ಬಂಟ್ವಾಳ: ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ಬಾರೆಕ್ಕಿನಡೆ ಎಂಬಲ್ಲಿ ತೋಟದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ ಶೆಟ್ಟಿ(63) ಹಾಗೂ ಅವರ ಪುತ್ರಿ ದಿವ್ಯಶ್ರೀ(20) ಎಂಬುವರು ಮಂಗಳವಾರ ಸಾಯಂಕಾಲ ಮೃತಪಟ್ಟಿದ್ದಾರೆ.
ಸುರಿಯುತ್ತಿದ್ದ ಗಾಳಿ, ಮಳೆಗೆ ಅಡಕೆ ಮರದ ಸೋಗೆ ಹಳೆಯ ವಿದ್ಯುತ್ ತಂತಿ ಮೇಲೆ ಬಿದ್ದು, ಅದು ಕಡಿದು ಬಿದ್ದಿತ್ತು. ಸಾಯಂಕಾಲ ತೋಟಕ್ಕೆ ತೆರಳಿದ್ದ ಗೋಪಾಲ ಶೆಟ್ಟಿ ಅವರು ಗಮನಕ್ಕೆ ಬಾರದೆ ತಂತಿಯನ್ನು ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರನ್ನು ಹುಡುಕಿಕೊಂಡು ತೆರಳಿದ ಪುತ್ರಿ ದಿವ್ಯಶ್ರೀ ಅವರಿಗೂ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ಗೋಪಾಲ ಶೆಟ್ಟಿ ಅವರ ಪತ್ನಿ ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ಗೋಪಾಲ ಶೆಟ್ಟಿ, ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದರು. ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಮೆಸ್ಕಾಂ ಎಇಇ ಪ್ರಶಾಂತ್ ಪೈ, ಉಪ ತಹಶೀಲ್ದಾರ್ ರಾಜೇಶ್ ನಾಯ್ಕ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ, ಎಎಸ್ಐ ಸುಧಾಕರ ತೋನ್ಸೆ, ಸ್ಥಳಕ್ಕೆ ತಾಪಂ ಸದಸ್ಯ ಪ್ರಭಾಕರ ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಬೆಂಗಳೂರಿನಲ್ಲಿರುವ ಶಾಸಕ ರಾಜೇಶ್ ನಾಯ್ಕ ಅವರಿಗೆ ಮಾಹಿತಿ ನೀಡಲಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.