VIDEO| ನಮ್ಮ ತಂದೆಯಿಂದ ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ: ದಲಿತ ಯುವಕನನ್ನು ಮದುವೆಯಾದ ಬಿಜೆಪಿ ಶಾಸಕನ ಮಗಳ ಅಳಲು

ಬರೇಲಿ (ಉತ್ತರ ಪ್ರದೇಶ): ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ತಂದೆಯಿಂದ ನಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬಿಜೆಪಿ ಶಾಸಕನ ಮಗಳೊಬ್ಬಳು ಪೊಲೀಸರ ರಕ್ಷಣೆ ಕೋರಿದ್ದಾಳೆ.

ಬರೇಲಿ ಜಿಲ್ಲೆಯ ಬಿಥಾರಿ ಚೈನ್​ಪುರ್​ ಕ್ಷೇತ್ರದ ಬಿಜೆಪಿ ಶಾಸಕನ ಮಗಳಾಗಿರುವ ಸಾಕ್ಷಿ ಮಿಶ್ರಾ (23) ಸಾಮಾಜಿಕ ಜಾಲತಾಣದಲ್ಲಿ ಬುಧವಾರ ವಿಡಿಯೋವೊಂದನ್ನು ಅಪ್​ಲೋಡ್​ ಮಾಡಿ ಕಳೆದ ಗುರುವಾರ ಅಜಿತ್​ ಕುಮಾರ್ ​(29) ಎಂಬ ದಲಿತ ಯುವಕನನ್ನು ಮದುವೆಯಾಗಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ವಿಡಿಯೋವನ್ನು ಅಪ್​ಲೋಡ್​ ಮಾಡಿರುವ ಯುವತಿ ಅದರಲ್ಲಿ ನಮ್ಮನ್ನು ಬಂಧಿಸುವುದಾಗಿ ಹಾಗೂ ಕೊಲ್ಲುವುದಾಗಿ ತಂದೆ, ಸಹೋದರ ಹಾಗೂ ಅವರ ಸಹವರ್ತಿಗಳು ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಬರೇಲಿಯ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾಳೆ. ಅಲ್ಲದೆ, ತಮಗೆ ನೆರವಾಗುವಂತೆ ಬರೇಲಿಯ ಸಂಸದರು ಹಾಗೂ ಶಾಸಕರಲ್ಲಿ ಸಾಕ್ಷಿ ಮನವಿ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಡಿಐಜಿ ಆರ್​.ಕೆ. ಪಾಂಡೆ, ಯುವತಿಯು ರಕ್ಷಣೆ ಕೋರಿರುವ ವಿಡಿಯೋ ನೋಡಿದ್ದೇನೆ. ದಂಪತಿಗೆ ರಕ್ಷಣೆ ನೀಡುವಂತೆ ಎಸ್​ಎಸ್​ಪಿಗೆ ಸೂಚಿಸಿದ್ದೇನೆ. ಆದರೆ, ಯುವತಿ ತಾನಿರುವ ಸ್ಥಳದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಹಾಗಾಗಿ, ಅವರಿಗೆ ಪೊಲೀಸರು ಹೇಗೆ ರಕ್ಷಣೆ ನೀಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ವಿಡಿಯೋ ಮೂಲಕ ತಂದೆಯ ಬಳಿ ಕೇಳಿಕೊಂಡಿರುವ ಯುವತಿ, ಒಂದು ವೇಳೆ ನನಗಾಗಲಿ ಅಥವಾ ನನ್ನ ಗಂಡನಿಗಾಗಲಿ ಏನಾದರೂ ಆದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದಾಳೆ. (ಏಜೆನ್ಸೀಸ್​)

One Reply to “VIDEO| ನಮ್ಮ ತಂದೆಯಿಂದ ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ: ದಲಿತ ಯುವಕನನ್ನು ಮದುವೆಯಾದ ಬಿಜೆಪಿ ಶಾಸಕನ ಮಗಳ ಅಳಲು”

Leave a Reply

Your email address will not be published. Required fields are marked *