ಮಗು ಸತ್ತಿದೆ ಎಂದು ನಂಬಿಸಿ ಹೆತ್ತ ಮಗುವನ್ನೇ ಮಾರಿದ್ದ ತಂದೆ

ಹುಬ್ಬಳ್ಳಿ: ಹೆತ್ತ ಮಗುವನ್ನೇ ಸತ್ತಿದೆ ಎಂದು ಪತ್ನಿಯನ್ನು ನಂಬಿಸಿ ತಂದೆಯೇ ಬೇರೆಯವರಿಗೆ ಮಾರಾಟ ಮಾಡಿರುವ ಘಟನೆ ನಡೆದಿದೆ.

ರಾಮಲಿಂಗೇಶ್ವರನಗರದ ಸಂಜು ಬಿಸ್ಟಪ್ಪ ಎಂಬಾತ ನವಜಾತ ಶಿಶುವನ್ನೇ ಬೆಂಗಳೂರು ಮೂಲದವರಿಗೆ ಮಾರಾಟ ಮಾಡಿದ್ದಾನೆ.

ಮೂರು ವರ್ಷಗಳ ಹಿಂದೆ ಸಂಜು ಮತ್ತು ಲಲಿತಾ ಅವರ ಮದುವೆಯಾಗಿತ್ತು. ಜ. 12ರಂದು ಈ ದಂಪತಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆದರೆ, ಹೆಣ್ಣು ಮಗು ಬೇಡವೆಂಬ ಕಾರಣಕ್ಕೆ ಮಗು ಸತ್ತಿದೆ ಎಂದು ಪತ್ನಿಯನ್ನು ನಂಬಿಸಿ ಮಾರಾಟ ಮಾಡಿದ್ದನು.

ಸ್ವಲ್ಪ ದಿನಗಳ ನಂತರ ಆಸ್ಪತ್ರೆಯ ದಾಖಲಾತಿ ಪರಿಶೀಲಿಸಿದಾಗ ಮಗು ಜೀವಂತ ಮತ್ತು ಆರೋಗ್ಯವಾಗಿರುವ ಬಗ್ಗೆ ದೃಢೀಕರಣ ಹೊಂದಿದ್ದ ಮಗುವಿನ ಜನನ ಪ್ರಮಾಣ ಪತ್ರ ಪತ್ತೆಯಾಗಿದೆ.

ಒಂದೂವರೆ ತಿಂಗಳ ನಂತರ ಮಗು ಮಾರಾಟವಾದ ಬಗ್ಗೆ ಲಲಿತಾಳಿಗೆ ಅನುಮಾನ ಉಂಟಾಗಿ ಪತಿಯನ್ನು ವಿಚಾರಿಸಿದಾಗ ಪತಿ ಸಂಜು ಮನೆಯಿಂದ ಕಾಲ್ಕಿತ್ತಿದ್ದಾನೆ. ಮಗುವಿನ ಬಗ್ಗೆ ವಿಚಾರಿಸಿದಾಗಲೆಲ್ಲ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಾನೆ. ಬಳಿಕ ಮಗುವನ್ನು ಖರೀದಿಸಿದ್ದ ಮಹಿಳೆ ಜತೆ ದೂರವಾಣಿ ಮುಖೇನ ಮಾತನಾಡಿದ್ದಾರೆ. ಆಡಿಯೋ ಕ್ಲಿಪಿಂಗ್ ಸಹಿತ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. (ದಿಗ್ವಿಜಯ ನ್ಯೂಸ್)