More

  ಮದ್ಯ ಸೇವಿಸಿ ಹಣಕ್ಕೆ ಪೀಡಿಸುತ್ತಿದ್ದ ಅಕ್ಕನ ಮಗನ ಕೊಂದ ಮಾವ

  ಬೆಂಗಳೂರು: ಮದ್ಯ ಸೇವಿಸಿ ಹಣಕ್ಕೆ ಪೀಡಿಸುತ್ತಿದ್ದ ಅಕ್ಕನ ಮಗನನ್ನು ಮಾವನೇ ಚಾಕುವಿನಿಂದ ಚುಚ್ಚಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

  ದೊಡ್ಡಬಾಣಸವಾಡಿ ನಿವಾಸಿ ಅಜಯ್ ಅಲಿಯಾಸ್ ಟಿನ್ನು(೨೯) ಕೊಲೆಯಾದವನು. ಈ ಸಂಬಂಧ ಮುರುಳಿ(೪೨) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

  ಕೊಲೆಯಾದ ಅಜಯ್‌ಗೆ ತಂದೆ-ತಾಯಿ ಇಲ್ಲ. ಹೀಗಾಗಿ ಚಿಕ್ಕಂದಿನಿಂದ ಅಜ್ಜಿ ಲಕ್ಷ್ಮಮ್ಮ ಹಾಗೂ ಮಾವ ಮುರಳಿ ಜತೆಗೆ ಇದ್ದ. ಕುಡಿತದ ಚಟಕ್ಕೆ ಬಿದ್ದಿದ್ದ ಅಜಯ್ ಮದ್ಯ ಸೇವಿಸಿ ಮನೆಗೆ ಬಂದು ಅಜ್ಜಿ ಲಕ್ಷ್ಮಮ್ಮ ಬಳಿ ೨ ಲಕ್ಷ ರೂ. ಹಣ ಕೊಡುವಂತೆ ಪೀಡಿಸುತ್ತಿದ್ದ. ಅಜ್ಜಿ ಹಣ ಇಲ್ಲ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ. ಶನಿವಾರವೂ ಬೆಳಗ್ಗೆ ಮದ್ಯ ಸೇವಿಸಿ ಮನೆಗೆ ಬಂದು ಹಣ ಕೊಡುವಂತೆ ಅಜ್ಜಿಯನ್ನು ಪೀಡಿಸುತ್ತಿದ್ದ. ಈ ಸಮಯಕ್ಕೆ ಮನೆಗೆ ಬಂದ ಮುರುಳಿ ಬುದ್ಧಿವಾದ ಹೇಳಿದರೂ ಕೇಳದೆ ಆತನೊಂದಿಗೆ ಜಗಳ ತೆಗೆದಿದ್ದಾನೆ. ಇದರಿಂದ ಕೋಪಗೊಂಡ ಮುರುಳಿ ಮನೆಯಲ್ಲೇ ಇದ್ದ ಚಾಕು ತೆಗೆದು ಅಜಯ್‌ಗೆ ಇರಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಅಜಯ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

  ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತನ ಅಜ್ಜಿ ಲಕ್ಷ್ಮಮ್ಮ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುರುಳಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  ಕೊಲೆಯಾದ ಅಜಯ್‌ಗೆ ಅಪರಾಧ ಹಿನ್ನೆಲೆ ಇದ್ದು, ೨೦೧೩ ರಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts