ಕೊಬ್ಬು ಕೆಟ್ಟದ್ದೇ ಒಳ್ಳೆಯದೇ?

ಡಾ. ವೆಂಕಟ್ರಮಣ ಹೆಗಡೆ

ನಮ್ಮ ಮಿದುಳಿನ ಶೇ. 70ರಷ್ಟು ಭಾಗ ಕೊಬ್ಬಿನಿಂದ ಆವೃತವಾಗಿದೆ. ಈ ಫ್ಯಾಟ್ ಅಥವಾ ಕೊಬ್ಬು ನಮ್ಮ ಮಿದುಳಿನ ರಚನೆಯ ಮೂಲ. ಇದು ಮಿದುಳನ್ನು ಕಾಪಾಡುವುದಲ್ಲದೆ ಅದರ ಎಲ್ಲ ಕ್ರಿಯೆಗಳಿಗೆ, ದೇಹದ ಎಲ್ಲ ಪ್ರಕ್ರಿಯೆಗಳಿಗೆ ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಕೊಬ್ಬು ಎಂಬುದು ಕಾಬೋಹೈಡ್ರೇಟ್ ಹಾಗೂ ಪ್ರೋಟೀನ್ ಪೋಷಕಾಂಶಗಳ ಜೊತೆಯಲ್ಲಿ ದೇಹಕ್ಕೆ ಅತ್ಯಗತ್ಯವಾದ, ದೇಹದಲ್ಲಿ ಆವೃತವಾಗಿರುವ ಇನ್ನೊಂದು ಬೃಹತ್ ಪೋಷಕಾಂಶ. ದೇಹ ರಚನೆ ಹಾಗೂ ದೇಹದ ಜೈವಿಕ ಕ್ರಿಯೆಗಳೆರಡಕ್ಕೂ ಬೇಕಾಗಿರುವ ಪೋಷಕಾಂಶ ಕೊಬ್ಬು. ಆದ್ದರಿಂದ ನಮ್ಮ ಆಹಾರಪದ್ಧತಿಯು ಉತ್ತಮ ಕೊಬ್ಬಿನಾಂಶ ಹೊಂದಿರುವುದು ಅಗತ್ಯ.

ಕಾಬೋಹೈಡ್ರೇಟ್ಸ್, ಪ್ರೋಟೀನ್ಸ್, ಕೊಬ್ಬುಗಳು ದೇಹಕ್ಕೆ ಬೇಕಾದ ಬೃಹತ್ ಪೋಷಕಾಂಶಗಳಾಗಿವೆ. ಆದ್ದರಿಂದ ಇದಕ್ಕೆ ಮ್ಯಾಕ್ರೋನ್ಯೂಟ್ರಿಯಂಟ್ಸ್ ಎನ್ನಲಾಗುತ್ತದೆ. ಅದೇ ರೀತಿ ವಿಟಮಿನ್​ಗಳು ಹಾಗೂ ಮಿನರಲ್​ಗಳನ್ನು ಮೈಕ್ರೋನ್ಯೂಟ್ರಿಯಂಟ್ಸ್ ಎಂದು ಕರೆಯಲಾಗುತ್ತದೆ. ಈ ಮ್ಯಾಕ್ರೋನ್ಯೂಟ್ರಿಯಂಟ್ಸ್​ಗಳು ದೇಹದ ಶಕ್ತಿಯ ಆಕರಗಳು. ಧಾನ್ಯಗಳು ಕಾಬೋಹೈಡ್ರೇಟ್ ಅಥವಾ ಗ್ಲುಕೋಸ್​ನ ಮೂಲ. ಈ ಧಾನ್ಯಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು ಇವನ್ನು ಸೇವಿಸುವುದರಿಂದ ನಮಗೆ ಶಕ್ತಿ ಬರುತ್ತದೆ. ಅತಿ ವೇಗವಾಗಿ ದೇಹದಲ್ಲಿ ಜೀರ್ಣವಾಗಿ ತನ್ನಲ್ಲಿನ ಶಕ್ತಿ ಅಂಶವನ್ನು ದೇಹಕ್ಕೆ ಬಿಟ್ಟುಕೊಡುತ್ತದೆ. ಅಕ್ಕಿ, ಗೋಧಿ, ಜೋಳ, ರಾಗಿ ಇತ್ಯಾದಿಗಳು ಕಾಬೋಹೈಡ್ರೇಟ್​ಗಳು.

ನಟ್ಸ್ (ಗೋಡಂಬಿ, ಬಾದಾಮಿ, ಪಿಸ್ತ, ಅಕ್ರೂಟ, ಶೇಂಗಾ), ತೆಂಗಿನಕಾಯಿ, ತುಪ್ಪ ಇತ್ಯಾದಿಗಳು ಕೊಬ್ಬುಗಳಾಗಿವೆ. ಇವೂ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಉತ್ಪಾದಿಸಲು ಸಹಾಯ ಮಾಡುವಂತಹ ಪದಾರ್ಥಗಳಿವು. ಅಂತೆಯೇ ಮೊಳಕೆಕಾಳುಗಳು, ಹಾಲು, ಮೀನು, ಮೊಟ್ಟೆ, ಮಾಂಸ ಇತ್ಯಾದಿಗಳು ಪ್ರೋಟೀನ್​ನ ಆಕರಗಳಾಗಿವೆ. ಈ ಪ್ರೋಟೀನ್​ನಿಂದಲೂ ದೇಹವು ಶಕ್ತಿಯನ್ನು ಪಡೆಯುತ್ತದೆ. ಈ ರೀತಿಯ ಮೂರು ಶಕ್ತಿಯ ಆಕರಗಳಲ್ಲಿ ಅತ್ಯಂತ ಒಳ್ಳೆಯ ಶಕ್ತಿಯ ಮೂಲ ಕೊಬ್ಬು. ಆದರೆ ಜನರು ಸಾಮಾನ್ಯವಾಗಿ ವಿಚಾರ ಮಾಡುವುದೇನೆಂದರೆ ಈ ಕೊಬ್ಬು ಬೊಜ್ಜು, ಕೊಲೆಸ್ಟ್ರಾಲ್​ಗೆ ಕಾರಣವಾಗುತ್ತದೆ. ದೇಹಕ್ಕೆ ಹೆಚ್ಚಿನ ಕ್ಯಾಲೋರಿಯನ್ನು ನೀಡುತ್ತದೆ. ಆದ್ದರಿಂದ ಇದನ್ನು ತಿನ್ನುವುದು ಒಳ್ಳೆಯದಲ್ಲ.

ಈ ಸಂಗತಿ ಸತ್ಯಕ್ಕೆ ದೂರವಾದುದು. ಕೊಬ್ಬು ದೇಹಕ್ಕೆ ಒಳಿತನ್ನು ಮಾಡುವಂಥದ್ದಾಗಿದೆ. ಮೊದಲೇ ಹೇಳಿದಂತೆ ನಮ್ಮ ದೇಹದಲ್ಲಿನ ಹೆಚ್ಚಿನ ಅಂಶ ಕೊಬ್ಬು. ನಮ್ಮ ಮಿದುಳಿನಲ್ಲಿ ಶೇ. 70ರಷ್ಟು ಕೊಬ್ಬು ಇದೆ. ದೇಹಕ್ಕೆ ಕೊಬ್ಬು ಬೇಕು. ಹಾಗಾಗಿ ದೇಹದಲ್ಲಿ ಕೊಬ್ಬಿನ ಉತ್ಪಾದನೆಗೆ ಕಾರಣವಾಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ದೃಷ್ಟಾಂತವೊಂದನ್ನು ಗಮನಿಸೋಣ. ಆಕಳು ಹುಲ್ಲನ್ನು ತಿನ್ನುತ್ತದೆ. ಹುಲ್ಲಿನಲ್ಲಿ ಯಾವುದೇ ಪ್ರಮಾಣದಲ್ಲಿ ಕೊಬ್ಬಿಲ್ಲ. ಹುಲ್ಲನ್ನು ತಿಂದು ಆಕಳು ಹಾಲನ್ನು ಕೊಡುತ್ತದೆ. ಆದರೆ ಹಾಲಿನಲ್ಲಿ ಕೊಬ್ಬು ಇದೆ. ಆದ್ದರಿಂದಲೇ ತುಪ್ಪ, ಬೆಣ್ಣೆ ಇವುಗಳಲ್ಲಿ ಫ್ಯಾಟ್ ಇರುವುದು. ಹಾಗಾದರೆ ಇದು ಹೇಗೆ ಸಾಧ್ಯವಾಯಿತು? ಹುಲ್ಲಿನಲ್ಲಿಲ್ಲದ ಫ್ಯಾಟ್ ಹಾಲಿನಲ್ಲಿ ಬಂದುದಾದರೂ ಹೇಗೆ? ಇಲ್ಲಿದೆ ಜೈವಿಕ ಕ್ರಿಯೆಯ ಶಕ್ತಿ. ಹುಲ್ಲಿನಲ್ಲಿದ್ದ ಪ್ರೋಟೀನ್ ಹಾಗೂ ಗ್ಲುಕೋಸ್​ಗಳು ಹಸುವಿನ ದೇಹದಲ್ಲಿ, ಅದರಲ್ಲಿಯೂ ಲಿವರ್​ನಲ್ಲಿ ಕೊಬ್ಬಿನ ಅಂಶವಾಗಿ ಬದಲಾಗಿದೆ. ಕೊಬ್ಬು ದೇಹದಲ್ಲಿ ಉತ್ಪಾದನೆಯಾಗಿದೆ. ಅರ್ಥಾತ್ ಲಿವರ್​ನಲ್ಲಿ ಗ್ಲುಕೋಸ್ ಹಾಗೂ ಪ್ರೋಟೀನ್​ನಿಂದ ಕೊಬ್ಬು ಉತ್ಪತ್ತಿಯಾಗಿದೆ. ನಾವು ಯಾವ ರೀತಿಯಾದ ಕೊಬ್ಬಿನ ಪದಾರ್ಥ ಅಳವಡಿಸಿಕೊಳ್ಳಬೇಕು, ಯಾವ ಕೊಬ್ಬು ಕೆಟ್ಟದ್ದು ಎಂಬುದರ ಬಗೆಗೆ ಮುಂದಿನ ಅಂಕಣದಲ್ಲಿ ಇನ್ನಷ್ಟು ತಿಳಿದುಕೊಳ್ಳೋಣ.