More

  FasTag ರಿಯಾಲಿಟಿ | ಹೆಸರು ಫಾಸ್ಟ್ ಕೆಲಸ ಸ್ಲೋ..

  ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂರು ಬಾರಿ ಗಡುವು ವಿಸ್ತರಿಸಿ ಕೊನೆಗೆ ಜ. 16ರಿಂದ ಫಾಸ್ಟ್ಯಾಗ್ ಮೂಲಕ ಶುಲ್ಕ ಪಾವತಿ ಕಡ್ಡಾಯಗೊಳಿಸಲಾಗಿದೆ. ಆದರೆ, ಟೋಲ್​ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗುವ ಬದಲು ಹೆಚ್ಚಾಗತೊಡಗಿದೆ. ಈ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗಿಲ್ಲ. ಅದಕ್ಕೇನು ಕಾರಣ? ಫಾಸ್ಟ್ಯಾಗ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಅದರ ಅನುಷ್ಠಾನದಲ್ಲಿ ಆಗಿರುವ ತೊಡಕುಗಳೇನು? ಈ ಕುರಿತ ಮಾಹಿತಿ ಇಲ್ಲಿದೆ.

  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಯಂತೆ ಪ್ರತಿ ವರ್ಷ ಟೋಲ್​ಪ್ಲಾಜಾಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆಯಿಂದ 86 ಸಾವಿರ ಕೋಟಿ ರೂ. ಮೌಲ್ಯದ ಇಂಧನ ವ್ಯರ್ಥವಾಗುತ್ತಿದೆ. ಜತೆಗೆ ಮಾಲಿನ್ಯದ ಪ್ರಮಾಣವೂ ಏರಿಕೆಯಾಗುತ್ತಿದೆ. ಅದರ ನಿಯಂತ್ರಣಕ್ಕಾಗಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್​ಎಫ್​ಐಡಿ) ಮೂಲಕ ಟೋಲ್ ಶುಲ್ಕ ಸಂಗ್ರಹಿಸುವ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.

  ಟೋಲ್​ಪ್ಲಾಜಾಗಳಲ್ಲಿ ವಾಹನಗಳು ನಿಲ್ಲದೆ, ಸರಾಗವಾಗಿ ಚಲಿಸುವಂತೆ ಮಾಡುವುದು ಫಾಸ್ಟ್ಯಾಗ್​ನ ಉದ್ದೇಶ. ಹೆಸರಿನಲ್ಲಿ ಫಾಸ್ಟ್ ಎಂಬ ಪದವಿದ್ದರೂ ಇದರ ಅನುಷ್ಠಾನ ಮಾತ್ರ ಸ್ಲೋ ಆಗಿರುವುದು ವಿಪರ್ಯಾಸವಾದರೂ ಸತ್ಯ. ದೇಶದ ಯಾವುದೇ ಭಾಗದಲ್ಲಿಯೂ ಈವರೆಗೆ ಪೂರ್ಣಪ್ರಮಾಣದಲ್ಲಿ ಫಾಸ್ಟ್ಯಾಗ್ ಮೂಲಕ ಟೋಲ್​ಶುಲ್ಕ ಪಾವತಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿಲ್ಲ. ಕೆಲವೆಡೆ ಜಾರಿಯಾಗಿದ್ದರೂ, ಫಾಸ್ಟ್ಯಾಗ್ ಪಥದಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಚಾಲಕರು ಸಮಸ್ಯೆ ಅನುಭವಿಸುವಂತಾಗಿದೆ.

  ದೇಶದಲ್ಲಿ ಒಟ್ಟು 1.4 ಲಕ್ಷ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಇದೆ. ಅದರಲ್ಲಿ ಸದ್ಯ 24,996 ಕಿ.ಮೀ. ಹೆದ್ದಾರಿ ಟೋಲ್ ವ್ಯಾಪ್ತಿಗೆ ಒಳಪಟ್ಟಿದೆ. ಒಟ್ಟು 543 ಟೋಲ್​ಗಳಿವೆ. ಅದರಲ್ಲಿ ರಾಜ್ಯ ವ್ಯಾಪ್ತಿಯಲ್ಲಿನ 3,700 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 36 ಟೋಲ್​ಪ್ಲಾಜಾಗಳಿವೆ.

  ದೇಶದ ಬಹುತೇಕ ಎಲ್ಲ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಮೂಲಕ ಶುಲ್ಕ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಟೋಲ್ ಶುಲ್ಕ ಪಾವತಿಸುವ ಬೂತ್​ಗಳ ಬಳಿ ಸ್ಕ್ಯಾನರ್ ಅಳವಡಿಸಲಾಗಿದೆ. ಆ ಸ್ಕ್ಯಾನರ್ ​ಗಳು ಫಾಸ್ಟ್ಯಾಗ್ ಸ್ಟಿಕ್ಕರ್​ಗಳಲ್ಲಿನ ಬಾರ್​ಕೋಡ್​ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಟೋಲ್​ಶುಲ್ಕ ವಸೂಲಿ ಮಾಡುತ್ತವೆ.

  ಸ್ಕ್ಯಾನರ್​ಗಳ ಸಮಸ್ಯೆ: ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಟೋಲ್​ಪ್ಲಾಜಾಗಳಲ್ಲಿನ ಸ್ಕ್ಯಾನರ್ ​ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅದರಿಂದ ಕೆಲ ಟೋಲ್​ಪ್ಲಾಜಾಗಳಲ್ಲಿ ನಗದು ರೂಪದಲ್ಲಿ ಶುಲ್ಕ ವಸೂಲಿ ಮಾಡುವುದು ಅನಿವಾರ್ಯವಾಗುತ್ತಿದೆ. ಇದು ಸಂಚಾರ ದಟ್ಟಣೆ ಹೆಚ್ಚಲು ಕಾರಣವಾಗಿದೆ.

  ಜತೆಗೆ ಫಾಸ್ಟ್ಯಾಗ್ ಬಾರ್​ಕೋಡ್ ಸ್ಕ್ಯಾನ್ ಮಾಡಲು ಕನಿಷ್ಠ 15ರಿಂದ 20 ಸೆಕೆಂಡ್ ಸಮಯ ಬೇಕಾಗುತ್ತದೆ. ಹಾಗಾಗಿ ಒಂದರ ಹಿಂದೊಂದು ವಾಹನ ಕಾಯುತ್ತ ನಿಲ್ಲಬೇಕಾಗುತ್ತದೆ. ಅಲ್ಲದೆ, ಫಾಸ್ಟ್ಯಾಗ್ ಅಕೌಂಟ್​ನಲ್ಲಿ ಹಣವಿಲ್ಲದಿದ್ದರೆ, ಆಗಲೂ ವಾಹನ ಚಾಲಕರಿಂದ ನಗದು ಪಡೆಯಲಾಗುತ್ತದೆ. ಅದಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ.

  ಸದ್ಯ ಫಾಸ್ಟ್ಯಾಗ್ ಬಾರ್​ಕೋಡ್ ಸ್ಕಾ್ಯನ್ ಮಾಡಲು ವಾಹನಗಳನ್ನು ನಿಲ್ಲಿಸಲೇಬೇಕು. ಅದರ ಬದಲು ವಾಹನ ಚಲಿಸುತ್ತಿರುವಾಗಲೇ ಅದನ್ನು ಸ್ಕ್ಯಾನ್ ಮಾಡಲು ಅವಕಾಶವಿರಬೇಕು. ಹಾಗಾದಾಗ ವಾಹನ ನಿಲ್ಲಿಸದೆಯೇ ಫಾಸ್ಟ್ಯಾಗ್​ನಿಂದ ಶುಲ್ಕ ವಸೂಲಿ ಮಾಡಬಹುದು.

  ನೂರಕ್ಕೆ ನೂರರಷ್ಟು ಇನ್ನೂ ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ. ಎಲ್ಲ ವಾಹನಗಳೂ ಅಳವಡಿಸಿಕೊಳ್ಳುವಂತೆ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಫಲವಾಗಿಲ್ಲ. ಫಾಸ್ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಪಥದಲ್ಲಿ ಸಂಚರಿಸಿ, ಸಂಚಾರ ದಟ್ಟಣೆ ಉಂಟು ಮಾಡುತ್ತಿವೆ.

  ಕಾಯುವ ಸಮಯ ಹೆಚ್ಚಳ: ಟೋಲ್​ಪ್ಲಾಜಾಗಳಲ್ಲಿ ವಾಹನಗಳ ಕಾಯುವ ಸಮಯ ತಿಳಿಯುವ ಸಲುವಾಗಿ ದೇಶದ 488 ಪ್ಲಾಜಾಗಳಲ್ಲಿ ಟ್ರಾಫಿಕ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಅದರ ಪ್ರಕಾರ, ನ. 15ರಿಂದ ಡಿ. 14ರವರೆಗೆ ಸರಾಸರಿ ಕಾಯುವ ಸಮಯ 7.44 ನಿಮಿಷಗಳಾಗಿದೆ. ಅದೇ ಡಿ. 15ರಿಂದ ಜ. 14ರವರೆಗೆ ಕಾಯುವ ಸಮಯ ಸರಾಸರಿ 9.57 ನಿಮಿಷಕ್ಕೆ ಏರಿಕೆಯಾಗಿದೆ. ಅದರಲ್ಲೂ ಡಿ. 15ರಂದು ಒಂದೇ ದಿನ ಸರಾಸರಿ 10.04 ನಿಮಿಷಕ್ಕೆ ಏರಿಕೆಯಾಗಿತ್ತು. ಅದರ ಜತೆಗೆ ವಾರ್ಷಿಕ ಕಾಯುವ ಸಮಯದಲ್ಲೂ ಹೆಚ್ಚಳವಾಗಿದೆ. 2018ರಲ್ಲಿ 8.146 ನಿಮಿಷ ಇದ್ದದ್ದು 2019ರ ನವೆಂಬರ್ ಅಂತ್ಯದವರೆಗೆ ಸರಾಸರಿ 9.12 ನಿಮಿಷಕ್ಕೆ ಏರಿಕೆಯಾಗಿದೆ.

  ಫಾಸ್ಟ್ಯಾಗ್ ಪೂರೈಕೆಯ ಪ್ರಾಬ್ಲಂ: ದೇಶದಲ್ಲಿ ಈವರೆಗೆ ಶೇ. 68 ವಾಹನಗಳು ಮಾತ್ರ ಫಾಸ್ಟ್ಯಾಗ್ ಅಳವಡಿಸಿಕೊಂಡಿವೆ. ಅದರ ಜತೆಗೆ ತುರ್ತು ಮತ್ತು ವಿವಿಐಪಿ ವಾಹನಗಳು ಶೇ. 15ರಷ್ಟಿವೆ. ಅವುಗಳನ್ನು ಹೊರತುಪಡಿಸಿ ಇನ್ನೂ ಶೇ. 17ರಷ್ಟು ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಳ್ಳಬೇಕಿದೆ. ಅದರಲ್ಲಿ ಬಹುತೇಕ ವಾಹನ ಮಾಲೀಕರಿಗೆ ಈವರೆಗೆ ಸ್ಟಿಕ್ಕರ್ ಪೂರೈಕೆಯಾಗಿಲ್ಲ. ಅದರಲ್ಲೂ ಆನ್​ಲೈನ್ ಮೂಲಕ ಖರೀದಿ ಮಾಡಿದವರಿಗೆ, ಫಾಸ್ಟ್ಯಾಗ್ ಸ್ಟಿಕ್ಕರ್ ಪೂರೈಕೆ ವಿಳಂಬವಾಗುತ್ತಿದೆ. ಅದರಿಂದ ಫಾಸ್ಟ್ಯಾಗ್ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರದೆ, ನಗದು ರೂಪದಲ್ಲಿ ಟೋಲ್​ಶುಲ್ಕ ಪಾವತಿ ಜಾರಿಯಲ್ಲಿರುವಂತಾಗಿದೆ.

  3 ಬಾರಿ ಗಡುವು ವಿಸ್ತರಣೆ: ಈ ಹಿಂದೆ ಡಿ. 1ರಿಂದ ಫಾಸ್ಟ್ಯಾಗ್ ಜಾರಿಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು. ಆದರೆ, ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಗಡುವನ್ನು ಡಿ. 31ರವರೆಗೆ ವಿಸ್ತರಿಸಲಾಯಿತು. ಆನಂತರವೂ ಪೂರ್ಣಪ್ರಮಾಣದಲ್ಲಿ ವಾಹನ ಮಾಲೀಕರು ಫಾಸ್ಟ್ಯಾಗ್ ಅಳವಡಿಸಿಕೊಂಡಿರಲಿಲ್ಲ. ಹೀಗಾಗಿ 2020ರ ಜ. 15ರವರೆಗೆ ಟೋಲ್​ಪ್ಲಾಜಾಗಳಲ್ಲಿನ ಸಂಚಾರ ಪಥಗಳಲ್ಲಿ ಶೇ. 25 ನಗದು ರೂಪದಲ್ಲಿ ಶುಲ್ಕ ಪಾವತಿಗೆ ಮೀಸಲಿರಿಸಿ, ಉಳಿದ ಶೇ. 75 ಪಥಗಳಲ್ಲಿ ಫಾಸ್ಟ್ಯಾಗ್ ವಾಹನಗಳ ಸಂಚಾರಕ್ಕೆ ಸ್ಥಳ ನಿಗದಿ ಮಾಡಲಾಯಿತು. ಇದೀಗ ಮೂರನೇ ಗಡುವು ಮುಗಿದ ನಂತರ ಅಂದರೆ, ಜ. 16ರಿಂದ ಫಾಸ್ಟ್ಯಾಗ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.

  1 ಲಕ್ಷ ಕೋಟಿ ರೂ. ಆದಾಯ ಗುರಿ: 2016-17ರಿಂದ 2018-19ರವರೆಗೆ ಟೋಲ್​ಶುಲ್ಕದ ಮೂಲಕ ಕೇಂದ್ರ ಸರ್ಕಾರಕ್ಕೆ 24,755.54 ಕೋಟಿ ರೂ. ಆದಾಯ ಬಂದಿದೆ. ಆ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ 2019-20ನೇ ಸಾಲಿನಲ್ಲಿ 30 ಸಾವಿರ ಕೋಟಿ ರೂ. ಟೋಲ್​ಶುಲ್ಕ ಸಂಗ್ರಹಿಸುವ ಗುರಿ ಹೊಂದಿದೆ. ಅಲ್ಲದೆ, ಟೋಲ್ ಶುಲ್ಕ ವಸೂಲಿಯಿಂದ ಮುಂದಿನ 5 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಆದಾಯ ಸಂಗ್ರಹಿಸುವ ಉದ್ದೇಶವನ್ನೂ ಹೊಂದಿದೆ. ಅದಕ್ಕೆ ಪೂರಕವಾಗಿ ಸದ್ಯ 24,996 ಕಿ.ಮೀ. ಟೋಲ್ ವ್ಯಾಪ್ತಿಯಲ್ಲಿದ್ದು, 5 ವರ್ಷದಲ್ಲಿ 75 ಸಾವಿರ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ವ್ಯಾಪ್ತಿಗೆ ತರಲಾಗುತ್ತದೆ.

  ಜಿಎಸ್​ಟಿ ವ್ಯಾಪ್ತಿಗೆ ಟೋಲ್ ಪಾವತಿ: ಟೋಲ್ ಶುಲ್ಕ ವಸೂಲಿ ಕುರಿತಂತೆ ಈವರೆಗೆ ಸರಿಯಾದ ಲೆಕ್ಕ ಸಿಗುತ್ತಿರಲಿಲ್ಲ. ನಗದು ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದುದರಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆ ಬಗ್ಗೆ ಸಮರ್ಪಕ ಮಾಹಿತಿ ಇರುತ್ತಿರಲಿಲ್ಲ. ಫಾಸ್ಟ್ಯಾಗ್ ವ್ಯವಸ್ಥೆಯಲ್ಲಿ ಪ್ರತಿ ಪಾವತಿಗೆ ಇ-ಬಿಲ್ ನೀಡಲಾಗುತ್ತದೆ. ಅದರಿಂದ ಶುಲ್ಕ ವಸೂಲಿಯಲ್ಲಿ ಪಾರದರ್ಶಕತೆ ಕಾಪಾಡಲು ಸಾಧ್ಯ. ಅದರ ಜತೆಗೆ ಟೋಲ್​ಶುಲ್ಕ ವಸೂಲಿಯನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಕೇಂದ್ರ ನಿರ್ಧರಿಸಿದೆ. ಇ-ಬಿಲ್​ನಲ್ಲಿ ಜಿಎಸ್​ಟಿ ಮೊತ್ತವನ್ನು ನಮೂದಿಸಲಾಗುತ್ತದೆ.

  ಟೋಲ್ ಸಂಗ್ರಹದಲ್ಲಿ ಹೆಚ್ಚಳ: ಫಾಸ್ಟ್ಯಾಗ್ ಕಡ್ಡಾಯ ಆದೇಶ ಹೊರಬಿದ್ದ ನಂತರ ಟೋಲ್ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಫಾಸ್ಟ್ಯಾಗ್ ಮೂಲಕ 702.86 ಕೋಟಿ ರೂ. ಮತ್ತು ನವೆಂಬರ್​ನಲ್ಲಿ 773.95 ಕೋಟಿ ರೂ. ವಸೂಲಿಯಾಗಿತ್ತು. ಡಿಸೆಂಬರ್​ನಲ್ಲಿ 1,256.84 ಕೋಟಿ ರೂ. ಸಂಗ್ರಹವಾಗಿದೆ. ಜ. 12ರಂದು ಒಂದೇ ದಿನ 86 ಕೋಟಿ ರೂ. ಫಾಸ್ಟ್ಯಾಗ್ ಮೂಲಕ ಪಾವತಿಯಾಗಿದೆ.

  ಸ್ಕ್ಯಾನ್ ಆಗದಿದ್ದರೆ ಶುಲ್ಕ ಇಲ್ಲ: ಫಾಸ್ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ವಾಹನ ಮಾಲೀಕರು ಟೋಲ್​ಪ್ಲಾಜಾಗಳಲ್ಲಿ ದುಪ್ಪಟ್ಟು ಟೋಲ್​ಶುಲ್ಕ ಪಾವತಿಸಬೇಕು. ಒಂದು ವೇಳೆ ಪ್ಲಾಜಾದ ಸ್ಕ್ಯಾನರ್ ​ನಲ್ಲಿ ಸಮಸ್ಯೆಯಿದ್ದರೆ, ಫಾಸ್ಟ್ಯಾಗ್ ಇರುವ ವಾಹನ ಮಾಲೀಕರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಬೇಕು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ.

  ಗಿರೀಶ್ ಗರಗ ಬೆಂಗಳೂರು

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts