ತಂದೆ-ತಾಯಿಯರ ಪಾದಪೂಜೆ ಮಾಡಿದ 600 ಮಕ್ಕಳು

ಸಿಂಧನೂರು:  ಗುರು-ಹಿರಿಯರಲ್ಲಿ ಭಕ್ತಿ ಭಾವನೆ ಮೂಡಿಸಿ ಸ್ನೇಹ ವಿಶ್ವಾಸದ ಮೌಲ್ಯ ಎತ್ತಿ ಹಿಡಿಯುವ ಪಾದಪೂಜೆ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹಾಸ್ಯ ಕಲಾವಿದ ಪ್ರಾಣೇಶ ಬೀಚಿ ಗಂಗಾವತಿ ಹೇಳಿದರು.

ನಗರದ ಹೊಸಳ್ಳಿಕ್ಯಾಂಪ್‌ನ ಯಲಮಂಚಲಿ ವಾಸುದೇವರಾಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಕೃಷ್ಣ ದೇವರಾಯ ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗುರುಗಳು, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸಂಸ್ಕಾರವಂತ ಮಕ್ಕಳು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದರು.

ಇಂದು ಶಿಕ್ಷಣ ಪಡೆದ ಮಕ್ಕಳಲ್ಲಿ ಸಂಸ್ಕಾರ ಇಲ್ಲವಾಗುತ್ತಿದೆ. ತಂದೆ-ತಾಯಿಯರನ್ನು ಎಲ್ಲಿಯವರೆಗೆ ಗೌರವಿಸುತ್ತೇವೆಯೋ ಅಲ್ಲಿಯವರೆಗೆ ನಮ್ಮ ಬದುಕು ಹಸನಾಗಿರುತ್ತದೆ ಎಂದರು. ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ತಂದೆ-ತಾಯಿಗಳೇ ದೈವಿಸರೂಪಿಗಳಾಗಿದ್ದು ಅಂಥವರ ಪಾದಪೂಜೆ ಮಾಡುವ ಪುಣ್ಯ ನಿಮಗೆ ಸಿಕ್ಕಿರುವುದು ಸುದೈವ. ಹೆಚ್ಚು ಕಲಿತವರು ಕೃಷಿಯಲ್ಲಿ ತೊಡಬಾರದೆಂದಿಲ್ಲ. ನಾನು ಕೂಡ ಇಂಜಿನಿಯರ್ ಓದಿ ಪ್ರಗತಿಪರ ಕೃಷಿ ಮಾಡಿ, ಗೆದ್ದಿದ್ದೇನೆ. ಗುರಿ ಇಟ್ಟುಕೊಂಡು ಶಿಕ್ಷಣ ಪಡೆದರೆ ಖಂಡಿತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಮಾತನಾಡಿದರು. ಸಂಸ್ಥೆ ಆಡಳಿತಾಧಿಕಾರಿ ವೈ.ನರೇಂದ್ರನಾಥ, ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆ ಅಧ್ಯಕ್ಷ ಕೆ.ಪಾಪಾರಾವ್ ವಹಿಸಿದ್ದರು.