ಉಡುಪಿ ಕಾಂಗ್ರೆಸ್ ಅಸ್ತಿತ್ವ ಧಕ್ಕೆ ಭೀತಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸೋಲಿನ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಮೈತ್ರಿಯಿಂದಾಗಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಸಾಂಪ್ರದಾಯಿಕ ಕಾಂಗ್ರೆಸ್ಸಿಗರ ಮತಗಳು ಮೈತ್ರಿ ಅಭ್ಯರ್ಥಿಗೆ ಬೀಳದಿರುವುದು ಇಷ್ಟು ದೊಡ್ಡ ಅಂತರದಲ್ಲಿ ಸೋಲಿಗೆ ಕಾರಣವಾಗಿರುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು ಅಭಿಪ್ರಾಯಪಟ್ಟಿದ್ದಾರೆ.

ಸತತ ಸೋಲಿನ ಹಿನ್ನೆಲೆಯಲ್ಲಿ ಪಕ್ಷ ತಳಮಟ್ಟದಲ್ಲಿ ಸಂಘಟನಾತ್ಮಕವಾಗಿ ಇನ್ನಷ್ಟು ಬಲಗೊಳ್ಳುವ ಅವಶ್ಯಕತೆ ಇದೆ. ಪ್ರಚಲಿತ ರಾಜಕೀಯ ವಿದ್ಯಮಾನಕ್ಕೆ ಸಂಬಂಧಿಸಿ ಯುವ ಸಮುದಾಯದ ಚಿಂತನೆ ಬದಲಾಗುತ್ತಿದೆ, ಪಕ್ಷ ಸಂಘಟನೆಗಾಗಿ ಹಲವು ವಿಚಾರಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಈ ಬಗ್ಗೆ ಜಿಲ್ಲಾ ಮತ್ತು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.

ಪ್ರಮೋದ್ ಚಿತ್ತ ಎತ್ತ?: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಮೋದ್ ಮಧ್ವರಾಜ್ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಬಿ ಫಾರ್ಮ್ ಗಿಟ್ಟಿಸಿಕೊಂಡಿದ್ದರು, ಜೆಡಿಎಸ್ ಶಾಲನ್ನೂ ಹೆಗಲ ಮೇಲೆ ಹಾಕುತ್ತಿದ್ದರು. ಆದರೆ ಆಗ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಚುನಾವಣೆ ಬಳಿಕ ಪ್ರಮೋದ್‌ಗೆ ಪಕ್ಷದ ಜವಾಬ್ದಾರಿ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದು ಕೆಲಸಮಯದ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದರು. ಈಗ ಪ್ರಮೋದ್ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ ಈಗ ಯಾವ ಪಕ್ಷದಲ್ಲಿದ್ದಾರೆ ಎಂಬ ಬಗ್ಗೆ ಗೊಂದಲವಿದೆ. ಅವರ ಮುಂದಿನ ನಡೆಯೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ‘ಪ್ರಮೋದ್ ಉತ್ತಮ ರಾಜಕೀಯ ನಾಯಕ. ಜನಪ್ರತಿನಿಧಿಯಾಗಿ ಒಳ್ಳೆಯ ಕೆಲಸ ಮಾಡಿದವರು. ಮುಂದಿನ ನಿರ್ಧಾರ ಅವರ ವೈಯಕ್ತಿಕ ವಿಚಾರ’ ಎಂದರು.