ಬೆಂಗಳೂರು: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್ಪ್ಲಾಜಾಗಳಲ್ಲಿ ಫಾಸ್ಟಾ್ಯಗ್ ಮೂಲಕ ಟೋಲ್ಶುಲ್ಕ ಪಾವತಿ ವ್ಯವಸ್ಥೆ ಹೊಂದಲು ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಜ.15ಕ್ಕೆ ಅಂತ್ಯಗೊಳ್ಳಲಿದೆ. ಇದುವರೆಗೆ ಶೇ.60 ವಾಹನಗಳು ಮಾತ್ರ ಫಾಸ್ಟಾ್ಯಗ್ ಸ್ಟಿಕರ್ ವ್ಯವಸ್ಥೆ ಹೊಂದಿವೆ. ಶೇ.40 ವಾಹನಗಳು ಇನ್ನಷ್ಟೇ ವ್ಯವಸ್ಥೆ ಹೊಂದಬೇಕಿದೆ. ಹೀಗಾಗಿ ಜ.16ರಿಂದ ನಗದು ರೂಪದಲ್ಲಿ ಟೋಲ್ಶುಲ್ಕ ಪಾವತಿಗೆ ಟೋಲ್ಪ್ಲಾಜಾಗಳಲ್ಲಿ ಒಂದು ಪಥ ಮೀಸಲಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಟೋಲ್ಪ್ಲಾಜಾಗಳಲ್ಲಿನ ಸಂಚಾರದಟ್ಟಣೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಪ್ರತಿ ವಾಹನಗಳು ಫಾಸ್ಟಾ್ಯಗ್ ಮೂಲಕವೇ ಟೋಲ್ಶುಲ್ಕ ಪಾವತಿಸುವಂತೆ ಆದೇಶಿಸಿದೆ. ಈ ಹಿಂದೆ ಫಾಸ್ಟಾ್ಯಗ್ ಸ್ಟಿಕರ್ ಅಳವಡಿಕೆಗೆ ಡಿ.1 ಅಂತಿಮ ಗಡುವು ನಿಗದಿಯಾಗಿತ್ತು. ಆದರೆ, ಗಡುವು ವಿಸ್ತರಣೆಗೆ ದೇಶಾದ್ಯಂತ ಆಗ್ರಹ ಕೇಳಿಬಂದಿದ್ದರಿಂದ, ಡಿ.15ರವರೆಗೆ ವಿಸ್ತರಿಸಲಾಗಿತ್ತು. ಈ ಗಡುವಿನೊಳಗೂ ಶೇ.100 ವಾಹನಗಳು ಫಾಸ್ಟಾ್ಯಗ್ ಅಳವಡಿಕೆಗೆ ವಿಫಲವಾಗಿದ್ದವು. ಹೀಗಾಗಿ ಮತ್ತೊಮ್ಮೆ ಜ.15ರವರೆಗೆ ಗಡುವು ವಿಸ್ತರಿಸಲಾಗಿದೆ. ಟೋಲ್ಪ್ಲಾಜಾಗಳಲ್ಲಿನ ಶುಲ್ಕ ವಸೂಲಿ ಪಥಗಳಲ್ಲಿ ಶೇ.75 ಫಾಸ್ಟಾ್ಯಗ್ ಮತ್ತು ಶೇ.25 ನಗದು ರೂಪದಲ್ಲಿ ಶುಲ್ಕ ವಸೂಲಿಗೆ ಕೇಂದ್ರ ಸೂಚಿಸಿತ್ತು.
ಜ.16ರಿಂದ ದುಪ್ಪಟ್ಟು ಶುಲ್ಕ?: ಹಿಂದಿನ ಆದೇಶದಂತೆ ಫಾಸ್ಟಾ್ಯಗ್ ಸ್ಟಿಕರ್ ಅಳವಡಿಸಿ ಕೊಳ್ಳದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಮೂರು ಬಾರಿ ಗಡುವು ವಿಸ್ತರಿಸಿದರೂ ವಾಹನ ಮಾಲೀಕರು ಫಾಸ್ಟಾ್ಯಗ್ ಅಳವಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಜ.15ಕ್ಕೆ ಗಡುವು ಮುಗಿಯಲಿದ್ದು, 16ರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡುವ ಸಾಧ್ಯತೆಗಳಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆ ಕುರಿತು ಇನ್ನೂ ಸ್ಪಷ್ಟನೆ ನೀಡಿಲ್ಲ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಅಗತ್ಯವಾದಲ್ಲಿ ಪ್ರತ್ಯೇಕ ಪಥ ಮೀಸಲು
ವಾಹನಗಳಿಗೆ ಫಾಸ್ಟಾ್ಯಗ್ ಸ್ಟಿಕರ್ ಅಳವಡಿಕೆ ನಿರೀಕ್ಷಿತ ಮಟ್ಟಕ್ಕೆ ಮುಟ್ಟಿಲ್ಲ. ಆದರೂ ಇನ್ನೈದು ದಿನಗಳಲ್ಲಿ ಫಾಸ್ಟಾ್ಯಗ್ವುಳ್ಳ ವಾಹನಗಳ ಸಂಖ್ಯೆ ಶೇ.80ಕ್ಕೆ ಏರಿಕೆಯಾಗಲಿದೆ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಫಾಸ್ಟ್ಯಾಗ್ ಇರದ ವಾಹನಗಳ ಸಂಚಾರಕ್ಕೆ ಟೋಲ್ಪ್ಲಾಜಾಗಳಲ್ಲಿ ಒಂದು ಪಥ ಮೀಸಲಿಡಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.
ವಾಹನ ಮಾಲೀಕರಿಗಿದ್ದ ಸಮಸ್ಯೆಗಳ ನಿವಾರಣೆ
ಮೂರು ಬಾರಿ ಗಡುವು ವಿಸ್ತರಿಸಿದರೂ ವಾಹನ ಮಾಲೀಕರು ಫಾಸ್ಟಾ್ಯಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಡಿ.1ರವರೆಗೆ ಶೇ.40 ವಾಹನ ಮಾಲೀಕರು ಫಾಸ್ಟಾ್ಯಗ್ ಸ್ಟಿಕರ್ ಖರೀದಿಸಿದ್ದರು. ಸ್ಟಿಕರ್ಗಳ ಕೊರತೆ, ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳಿಂದ ಸ್ಟಿಕ್ಕರ್ ಪೂರೈಕೆಯಲ್ಲಿನ ವಿಳಂಬ ಸೇರಿ ಇನ್ನಿತರ ಕಾರಣಗಳಿಂದಾಗಿ ಶೇ.100 ವಾಹನಗಳು ಸ್ಟಿಕರ್ ಖರೀದಿ ಮಾಡಲಾಗಿರಲಿಲ್ಲ. ಆದರೀಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದೆ. ಆದರೂ ಸ್ಟಿಕರ್ವುಳ್ಳ ವಾಹನಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗಿಲ್ಲ.