸುಧಾಕರ ಶೆಟ್ಟಿ ಹೇಳಿದರು. ಜಿಲ್ಲೆಯಲ್ಲಿರುವ ಗಂಜಿಮಠ, ಬೈಕಂಪಾಡಿ, ಉಡುಪಿಯ ನಂದಿಕೂರು ಕೈಗಾರಿಕಾ ಪ್ರದೇಶಗಳು ಭರ್ತಿಯಾಗಿವೆ. ಹೊಸದಾಗಿ ಕನಿಷ್ಠ 1000 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಇರಿಸಬೇಕು. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಿಲಾಗಿದ್ದು, ಈ ಕುರಿತ ಕಡತ ಬೆಂಗಳೂರಿನ ಇಲಾಖೆಯಲ್ಲಿ ಬಾಕಿಯಾಗಿರುವ ಕಾರಣದಿಂದ ಶೀಘ್ರದಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಕಾರ್ಯಗತಗೊಳಿಸಲಾಗುವುದು ಎಂದರು.