More

    ಫೆ. 13ಕ್ಕೆ ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ

    ಬೆಳಗಾವಿ: ಬೆಳೆಗಳಿಗೆ ಬೆಂಬಲ ಬೆಲೆ, ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ, ಬೆಳೆಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕಲು ಫೆ. 13ರಂದು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮುಖಂಡ ಚೂನಪ್ಪ ಪೂಜೇರ ತಿಳಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರೈತರುಗಳಿಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಉಭಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಹಾಗಾಗಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಾಯಕರನ್ನು ಎಚ್ಚರಿಸಲು ರೈತರ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.

    ಬೀಜ ಕಾಯ್ದೆ ಕೈಬಿಡಿ: ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಅಧಿಸೂಚನೆ ನೀಡದೆ ನಿರ್ಲಕ್ಷೃ ಮಾಡುತ್ತಿರುವ ಮತ್ತು ದೇಶಿ ಬೀಜ ಸಂರಕ್ಷಣೆ ಮಾಡುವ ಬದಲು ವಿದೇಶಿ ಬೀಜ ತರಲು ಬೀಜ ಕಾಯ್ದೆ ತರುತ್ತಿರುವುದನ್ನು ಕೇಂದ್ರ ಸರ್ಕಾರ ತಕ್ಷಣ ಕೈಬಿಡಬೇಕು. ಆರ್‌ಸಿಇಎಫ್ ಒಪ್ಪಂದದಿಂದ ಹೊರಬರಬೇಕು. ಪ್ರಸಕ್ತ ಸಾಲಿನ ಕಬ್ಬಿನ ಬಾಕಿ ಹಣ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ಬೆಂಬಲ ಬೆಲೆ ನೀಡಿ: ರೈತ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ರಾಜ್ಯದಲ್ಲಿ ರೈತರು ಬೆಳೆದಿರುವ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಒಬ್ಬ ರೈತರಿಂದ ಕೇವಲ 10 ಕ್ವಿಂಟಾಲ್ ತೊಗರಿ ಖರೀದಿ ಮಾಡಿದರೆ ಸಮಸ್ಯೆಯಾಗುತ್ತದೆ. ಹಾಗಾಗಿ ಸರ್ಕಾರ ಎಲ್ಲ ತೊಗರಿ ಖರೀದಿಸಲು ಕ್ರಮ ವಹಿಸಬೇಕು. ಜತೆಗೆ ವಿಜಯಪುರ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ತಕ್ಷಣ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ವಿಜಯಪುರ ಜಿಲ್ಲಾಧ್ಯಕ್ಷ ಚಂದ್ರೇಗೌಡ ಪಾಟೀಲ, ಮಹಾಂತೇಶ ದೇಸಾಯಿ, ರಾಘವೇಂದ್ರ ನಾಯಕ, ಜಯಶ್ರೀ ಗುರಣ್ಣವರ, ಮಹೇಶಗೌಡ ಸುಬೇದಾರ, ಪ್ರಕಾಶ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts