ನಿರ್ವಹಣೆ ಕೊರತೆ ಅನಾಹುತಕ್ಕೆ ಕಾರಣ ಎಂದ ತನಿಖಾ ತಂಡ 

ಕುಂದಾಪುರ: ದೇವಲ್ಕುಂದ ಮಲ್ಪೆ ಫ್ರೆಶ್ ಮರೈನ್ ಮೀನು ಶೀತಲೀಕರಣ ಘಟಕದಲ್ಲಿ ಸೋಮವಾರ ಸಂಭವಿಸಿದ ಅಮೋನಿಯಾ ಸೋರಿಕೆಗೆ ಪೈಪ್‌ಲೈನ್ ಜಂಕ್ಷನ್ ಬೋಲ್ಟ್ ತುಂಡಾಗಿರುವುದೇ ಕಾರಣ ಎನ್ನುವ ಸಂಗತಿ ಕುಂದಾಪುರ ಎಸಿ ಡಾ.ಎಸ್.ಎಸ್.ಮಧುಕೇಶ್ವರ್ ನೇತೃತ್ವದ ತನಿಖಾ ತಂಡ ಪರಿಶೀಲನೆ ಸಂದರ್ಭ ಪತ್ತೆ ಹಚ್ಚಿದೆ.

ಬುಧವಾರ ಘಟಕಕ್ಕೆ ಭೇಟಿ ನೀಡಿದ ತಂಡ, ಘಟಕಕ್ಕೆ ಯಂತ್ರ ಸರಬರಾಜು ಮಾಡಿದ ಕಂಪನಿ ಅಧಿಕಾರಿಗಳು, ಘಟಕದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಹಲವಾರು ಮಾಹಿತಿ ಕಲೆ ಹಾಕಿದೆ. ಶೀತಲೀಕರಣ ಘಟಕದ ಫ್ರೀಝರ್, ಯಂತ್ರೋಪಕರಣ, ಪ್ಯಾಕಿಂಗ್ ವಿಭಾಗ, ಕಾರ್ಮಿಕರು ಕೆಲಸ ನಿರ್ವಹಿಸುವ ಕೊಠಡಿ, ಮಹಿಳಾ, ಪುರುಷ ಕಾರ್ಮಿಕರ ಹಾಸ್ಟೆಲ್‌ನಲ್ಲಿ ಪರಿಶೀಲನೆ ನಡೆಸಿತು.

ನಿರ್ವಹಣೆ, ಮುಂಜಾಗ್ರತೆ ಇಲ್ಲ: ಯಂತ್ರ ಕಾರ್ಯನಿರ್ವಹಣೆ, ಚಾಲನೆ ಮಾಡುವ ಸಿಬ್ಬಂದಿ ಜತೆ ಮಾತುಕತೆ ನಡೆಸಿದ ಪ್ರಕರಣದ ತನಿಖಾಧಿಕಾರಿ ಡಾ.ಮಧುಕೇಶ್ವರ್, ಘಟಕದ ತಂತ್ರಜ್ಞರಿಗೆ ಯಂತ್ರಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಆದರೆ ಯಂತ್ರಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ತುರ್ತು ಸಂದರ್ಭ ಅಳವಡಿಸಬೇಕಾದ ಯಾವುದೇ ಮುಂಜಾಗ್ರತಾ ಕ್ರಮವನ್ನೂ ಘಟಕ ಮಾಲೀಕರು ವಹಿಸಿಲ್ಲ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದರು.

ಪೈಪ್‌ನಲ್ಲಿದ್ದ ಅಮೋನಿಯಾ ಸೋರಿಕೆ:2017 ಆ.4ರಂದು ಮುಂಬೈಯ ಕಂಪನಿ ಯಂತ್ರಗಳ ಫಿಟ್ಟಿಂಗ್ ನಡೆಸಿ ಘಟಕ ಮಾಲೀಕರಿಗೆ ಹಸ್ತಾಂತರಿಸಿದೆ. ಕೇವಲ 2 ವರ್ಷಗಳಲ್ಲೇ ಕಂಡೆನ್ಸರ್ ಔಟ್‌ಲೆಟ್ ಪ್ಲಾಂಜ್‌ನಲ್ಲಿರುವ ಬೋಲ್ಟ್ ತುಂಡಾಗಿರುವುದರಿಂದ ಅಮೋನಿಯಾ ಸೋರಿಕೆಯಾಗಿದೆ. 8 ಸಾವಿರ ಕೆ.ಜಿಯಷ್ಟು ಪ್ರಮಾಣದ ಅಮೋನಿಯಾ ಟ್ಯಾಂಕ್‌ನಲ್ಲಿ ಶೇಖರಣೆಯಾಗಿದ್ದು, 1,500 ಕೆ.ಜಿಯಷ್ಟು ಪೈಪ್‌ನೊಳಗಿತ್ತು. ಅನಾಹುತ ಸಂದರ್ಭ ಸಿಬ್ಬಂದಿ ವಾಲ್ವ್ ಬಂದ್ ಮಾಡಿದರೂ ಪೈಪ್‌ನೊಳಗಿದ್ದ ಅಮೋನಿಯಾ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ.

ತ್ಯಾಜ್ಯ ಬಿಸಾಕಿದರೆ ಕಾನೂನು ಕ್ರಮ: ಘಟಕದಿಂದ ತ್ಯಾಜ್ಯವನ್ನು ರಾತ್ರಿ ವೇಳೆ ಹೊರಗೆ ಬಿಸಾಡುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಎಸಿ ಡಾ.ಮಧುಕೇಶ್ವರ್, ತ್ಯಾಜ್ಯ ಹೊರಗೆ ಸುರಿಯುವುದು ದೃಢಪಟ್ಟರೆ ಕ್ರಮ ಕೈಗೊಳ್ಳಲಾಗುತ್ತದೆ. ಘಟಕ ಅಗ್ನಿಶಾಮದಳ ಎನ್‌ಒಸಿ ಪಡೆಯದಿರುವುದು ಸರಿಯಲ್ಲ ಎಂದರು.
ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಪರಿಸರ ಇಲಾಖೆ ಅಧಿಕಾರಿ ಲಕ್ಷ್ಮೀಕಾಂತ್, ಜಿಲ್ಲಾ ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಜೀವನ್ ಕುಮಾರ್, ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಪರಿಸರ ಇಲಾಖೆ ಫ್ಯಾಕ್ಟರಿ ಮತ್ತು ಬೋಯಿಂಗ್ ಪ್ರಭಾರ ಅಧಿಕಾರಿ ವಾಮನ ನಾಯ್ಕ, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ, ಅಗ್ನಿಶಾಮಕದಳದ ಕೊರಗು ನಾಗು ಮೊಗವೀರ, ರಾಘವೇಂದ್ರ ಆಚಾರ್, ಜಿಲ್ಲಾ ಆರೋಗ್ಯಾಧಿಕಾರಿ ಎಚ್.ಅಶೋಕ್, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ ಇದ್ದರು.

ಕಾರ್ಮಿಕರ ವಸತಿಗೃಹ ಅವ್ಯವಸ್ಥೆ: ಘಟಕದಲ್ಲಿ 90 ಜನ ಕಾಯಂ, 311 ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಘಟಕದ ಮಹಡಿಯಲ್ಲಿರುವ ಮಹಿಳಾ ಕಾರ್ಮಿಕರ ವಸತಿ ಕೊಠಡಿ ಅವ್ಯವಸ್ಥೆಯ ಆಗರವಾಗಿದೆ. ಗೋಡೌನ್‌ನಂತಿರುವ ಜಾಗಕ್ಕೆ ಗಾಳಿ, ಬೆಳಕು ಸರಿಯಾಗಿ ಬರುತ್ತಿಲ್ಲ. ಘಟನೆ ನಡೆದು ಎರಡು ದಿನ ಕಳೆದರೂ ವಾಸನೆ ಇದ್ದು, ವಾಕರಿಗೆ ಬರುವಂತಿತ್ತು. ಪ್ಯಾಕಿಂಗ್ ಕೊಠಡಿಯಲ್ಲೂ ಅಮೋನಿಯಾ ವಾಸನೆ ದಟ್ಟವಾಗಿದ್ದು, ಸಹಿಸಲಾಗದೆ ತನಿಖಾಧಿಕಾರಿ ಹೊರಬರಬೇಕಾಯಿತು.

ಅಮೋನಿಯಾ ಸೋರಿಕೆ ಬಳಿಕ ಘಟಕದ ಕಾರ್ಯ ಸ್ಥಗಿತಗೊಳಿಸಲಾಗಿದೆ. ಕೆಲಸ ನಿಲ್ಲಿಸಿದ್ದರಿಂದ ಪೈಪ್‌ನೊಳಗಿರುವ ಲಿಕ್ವಿಡ್ ಬೇರೆ ರೂಪಕ್ಕೆ ಬದಲಾವಣೆಗೊಳ್ಳುತ್ತಿರುವುದರಿಂದ ಒತ್ತಡ ಜಾಸ್ತಿಯಾಗುತ್ತಿವೆ. ಕೂಡಲೇ ಎಂಸಿಎಫ್‌ನ ಪರಿಣಿತರನ್ನು ಕರೆಸಿ ಅಗ್ನಿಶಾಮಕ ದಳ, ಆಂಬುಲೆನ್ಸ್ ಸ್ಥಳದಲ್ಲಿರಿಸಿ ಮುಂಜಾಗ್ರತಾ ಕ್ರಮ ಕೈಗೊಂಡು ಕಂಡೆನ್ಸರ್ ಆನ್ ಮಾಡಿ ಕೂಲ್ ಮಾಡುವ ಬಗ್ಗೆ ಮಾಲೀಕರೊಂದಿಗೆ ಚರ್ಚೆ ನಡೆಸಿದ್ದೇವೆ. ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತನಿಖಾ ಸಮಿತಿಯಲ್ಲಿರುವವರ ಜತೆ ಚರ್ಚಿಸಲಾಗುವುದು.
ಡಾ.ಮಧುಕೇಶ್ವರ್, ಸಹಾಯಕ ಆಯುಕ್ತ

Leave a Reply

Your email address will not be published. Required fields are marked *